ಚನ್ನಪಟ್ಟಣ: ನೀವು ಮತ ಹಾಕಿದ್ದೂ ಆಯಿತು, ಅವರು ಊರು ಬಿಟ್ಟಿದ್ದೂ ಆಯಿತು. ಚನ್ನಪಟ್ಟಣದಲ್ಲಿ ಏನಿದ್ದರೂ ನಮ್ಮ ಹಾಗೂ ನಿಮ್ಮ ಸಂಬಂಧ. ನಾನು ಹುಟ್ಟಿದ್ದು ಇಲ್ಲಿ, ಸಾಯುವುದೂ ಇಲ್ಲಿಯೇ" ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿವಿದರು.
ಪಟ್ಟಣದ ಹಳೇ ತಾಲ್ಲೂಕು ಕಚೇರಿ ಮೈದಾನದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಆಯ್ಕೆಯಾಗಿರುವ ಪಟ್ಲು ಗ್ರಾಮದ ಫಲಾನುಭವಿಗಳಿಗೆ ದಾಖಲೆ ಪತ್ರಗಳನ್ನು ವಿತರಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು "ನಾವು ಕೊಟ್ಟಿರುವ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಯೋಜನೆಗಳಿಗೆ ಬೆಲೆ ಬರಬೇಕು. ಅನ್ನ ಊಟ ಮಾಡಿದವರು ಎಂದೂ ಇಲ್ಲ ಎಂದು ಹೇಳುವುದಿಲ್ಲ. ನಮ್ಮ, ನಿಮ್ಮ ಸಂಬಂಧ ಭಕ್ತ ಭಗವಂತನಿಗೆ ಇರುವ ಸಂಬಂಧ. ಇದನ್ನು ಉಳಿಸಿಕೊಂಡು ಹೋಗೋಣ" ಎಂದು ಹೇಳಿದರು.
ನಾವು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಮುಖ್ಯಮಂತ್ರಿ ಆಗಿದ್ದಾಗ ಕುಮಾರಣ್ಣ, ಸಚಿವನಾಗಿದ್ದಾಗ ಯೋಗೇಶ್ವರ್ ಏಕೆ ಮಾಡಲಿಲ್ಲ? ನಾನು ನಿಮ್ಮ ಕೈ ಬಿಡುವವನಲ್ಲ. ಚನ್ನಪಟ್ಟಣ ಮಾದರಿಯಲ್ಲಿ ಇಡೀ ರಾಜ್ಯದಲ್ಲಿ ಕೆಲಸ ಮಾಡಲಾಗುವುದು ಎಂದು ಹೇಳಿದರು.
ನೂತನ ಚನ್ನಪಟ್ಟಣ ನಮ್ಮ ಕನಸು. ನಾವುಗಳು ಈಗ ಬೆಂಗಳೂರು ದಕ್ಷಿಣ ಜಿಲ್ಲೆಯವರು. ಅಭಿವೃದ್ಧಿಯ ಹೊಸ್ತಿಲಿನಲ್ಲಿ ನಾವಿದ್ದೇವೆ. ನಿಮ್ಮ ಹಾಗೂ ಜಿಲ್ಲೆಯ ಅಭಿವೃದ್ಧಿ ಮಾಡಿಯೇ ತೀರುತ್ತೇನೆ. ಅರ್ಜಿ ಹಾಕಿರುವ ಎಲ್ಲರಿಗೂ ನಿವೇಶನ ನೀಡಲಾಗುವುದು. ಸರ್ಕಾರಿ ಜಮೀನು ಸಿಗದಿದ್ದರೂ ಪರವಾಗಿಲ್ಲ, ಖಾಸಗಿ ಜಮೀನು ಖರೀದಿ ಮಾಡಿ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಇಡೀ ಸರ್ಕಾರ ಚನ್ನಪಟ್ಟಣದ ಬದಲಾವಣೆಗೆ ಪಣ ತೊಟ್ಟಿದೆ. ನಾವು ಚನ್ನಪಟ್ಟಣಕ್ಕೆ ಅಭಿವೃದ್ಧಿಗಾಗಿ ಬಂದಿದ್ದೇವೆ ಹೊರತು ರಾಜಕೀಯ ಮಾಡಲು ಬಂದಿಲ್ಲ. ಜನರ ಬದುಕಿನಲ್ಲಿ ಬದಲಾವಣೆ ಮಾಡಬೇಕು ಎಂಬುದು ನಮ್ಮ ಸಂಕಲ್ಪ. ಈ ಹಿಂದೆ ನಮಗೆ ಈ ಅವಕಾಶ ಸಿಕ್ಕಿರಲಿಲ್ಲ. ಈಗ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಚನ್ನಪಟ್ಟಣದಲ್ಲಿ ಹೇಳಿದರು.
ಅರ್ಜಿ ಸಲ್ಲಿಸಿದ ಎಲ್ಲರ ಸಮಸ್ಯೆಗಳನ್ನು ಬಗೆಹರಿಸಲಾಗುವುದೇ ಎನ್ನುವ ಪ್ರಶ್ನೆಗೆ "ಎಲ್ಲರ ಸಮಸ್ಯೆಗಳನ್ನು ಹಂತ, ಹಂತವಾಗಿ ಬಗೆಹರಿಸಲಾಗುತ್ತಿದೆ. ವಸತಿ ಸಮಸ್ಯೆ ಪರಿಹಾರ ಮಾಡಲಾಗುತ್ತಿದೆ" ಎಂದರು. ಚನ್ನಪಟ್ಟಣ ಸ್ಥಳೀಯ ಸಂಸ್ಥೆಯಲ್ಲಿ ಆಪರೇಷನ್ ಕಾಂಗ್ರೆಸ್ ಮಾಡಲಾಗುತ್ತಿದೆಯೇ ಎಂದು ಕೇಳಿದಾಗ "ಇದರ ಬಗ್ಗೆ ಆನಂತರ ಮಾತನಾಡುತ್ತೇನೆ" ಎಂದರು.
Advertisement