ಬೆಳಗಾವಿ: ಬಿಜೆಪಿಯಲ್ಲಿ ತೆರೆಮರೆಯಲ್ಲಿ ಭಿನ್ನಮತ ರಾಜಕೀಯ ಮುಂದುವರಿದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪರ ಬಣ ಹಾಗೂ ವಿರೋಧಿಗಳ ಬಣ ಎನ್ನುವಂತೆ ಬಿಜೆಪಿಯಲ್ಲಿ ಚರ್ಚೆ ನಡೆದಿದೆ. ಇದೀಗ ಈ ಭಿನ್ನಮತ ರಾಜಕೀಯ ಬಹಿರಂಗವಾಗಿಯೂ ಸಾಕಷ್ಟು ಸದ್ದು ಮಾಡುತ್ತಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮತ್ತೊಮ್ಮೆ ಬಿಜೆಪಿ ಮುಖಂಡ ರಾಜುಗೌಡ ಅವರ ಬಗ್ಗೆ ಗುಡುಗಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಶ್ವರಪ್ಪ ಮನೆಯಲ್ಲಿ ಚರ್ಚೆ ಆಗಿದ್ದೇನು ಅಂತ ವಿಜಯೇಂದ್ರಗೆ ಗೊತ್ತಾದ್ರೆ, ಆತನೇ ರಾಜೂಗೌಡಗೆ ಒದೀತಾನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಸೆ. 27ರಂದು ಕೆ ಎಸ್ ಈಶ್ವರಪ್ಪ ಮನೆಯಲ್ಲಿ ನಡೆದ ಚರ್ಚೆಯೇ ಬೇರೆ, ಹೊರಗೆ ಬಂದಾದ ನಂತರ ರಾಜೂಗೌಡ ಮಾಧ್ಯಮಗಳೊಂದಿಗೆ ಮಾತನಾಡಿದ್ದೇ ಬೇರೆ ಎಂದು ಅವರು ಹೇಳಿದ್ದಾರೆ. ಸಭೆಯ ಅಸಲಿ ವಿಚಾರ ಗೊತ್ತಾದರೆ, ರಾಜೂಗೌಡ ಮಾಧ್ಯಮಗಳ ಮುಂದೆ ಹೇಳಿದ್ದು ಬೇರೆ ಅಂತ ವಿಜಯೇಂದ್ರಗೆ ಗೊತ್ತಾಗುತ್ತದೆ. ಆಗ, ಅವರೇ (ವಿಜಯೇಂದ್ರ) ರಾಜೂಗೌಡಗೆ ಒದೀತಾರೆ ಆ ಥರ ಸುಳ್ಳು ಸುಳ್ಳಾಗಿ ಹೇಳಿಕೆ ನೀಡೋದು ಸರಿಯಲ್ಲ ಎಂದು ಜಾರಕಿಹೊಳಿ ತಿಳಿಸಿದ್ದಾರೆ.
ಈಶ್ವರಪ್ಪ ಮನೆಯಲ್ಲಿ ಯತ್ನಾಳ್ ಹೋಗಿ ಮಾತುಕತೆ ನಡೆಸಿದ್ದು ನಿಜ. ಆದರೆ, ಅಲ್ಲಿ ಚರ್ಚೆ ನಡೆದಿದ್ದು ಮೀಸಲಾತಿ ಬಗ್ಗೆ. ಅದರ ಜೊತೆಯಲ್ಲೇ ಕೆಲವು ವಿಚಾರಗಳ ಬಗ್ಗೆ ಗಹನವಾಗಿ ಚರ್ಚೆಗಳಾದವು. ಆ ಸಭೆಗೆ ನನ್ನನ್ನೂ ಕರೆದಿದ್ದರು. ನಾನೂ ಹೋಗಿದ್ದೆ. ನಾನು ಸಭೆಗೆ ಹೋಗುವ ಮುನ್ನವೇ ರಾಜೂ ಗೌಡ ಅಲ್ಲಿದ್ದರು. ಆದರೆ, ನನಗೆ ಅಲ್ಲಿ ಒಳಗೆ ರಾಜೂಗೌಡ ಇದ್ದಾರೆ ಅಂತ ಗೊತ್ತಿರಲಿಲ್ಲ. ಗೊತ್ತಿದ್ದರೆ ಸಭೆಗೆ ಹೋಗುತ್ತಲೇ ಇರಲಿಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ನಾನು ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿ ಕೆ.ಎಸ್.ಈಶ್ವರಪ್ಪ ಅವರನ್ನು ಮತ್ತೆ ಬಿಜೆಪಿಗೆ ಕರೆತರಲು ಯತ್ನಿಸುತ್ತಿದ್ದೇವೆ ಎಂಬುದು ಸುಳ್ಳು. ಈಶ್ವರಪ್ಪ ಅವರನ್ನು ಪಕ್ಷದಿಂದ ಹೊರಹಾಕಿದ್ದು ರಾಷ್ಟ್ರೀಯ ನಾಯಕರು. ಸೇರಿಸಿಕೊಳ್ಳಬೇಕಾದವರೂ ಅವರೇ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಈಶ್ವರಪ್ಪ ಅವರ ಬೆಂಗಳೂರು ನಿವಾಸದಲ್ಲಿ ನಾವೆಲ್ಲ ಸೇರಿದ್ದು ನಿಜ. ಆದರೆ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಮತ್ತು ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿಯ ಬೇಡಿಕೆ ಕುರಿತು ಚರ್ಚಿಸಿದ್ದೇವೆ. ಆ ಸಭೆಯಲ್ಲಿದ್ದ ಶಾಸಕ ರಾಜು ಗೌಡ ಅವರ ಹೇಳಿಕೆ ಬರೀ ಸುಳ್ಳು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಅದು ಬಿಜೆಪಿಯ ಭಿನ್ನಮತೀಯರ ಸಭೆಯೂ ಅಲ್ಲ. ಬಿಜೆಪಿ ಅಥವಾ ಕಾಂಗ್ರೆಸ್ ಕುರಿತು ರಾಜಕೀಯ ಚರ್ಚೆಯೂ ಆಗಿಲ್ಲ. ಕಾಂಗ್ರೆಸ್ ಸರ್ಕಾರ ಬೀಳಿಸುವಂಥ ಯಾವುದೇ ಪ್ರಯತ್ನ ಕೂಡ ಮಾಡುತ್ತಿಲ್ಲ. ಬದಲಾಗಿ, ಮುಂದಿನ ಚುನಾವಣೆಯಲ್ಲಿ ಹೇಗೆ ಬಹುಮತ ಪಡೆಯಬೇಕು ಎಂಬ ಬಗ್ಗೆ ಚಿಂತಿಸುತ್ತಿದ್ದೇವೆ. ಬಿಜೆಪಿ ರಾಜ್ಯ ಘಟದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಏನು ಮಾಡುತ್ತಿದ್ದಾರೆ ಎಂಬುದು ನಮಗೆ ಬೇಕಿಲ್ಲ. ನಮ್ಮ ಪ್ರಯತ್ನದ ಬಗ್ಗೆ ಮಾತ್ರ ಮಾತನಾಡುತ್ತೇವೆ’ ಎಂದೂ ಹೇಳಿದರು.
Advertisement