ನಿರ್ಮಲಾ ಸೀತಾರಾಮನ್ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತ: BJP

ನಿರ್ಮಲಾ ಸೀತಾರಾಮನ್ ತಮ್ಮ ಸ್ವಂತಕ್ಕೆ ಏನೂ ಮಾಡಿಲ್ಲ. ಆ ಹಣ ಪಕ್ಷಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೂ 1,200 ಕೋಟಿ ರು. ಗೂ ಅಧಿಕ ಹಣ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಚುನಾವಣಾ ಬಾಂಡ್‌ (Electoral Bonds) ಮೂಲಕ ಕೋಟ್ಯಂತರ ರೂಪಾಯಿ ಹಣ ಸುಲಿಗೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಇತರರ ವಿರುದ್ಧ ದಾಖಲಾಗಿರುವ ಪ್ರಕರಣ ರಾಜಕೀಯ ಪ್ರೇರಿತ ಎಂದು ಬಿಜೆಪಿ ಶನಿವಾರ ಹೇಳಿದೆ.

ಈ ಕುರಿತು ಮಾತನಾಡಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು, ಎಲ್ಲ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳಿಂದ ಹಣ ಸಂಗ್ರಹಿಸಿದ್ದು, ಎಫ್‌ಐಆರ್‌ ದಾಖಲಿಸಬೇಕಾದರೆ ಎಲ್ಲ ಪಕ್ಷಗಳ ವಿರುದ್ಧವೂ ಕ್ರಮಕೈಗೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದ ಮೇರೆಗೆ ಪ್ರಕರಣ ದಾಖಲಿಸಲಾಗಿದ್ದು, ಇದು ರಾಜಕೀಯ ಪ್ರೇರಿತ ದೂರು ಎಂದು ಕಿಡಿಕಾರಿದರು.

ಬೆಂಗಳೂರಿನ ವಿಶೇಷ ನ್ಯಾಯಾಲಯದ ನಿರ್ದೇಶನದ ಮೇರೆಗೆ ಬೆಂಗಳೂರು ಪೊಲೀಸರು ನಿರ್ಮಲಾ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿರುದ್ಧ ಎಫ್‌ಐಆ‌ರ್ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿರುವುದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಡಾ ಹಗರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಚುನಾವಣಾ ಬಾಂಡ್ ಅಡಿ ಎಲ್ಲಾ ಪಕ್ಷಗಳು ದೇಣಿಗೆ ಪಡೆದಿವೆ. ಆದರೆ, ಸಿದ್ದರಾಮಯ್ಯ ಅವರದು ವೈಯಕ್ತಿಕ ಹಗರಣ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಜನ ಪಕ್ಷಪಾತ ಮಾಡಿದ್ದಾರೆ. ಕೋಟ್ಯಂತರ ರು. ಮೌಲ್ಯದ ಜಮೀನು ಕಬಳಿಸಿದ್ದಾರೆ. ನಿರ್ಮಲಾ ಸೀತಾರಾಮನ್ ತಮ್ಮ ಸ್ವಂತಕ್ಕೆ ಏನೂ ಮಾಡಿಲ್ಲ. ಆ ಹಣ ಪಕ್ಷಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೂ 1,200 ಕೋಟಿ ರು. ಗೂ ಅಧಿಕ ಹಣ ಬಂದಿದೆ. ಆ ಹಣವನ್ನು ಮೊದಲು ವಾಪಾಸ್ ನೀಡಿ ಬಳಿಕ ಕೇಂದ್ರ ಸಚಿವರ ರಾಜೀನಾಮೆ ಕೇಳಲಿ ಎಂದು ಸವಾಲು ಹಾಕಿದರು.

ಸಂಗ್ರಹ ಚಿತ್ರ
ಚುನಾವಣಾ ಬಾಂಡ್ ಅಕ್ರಮ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬಿ ವೈ ವಿಜಯೇಂದ್ರ ಸೇರಿ ಹಲವರ ವಿರುದ್ಧ FIR

ಎಲ್ಲಾ ಪಕ್ಷಗಳು ದೇಣಿಗೆ ಸಂಗ್ರಹಿಸಿವೆ. ಹೀಗೆ ಹಣ ತೆಗೆದುಕೊಂಡವರ ಮೇಲೆ ಎಫ್ ಐಆರ್ ದಾಖಲಿಸುವುದಾದರೆ, ಎಲ್ಲರ ಮೇಲೂ ಎಫ್‌ಐಆರ್ ದಾಖಲಿಸಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಯಾರಿಂದಲೂ ಹೇಳಿಸಿ ದೂರು ದಾಖಲಿಸಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ವ್ಯಕ್ತಪಡಿಸಿದರು.

ಮುಡಾ ಪ್ರಕರಣದಿಂದ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ನಾಯಕರು ಚುನಾವಣಾ ಬಾಂಡ್‌ಗಳ ವಿಚಾರವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಈ ಹಿಂದೆ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲು ಯತ್ನಿಸಿದ ಕಾಂಗ್ರೆಸ್ ಈಗ ರಾಜ್ಯದಲ್ಲಿ ಪ್ರಕರಣಗಳ ತನಿಖೆ ನಡೆಸುವ ಸಿಬಿಐ ಅಧಿಕಾರವನ್ನು ಕಸಿದುಕೊಳ್ಳುತ್ತಿದೆ ಎಂದರು.

ಸಿದ್ದರಾಮಯ್ಯ ಅವರು ಪೊಲೀಸರ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿದ್ದು, ಹೀಗಾಗಿ ಮುಡಾ ಪ್ರಕರಣದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com