ಮೈಸೂರು: ಹರಿಯಾಣ ಚುನಾವಣಾ ಪ್ರಚಾರದ ವೇಳೆ ಮುಡಾ ಹಗರಣ ಪ್ರಸ್ತಾಪಿಸಿ, ತಮ್ಮ ಹೆಸರು ಹೇಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ವಾಗ್ದಾಳಿ ನಡೆಸಿದ್ದಾರೆ,
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಯಾಣದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮುಡಾ ಹಗರಣವನ್ನು ಪ್ರಸ್ತಾಪಿಸಿ ಮಾತನಾಡಿರುವ ಮೋದಿಯವರು, ತಮ್ಮದೇ ಪಕ್ಷದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಮೌನ ತಾಳಿದ್ದಾರೆ. ಮೋದಿಯವರು ಬಿಜೆಪಿಯಲ್ಲಿರುವ ಭ್ರಷ್ಟರ ವಿರುದ್ಧ ಕ್ರಮಕೈಗೊಳ್ಳಲಿ ಎಂದು ತಿರುಗೇಟು ನೀಡಿದರು.
ಚುನಾವಣಾ ಬಾಂಡ್ ವಿಚಾರ ಕುರಿತು ಮಾತನಾಡಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ನ್ಯಾಯಾಲಯ ಸೂಚಿಸಿದೆ. ಪ್ರಧಾನಿ ಮತ್ತು ಬಿಜೆಪಿ ಈ ನಾಯಕರ ರಾಜೀನಾಮೆಗೆ ಒತ್ತಾಯಿಸುತ್ತಾರೆಯೇ ಎಂದು ಪ್ರಶ್ನಿಸಿದರು.
ಕೇಂದ್ರದ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಆರೋಪದ ಕುರಿತು ಉತ್ತರಿಸಿ, ಕುಮಾರಸ್ವಾಮಿ ಸುಳ್ಳಿನ ಕಂತೆ ಕಟ್ಟಿದ್ದಾರೆಂದು ಕಿಡಿಕಾರಿದರು.
ಇದೇ ವೇಳೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಾತನಾಡಿ, ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸುವ ನೈತಿಕ ಹಕ್ಕು ವಿರೋಧ ಪಕ್ಷಗಳಿಗೆ ಇಲ್ಲ. ಮುಡಾ ಹಗರಣದ ಪ್ರಕ್ರಿಯೆಯು ಬಹಳ ಹಿಂದೆಯೇ ಪ್ರಾರಂಭವಾಗಿರುವುದರಿಂದ ಮುಖ್ಯಮಂತ್ರಿಯನ್ನು ದೂಷಿಸಬಾರದು ಎಂದು ಹೇಳಿದರು.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ಶನಿವಾರ ಬೆಳಿಗ್ಗೆ ಟಿಕೆ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಜಿಲ್ಲಾ ಸಚಿವ ಡಾ.ಎಚ್.ಸಿ.ಮಹದೇವಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸಿಎಂ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರೊಂದಿಗೆ ಸಭೆ ನಡೆಸಿದರು.
ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿರುವುದು ಹಾಗೂ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ಸಭೆ ಮುಗಿಸಿ ಮನೆಯಿಂದ ಹೊರಗೆ ಬಂದ ನಾಯಕರನ್ನು ಸುದ್ದಿಗಾರರು ಸಭೆಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದರು. ಆದರೆ, ಈ ಪ್ರಶ್ನೆಗಳಿಗೆ ಉತ್ತರಿಸದ ಬೈರತಿ ಸುರೇಶ್ ಅವರು, ಈಗಷ್ಟೇ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದೇನೆ. ಮಡಿಕೇರಿಗೆ ತೆರಳುತ್ತಿದ್ದೇನೆಂದು ಹೇಳಿದರು.
Advertisement