ಕಾಂಗ್ರೆಸ್‌ನಲ್ಲಿ ಒಳಜಗಳ: ಲೋಕಸಭೆ ಚುನಾವಣೆಗೂ ಮುನ್ನ ಲೆಕ್ಕಾಚಾರವನ್ನೇ ಬುಡಮೇಲು ಮಾಡುವ ಭೀತಿ

ಬಿಜೆಪಿ ಮತ್ತು ಜೆಡಿಎಸ್ ಒಗ್ಗೂಡಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯನ್ನು ಹೈಲೈಟ್ ಮಾಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಹತ್ತಿರವಾಗಲು ಹವಣಿಸುತ್ತಿರುವ ಈ ಹೊತ್ತಿನಲ್ಲಿ, ವಿಧಾನಸಭಾ ಚುನಾವಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದ ಕಾಂಗ್ರೆಸ್‌ನಲ್ಲಿ ಒಳಜಗಳ ತಾರಕಕ್ಕೇರಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಪಕ್ಷದ ಕಚೇರಿ (ಸಾಂದರ್ಭಿಕ ಚಿತ್ರ)
ಕಾಂಗ್ರೆಸ್ ಪಕ್ಷದ ಕಚೇರಿ (ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ಒಗ್ಗೂಡಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯನ್ನು ಹೈಲೈಟ್ ಮಾಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಹತ್ತಿರವಾಗಲು ಹವಣಿಸುತ್ತಿರುವ ಈ ಹೊತ್ತಿನಲ್ಲಿ, ವಿಧಾನಸಭಾ ಚುನಾವಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದ ಕಾಂಗ್ರೆಸ್‌ನಲ್ಲಿ ಒಳಜಗಳ ತಾರಕಕ್ಕೇರಿದೆ ಎನ್ನಲಾಗುತ್ತಿದೆ.

ಆದಾಯ ಮೀರಿದ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿ ಆಗಿನ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಚಿವ ಸಂಪುಟವು ವಾಪಸ್ ಪಡೆದಿದೆ. ಇದಾದ ನಂತರ ರಾಜ್ಯದಲ್ಲಿ ಪಕ್ಷದ ಪರಿಸ್ಥಿತಿ ಸುಧಾರಿಸಿದ್ದು, ಒಗ್ಗಟ್ಟಿನ ಪ್ರದರ್ಶನದ ಅಗತ್ಯವಿರುವ ಸಮಯದಲ್ಲಿ, ಆಂತರಿಕ ಕಲಹದಲ್ಲಿ ಮುಳುಗಿರುವಂತೆ ತೋರುತ್ತಿದೆ.

ರಾಜ್ಯದಲ್ಲಿ ಇದೀಗ ಮೂರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆನ್ನುವ ಕೂಗು ಒಂದು ವಲಯದಿಂದ ವ್ಯಾಪಕವಾಗಿ ಕೇಳಿಬರುತ್ತಿದ್ದು, ಪ್ರಮುಖ ದಲಿತ ಮುಖಂಡರಾದ ಗೃಹ ಸಚಿವ ಡಾ.ಜಿ ಪರಮೇಶ್ವರ, ಸಹಕಾರ ಸಚಿವ ಕೆಎನ್ ರಾಜಣ್ಣ, ಸಮಾಜ ಕಲ್ಯಾಣ ಸಚಿವ ಡಾ. ಎಚ್‌ಸಿ ಮಹದೇವಪ್ಪ, ಆಹಾರ ಸಚಿವ ಕೆಎಚ್ ಮುನಿಯಪ್ಪ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದು, ಪಕ್ಷದೊಳಗಿನ ಭಿನ್ನಾಭಿಪ್ರಾಯವನ್ನು ಬಯಲಿಗೆಳೆದಿದ್ದಾರೆ.

ಸಭೆಯ ನಂತರ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಪೂರಕವಾಗಿ ರಾಜ್ಯದಲ್ಲಿ ಹೆಚ್ಚಿನ ಡಿಸಿಎಂ ಹುದ್ದೆಗಳ ಸೃಷ್ಟಿಗೆ ಸಚಿವರು ಮತ್ತು ಇತರ ಮುಖಂಡರು ಬೇಡಿಕೆ ಇಟ್ಟರು. ಆದರೆ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪ್ರಭಾವಕ್ಕೆ ಕಡಿವಾಣ ಹಾಕುವ ಉದ್ದೇಶವೂ ಇದರ ಹಿಂದಿದೆ ಎಂಬುದು ಬಹಿರಂಗ ರಹಸ್ಯವಾಗಿದೆ.

ಹೆಚ್ಚಿನ ಡಿಸಿಎಂ ಹುದ್ದೆಗಳಿಗೆ ಬೇಡಿಕೆ ಇಡುವುದರಲ್ಲಿ ತಪ್ಪೇನಿಲ್ಲ ಎಂದು ಮೈಸೂರು ಜಿಲ್ಲೆಯ ಪ್ರಮುಖ ದಲಿತ ಮುಖಂಡ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಸಚಿವ ಮಹದೇವಪ್ಪ ಸಮರ್ಥಿಸಿಕೊಂಡಿದ್ದಾರೆ. 'ಆ ಹುದ್ದೆಗೆ ಅರ್ಹರು ಮತ್ತು ಅನುಭವ ಇರುವವರು ಹಕ್ಕು ಚಲಾಯಿಸಬಹುದು. ಇದು ಜಾತಿಯ ಬಗ್ಗೆ ಅಲ್ಲ, ಸಾಮರ್ಥ್ಯ ಮತ್ತು ಅನುಭವದ ಬಗ್ಗೆ' ಎಂದು ಅವರು ಒತ್ತಿ ಹೇಳಿದರು.

ಡಿಸಿಎಂ ಹುದ್ದೆಗಳನ್ನು ಬೇರೆ ಬೇರೆ ಸಮುದಾಯಗಳಿಗೆ ಹಂಚುವುದು ಪಕ್ಷಕ್ಕೆ ಉತ್ತಮ ಎಂದು ಕೆಎನ್ ರಾಜಣ್ಣ ಸಮರ್ಥಿಸಿಕೊಂಡಿದ್ದಾರೆ. ಹೈಕಮಾಂಡ್‌ನ ನಿರ್ಧಾರದವರೆಗೆ ನಾವು ಕಾಯಬೇಕಾಗಿದೆ ಎಂದು ಅವರು ಹೇಳಿದರು.

ಉತ್ತರ ಕರ್ನಾಟಕದ ಪ್ರಮುಖ ನಾಯಕ ಸತೀಶ್ ಜಾರಕಿಹೊಳಿ ಅವರು ದೆಹಲಿ ಪ್ರವಾಸದ ವೇಳೆ ಈಗಾಗಲೇ ಮೂರು ಡಿಸಿಎಂ ಹುದ್ದೆಗಳ ಬೇಡಿಕೆಯನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದಲಿತ ಮತ್ತು ಅಲ್ಪಸಂಖ್ಯಾತರ ಮುಖಂಡರನ್ನು ಡಿಸಿಎಂ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿಕೆ ನೀಡಿದ್ದರು.

ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿರುವುದು ಸ್ಪಷ್ಟವಾಗಿದೆ. ರಾಜ್ಯದಲ್ಲಿ 15ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಉಳಿದ 2.5 ವರ್ಷಗಳ ಅವಧಿಗೆ ಸಿಎಂ ಆಗಲು ಡಿಸಿಎಂ ಡಿಕೆ ಶಿವಕುಮಾರ್ ಸಂಪೂರ್ಣವಾಗಿ ಗಮನಹರಿಸಿದ್ದಾರೆ ಎನ್ನಲಾಗಿದೆ. ಶಿವಕುಮಾರ್ ಅವರ ಈ ನಡೆಗಳನ್ನು ಗಮನಿಸಿದ ಸಿದ್ದರಾಮಯ್ಯ ಅವರೇ ಈ ಹಿಂದೆ ಪಕ್ಷದೊಳಗೆ ದಲಿತ ಸಿಎಂ ಚರ್ಚೆಗೆ ಕಾರಣರಾಗಿದ್ದರು ಮತ್ತು ಈಗ ಶಿವಕುಮಾರ್ ಅವರನ್ನು ಕುಗ್ಗಿಸಲು ಹೆಚ್ಚಿನ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ವಿಚಾರ ಮುನ್ನೆಲೆಗೆ ಬರುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಬಂಡಾಯ ಶಮನ

ಮತ್ತೊಂದೆಡೆ, ಹೈಕಮಾಂಡ್ ಮಧ್ಯಸ್ಥಿಕೆಯಿಂದ ಬಂಡಾಯ ನಾಯಕರನ್ನು ಸಮಾಧಾನಪಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ವಿಜಯೇಂದ್ರಗೆ ಸವಾಲೆಸೆಯುವ ಹೇಳಿಕೆ ನೀಡುತ್ತಿದ್ದ ಶಾಸಕ ಬಸನಗೌಡ ಪಾಟೀಲ್, ಮಾಜಿ ಸಚಿವ ವಿ ಸೋಮಣ್ಣ ಇದೀಗ ಸುಮ್ಮನಾಗಿದ್ದಾರೆ. ಬಿಜೆಪಿ ಈಗ ಆಡಳಿತ ಪಕ್ಷದ ವಿರುದ್ಧ ಸಂಪೂರ್ಣ ಗಮನ ಹರಿಸಿದ್ದು, ವಾಗ್ದಾಳಿ ನಡೆಸುತ್ತಿದೆ.

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಸೋಲಿಸುವುದಾಗಿ ಪಣ ತೊಟ್ಟಿದ್ದು, 'ನಾವು ಕಾಂಗ್ರೆಸ್ ಅನ್ನು ಸೋಲಿಸಲು ಬಯಸುತ್ತೇವೆ. ಈ ವಿಷಯದಲ್ಲಿ ಯಾವುದೇ ವಾದ ಮಾಡಬಾರದು. ಸೀಟು ಹಂಚಿಕೆಯನ್ನು ನಂತರ ನೋಡಿಕೊಳ್ಳಲಾಗುವುದು' ಎಂದಿದ್ದಾರೆ.

'ನಾನು ಜಾತ್ಯತೀತ ಆದರ್ಶಗಳಿಗೆ ಸ್ವಲ್ಪವೂ ರಾಜಿ ಮಾಡಿಕೊಳ್ಳದೆ ದೇಶವನ್ನು ಆಳಿದ್ದೇನೆ. ನೀವು (ಕಾಂಗ್ರೆಸ್) ಮತ್ತು ಇಂಡಿಯಾ ಮೈತ್ರಿಕೂಟ ದೇವೇಗೌಡರನ್ನು ಅವಮಾನಿಸಿದ್ದೀರಿ. ನಾನು ಇಂದು ನಿಮಗೆ ಹೇಳುತ್ತಿದ್ದೇನೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಸೋಲಿಸಬೇಕು ಮತ್ತು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಅಂತ್ಯವನ್ನು ಕಾಣಬೇಕೆಂದು ನಾವು ನಿರ್ಧರಿಸಿದ್ದೇವೆ' ಎಂದು ದೇವೇಗೌಡರು ಆರೋಪಿಸಿದರು.

ರಾಜ್ಯದಲ್ಲಿ ಯಾವಾಗ ಬೇಕಾದರೂ ವಿಧಾನಸಭೆ ಚುನಾವಣೆ ನಡೆಯಬಹುದು ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ನಡುವೆ ಸಾಮರಸ್ಯ ಕಾಪಾಡಿದ ಕಾಂಗ್ರೆಸ್ ಹೈಕಮಾಂಡ್ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಉಭಯ ನಾಯಕರ ಒಗ್ಗಟ್ಟಿನಲ್ಲಿ ಕಾಂಗ್ರೆಸ್‌ನ ಪ್ರಮುಖ ಶಕ್ತಿ ಅಡಗಿದೆ ಎಂಬುದು ಪ್ರತಿಪಕ್ಷಗಳಿಗೆ ಚೆನ್ನಾಗಿ ತಿಳಿದಿದೆ ಮತ್ತು ಇದನ್ನು ಮುರಿಯಲು ಸರಿಯಾದ ಅವಕಾಶಕ್ಕಾಗಿ ಕಾಯುತ್ತಿವೆ. 

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಕರ್ನಾಟಕ ರಾಜಕೀಯದಲ್ಲಿ ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆ ಇದ್ದಾರೆ ಎಂದು ಹೇಳಿಕೆ ನೀಡಿದ್ದರು.

ಲೋಕಸಭೆ ಚುನಾವಣೆಯ ನಂತರ ಕರ್ನಾಟಕದಲ್ಲಿ ರಾಜಕೀಯ ಸನ್ನಿವೇಶಕ್ಕೆ ಮತ್ತಷ್ಟು ಕಾವು ಬರಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com