ಗಾಳಿ ಒಂದನ್ನು ಬಿಟ್ಟು ಉಳಿದೆಲ್ಲದಕ್ಕೂ ರಾಜ್ಯ ಸರ್ಕಾರ ತೆರಿಗೆ ವಿಧಿಸುತ್ತಿದೆ, ಜನರಿಗೆ ಸಿದ್ದು ಸರ್ಕಾರ ಶಾಪವಾಗಿ ಪರಿಣಮಿಸಿದೆ: BJP

ಯಾವ ಮತದಾರರು ಸರ್ಕಾರಕ್ಕೆ ಆಡಳಿತ ನಡೆಸಲು ಅವಕಾಶ ಕಲ್ಪಿಸಿದರೋ ಅದೇ ಮತದಾರರಿಗೆ ಸಿದ್ದರಾಮಯ್ಯನವರ ಸರ್ಕಾರ ಶಾಪವಾಗಿ ಪರಿಣಮಿಸಿದೆ.
ಬಿಜೆಪಿ ಪ್ರತಿಭಟನೆ. (ಸಂಗ್ರಹ ಚಿತ್ರ)
ಬಿಜೆಪಿ ಪ್ರತಿಭಟನೆ. (ಸಂಗ್ರಹ ಚಿತ್ರ)
Updated on

ಬೆಂಗಳೂರು: ದೇಶದಲ್ಲಿ ಅತ್ಯಂತ ದುಬಾರಿ ಜೀವನ ನಡೆಸುವಂತಹ ಸ್ಥಿತಿಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ನಿರ್ಮಾಣ ಮಾಡಿದೆ. ಗಾಳಿ ಒಂದನ್ನು ಬಿಟ್ಟು ಉಳಿದೆಲ್ಲದಕ್ಕೂ ರಾಜ್ಯ ಸರ್ಕಾರ ತೆರಿಗೆ ವಿಧಿಸುತ್ತಿದೆ, ಬೆಲೆ ಏರಿಕೆ ಮಾಡುತ್ತಿದೆ ಎಂದು ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.

ಹಾಲು, ಕರೆಂಟ್ ಬಳಿಕ ಡೀಸೆಲ್ ದರವನ್ನು ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಿಡಿಕಾರಿದ್ದಾರೆ.

ದೇಶದಲ್ಲಿ ಅತ್ಯಂತ ದುಬಾರಿ ಜೀವನ ನಡೆಸುವಂತಹ ಸ್ಥಿತಿಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ನಿರ್ಮಾಣ ಮಾಡಿದೆ. ಗಾಳಿ ಒಂದನ್ನು ಬಿಟ್ಟು ಉಳಿದೆಲ್ಲದಕ್ಕೂ ರಾಜ್ಯ ಸರ್ಕಾರ ತೆರಿಗೆ ವಿಧಿಸುತ್ತಿದೆ, ಬೆಲೆ ಏರಿಕೆ ಮಾಡುತ್ತಿದೆ. ಯಾವ ಮತದಾರರು ಸರ್ಕಾರಕ್ಕೆ ಆಡಳಿತ ನಡೆಸಲು ಅವಕಾಶ ಕಲ್ಪಿಸಿದರೋ ಅದೇ ಮತದಾರರಿಗೆ ಸಿದ್ದರಾಮಯ್ಯನವರ ಸರ್ಕಾರ ಶಾಪವಾಗಿ ಪರಿಣಮಿಸಿದ್ದು ರಾಜ್ಯದಲ್ಲಿ ಜನಸಾಮಾನ್ಯರು ಪರದಾಡುತ್ತಿದ್ದಾರೆಂದು ಹೇಳಿದ್ದಾರೆ.

ರಾತ್ರಿ ಮಲಗಿ ಬೆಳಗೆದ್ದರೆ ಯಾವುದರ ಬೆಲೆ ಏರಿಕೆಯಾಗುವುದೋ" ಎಂಬ ಆತಂಕದ ಪರಿಸ್ಥಿತಿ ನಾಡಿನ ಜನಸಾಮಾನ್ಯರಲ್ಲಿ ಮನೆಮಾಡಿದೆ. ಬೆಲೆ ಏರಿಕೆಯ ದಂಡ ನಿರಂತರ ಪ್ರಯೋಗಿಸುತ್ತಿರುವ ನಿಷ್ಪ್ರಯೋಜಕ ಕಾಂಗ್ರೆಸ್ ಸರ್ಕಾರ ಎಂದಿನಂತೆ ಜನರ ಬದುಕನ್ನು ಹಿಂಡುವುದನ್ನು ಮುಂದುವರೆಸಿದೆ. ತನ್ನ ಖಾಲಿ ಖಜಾನೆ ತುಂಬಿಸಿಕೊಳ್ಳಲು ಡೀಸೆಲ್‌ ಮಾರಾಟ ತೆರಿಗೆಯನ್ನು ದಿಡೀರ್ ಹೆಚ್ಚಿಸಿರುವುದರಿಂದ ರಾಜ್ಯದಲ್ಲಿ ಡೀಸೆಲ್ ದರವು ಪ್ರತಿ ಲೀಟರ್‌ಗೆ '2' ರೂಪಾಯಿ ಹೆಚ್ಚಳವಾಗಲಿದ್ದು ನಾಡಿನ ಜನಸಾಮಾನ್ಯರಿಗೆ ಈ ದರ ಏರಿಕೆಯ ಬಿಸಿ ನೇರವಾಗಿ ತಟ್ಟಲಿದೆ.

ಬಿಜೆಪಿ ಪ್ರತಿಭಟನೆ. (ಸಂಗ್ರಹ ಚಿತ್ರ)
ಹಾಲು, ಕರೆಂಟ್ ಹೆಚ್ಚಳ ಬಳಿಕ ಗ್ರಾಹಕರಿಗೆ ಮತ್ತೊಂದು ಬರೆ: ಡೀಸೆಲ್ ದರ ಹೆಚ್ಚಿಸಿದ ರಾಜ್ಯ ಸರ್ಕಾರ; ಮಧ್ಯರಾತ್ರಿಯಿಂದಲೇ ಜಾರಿ!

ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಇಂದಿನ ಕಾಂಗ್ರೆಸ್ ಸರ್ಕಾರದಷ್ಟು ಜನ ವಿರೋಧಿ ಸರ್ಕಾರವನ್ನು ರಾಜ್ಯದ ಜನತೆ ಎಂದೂ ಕಂಡಿಲ್ಲ. ಸುಳ್ಳು ಭರವಸೆಗಳು ಹಾಗೂ ಯೋಜನೆಗಳನ್ನು ಪೂರೈಸಲಾಗದೇ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡಿರುವ ಈ ಸರ್ಕಾರ ನಿತ್ಯವೂ ಒಂದಿಲ್ಲೊಂದು ದರ ಏರಿಸಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ,

ಹಾಲು, ಮೊಸರು, ವಿದ್ಯುತ್,ಆಟೋ ಮೊಬೈಲ್ ಪಾರ್ಟ್ಸ್, ಬೆಂಗಳೂರಿನಲ್ಲಿ ಕಸದ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಅಫಿಡವಿಟ್ ಛಾಪಾ ಕಾಗದ, ಎಟಿಎಂ ಚಾರ್ಜ್ ಸೇರಿದಂತೆ ಜನರ ದೈನಂದಿನ ಬದುಕಿನ ಮೇಲೆ ಹೊರೆ ಹೊರಿಸಿದ್ದ ರಾಜ್ಯ ಸರ್ಕಾರ ಇದೀಗ ಡೀಸೆಲ್ ದರ ಹೆಚ್ಚಿಸಿರುವುದು ಇನ್ನುಮುಂದೆ ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಗಳೂ ಗಗನಕ್ಕೇರಲಿವೆ, ಜನಸಾಮಾನ್ಯರು, ಕಾರ್ಮಿಕರು, ಬಡವರು ಹಾಗೂ ಮಧ್ಯಮ ವರ್ಗದವರು ಬೆಲೆ ಏರಿಕೆಯ ಚಕ್ರವ್ಯೂಹದಲ್ಲಿ ಸಿಲುಕಿ ನಲುಗುವ ಪರಿಸ್ಥಿತಿ ನಿರ್ಮಾಣವಾಗಲಿದೆ.

ಈ ಬೆಲೆ ಏರಿಕೆಯ ಬಿಸಿ ಪಂಪ್ ಸೆಟ್, ಟ್ರಾಕ್ಟರ್ ಸೇರಿದಂತೆ ಇತರ ಕೃಷಿ ಉಪಕರಣಗಳನ್ನು ಬಳಸುವ ರೈತರ ಕೈ ಸುಡಲಿದೆ. ಅದರ ಜೊತೆಗೆ ವಾಹನವನ್ನು ಆಶ್ರಯಿಸಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೂ ಕೂಡ ಇದರ ಬಿಸಿ ತಟ್ಟಲಿದೆ. ಒಟ್ಟಾರೆಯಾಗಿ ಎಲ್ಲ ಕ್ಷೇತ್ರಗಳಿಗೂ ಬೆಲೆ ಏರಿಕೆಯ ಬಿಸಿತಟ್ಟಿಸುವ ನಿರ್ಧಾರವನ್ನು ಈ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಡೀಸೆಲ್ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಮೇಲೆ ಹೆಚ್ಚಿಸಿರುವುದನ್ನು ವಾಪಾಸ್ ಪಡೆಯದಿದ್ದರೆ ದರ ಹಿಂಪಡೆಯುವವರೆಗೂ ಹೋರಾಟ ನಡೆಸಲಾಗುವುದು ಎಂದೂ ಇದೇ ವೇಳೆ ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com