
ಬೆಂಗಳೂರು: ಹೆಣ ಮತ್ತು ಹಣ ಇವು ಬಿಜೆಪಿಯವರ ಅತ್ಯಂತ ಪ್ರೀತಿಪಾತ್ರವಾದ ವಿಷಯಗಳು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಈ ಸಂಬಂಧ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಈ ಹಿಂದೆ ಬಿಜೆಪಿಯವರು ಹಲವು ಸಾವುಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದ್ದರು, ರಾಜ್ಯದ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸಿದ ಆ ಎಲ್ಲಾ ಪ್ರಕರಣಗಳ ಅಸಲಿ ಸತ್ಯ ಹೊರಬಂದು ಬಿಜೆಪಿ ಮುಖಭಂಗ ಅನುಭವಿಸಿದೆ.
- ಶಿವಮೊಗ್ಗದ ಹರ್ಷ
- ಮಂಗಳೂರಿನ ಪ್ರವೀಣ್ ನೆಟ್ಟಾರು
- ಕಾರವಾರದ ಪರೇಶ್ ಮೆಸ್ತಾ
- ತೀರ್ಥಹಳ್ಳಿಯ ನಂದಿತಾ
- ಬೀದರ್ ನ ಶಿವು ಉಪ್ಪಾರ
- ಮೂಡಿಗೆರೆಯ ಧನ್ಯಶ್ರೀ
- ಕರಾವಳಿಯ ಪ್ರಕಾಶ್ ಕುಳಾಯಿ
- ಕೇಶವ್ ಶೆಟ್ಟಿ
- ಹರೀಶ್ ಪೂಜಾರಿ
- ಪ್ರವೀಣ್ ಪೂಜಾರಿ
- ಪ್ರತಾಪ್ ಪೂಜಾರಿ
ಕೊಳಕು ರಾಜಕೀಯಕ್ಕೆ ಬಳಸಿಕೊಂಡ ಬಿಜೆಪಿಗೆ ಇವರೆಲ್ಲರ ನೆನಪಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಇವರೆಲ್ಲರ ಮನೆಗೆ ಬಿಜೆಪಿಗರು ಈಗಲೂ ಭೇಟಿ ನೀಡುತ್ತಾ ಕಷ್ಟ ಸುಖ ವಿಚಾರಿಸುತ್ತಿದ್ದಾರೆಯೇ? ಇವರೆಲ್ಲರ ಕುಟುಂಬಸ್ಥರ ಸ್ಥಿತಿಗತಿಗಳ ಬಗ್ಗೆ ಬಿಜೆಪಿಯವರು ಈಗಲೂ ಕಾಳಜಿ ವಹಿಸುತ್ತಿದ್ದಾರೆಯೇ?
ಈಗ ವಿನಯ್ ಸೋಮಯ್ಯ ಆತ್ಮಹತ್ಯೆಯ ಪ್ರಕರಣದಲ್ಲೂ ಬಿಜೆಪಿ ತನ್ನ ಹಳೆಯ ಕುತಂತ್ರದ ರಾಜಕೀಯವನ್ನು ಮುಂದುವರೆಸಿದೆ. ಈ ಪ್ರಕರಣದಲ್ಲೂ ಸತ್ಯ ಹೊರಬಂದು ಬಿಜೆಪಿಯ ಸದಾರಮೆ ನಾಟಕ ಬಯಲಾಗುವುದು ನಿಶ್ಚಿತ.
ಸಾವಿನ ಮನೆಯಲ್ಲಿ ಸಂಭ್ರಮದ ರಾಜಕೀಯ ಮಾಡುವ BJP Karnataka ಮೊದಲು ಉತ್ತರಿಸಲಿ, ಬಿಜೆಪಿ ಕಾರ್ಯಕರ್ತರ ನೆರವಿಗಾಗಿ ಆರಂಭಿಸಿದ್ದ ಹೆಲ್ಪ್ ಲೈನ್ ಕತೆ ಏನಾಯಿತು?
ಬಿಜೆಪಿ ಕಾರ್ಯಕರ್ತರ ನೆರವಿಗಾಗಿ ನೇಮಿಸಿದ್ದ ನೂರು ಜನರ ವಕೀಲರ ತಂಡ ಎಲ್ಲಿ ಹೋಯ್ತು? ಬಿಜೆಪಿಯೇ ಆರಂಭಿಸಿದ್ದ ಈ ಹೆಲ್ಪ್ ಲೈನ್ ನಂಬರ್ ಗೆ 18003091907 ಕರೆ ಮಾಡಿದರೆ ತನ್ನ ಕಾರ್ಯಕರ್ತರನ್ನು ಬಿಜೆಪಿ ಹೇಗೆ ಮೂರ್ಖರನ್ನಾಗಿಸುತ್ತದೆ ಎನ್ನುವುದು ತಿಳಿಯುತ್ತದೆ. ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುತ್ತಿರುವಂತೆಯೇ ಈ ನಂಬರ್ ಕೂಡ ತನ್ನ ಅಸ್ತಿತ್ವ ಕಳೆದುಕೊಂಡಿದೆ!
ಸಾವಿನ ಮನೆಯ ಸೂತಕದ ಬೆಂಕಿಯಲ್ಲಿ ಹೋಳಿಗೆ ಬೇಯಿಸಲು ಹೊರಡುವ ಬಿಜೆಪಿಯವರು ಮೊದಲು ತಮ್ಮ ಹಿಂದಿನ ನಾಚಿಕೆಗೇಡಿನ ವಿಷಯಗಳನ್ನು ನೆನಪು ಮಾಡಿಕೊಂಡರೆ ಒಳಿತು ಎಂದು ಕಿಡಿ ಕಾರಿದ್ದಾರೆ.
Advertisement