
ಬೆಂಗಳೂರು: 'ಜಾತಿ ಗಣತಿ' ವರದಿ ಕುರಿತು ಸರ್ಕಾರ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಸಚಿವ ಸಂಪುಟ ಈ ವರದಿಯನ್ನು ಪರಿಶೀಲಿಸುತ್ತದೆ ಮತ್ತು ಚರ್ಚಿಸುತ್ತದೆ. ಸತ್ಯಗಳ ಆಧಾರದ ಮೇಲೆ ಎಲ್ಲರಿಗೂ ನ್ಯಾಯ ಒದಗಿಸುತ್ತದೆ. ವರದಿ ವಿರುದ್ಧ ನೀಡಲಾಗುತ್ತಿರುವ ಹೇಳಿಕೆಗಳು ರಾಜಕೀಯ ಪ್ರೇರಿತ' ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಶುಕ್ರವಾರ ಸಚಿವ ಸಂಪುಟದ ಮುಂದೆ ಮಂಡಿಸಲಾಗಿದ್ದು, ಏಪ್ರಿಲ್ 17ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ. ವರದಿಯ ಮುಚ್ಚಿದ ಲಕೋಟೆಯನ್ನು ಸಚಿವ ಸಂಪುಟ ಸಭೆಯಲ್ಲಿ ತೆರೆಯಲಾಯಿತು. ವರದಿಯನ್ನು ಅಂಗೀಕರಿಸುವ ನಿರ್ಣಯವನ್ನು ಸಂಪುಟ ಸಭೆಯಲ್ಲಿ ಕೈಗೊಂಡ ಬಳಿಕ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸುವ ತೀರ್ಮಾನ ಕೈಗೊಳ್ಳಲಾಯಿತು.
ಆಯೋಗವು ಕಳೆದ ವರ್ಷ ಫೆಬ್ರುವರಿ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿಯನ್ನು ಸಲ್ಲಿಸಿತ್ತು. ಸಮಾಜದ ಕೆಲವು ವರ್ಗಗಳಿಂದ ಮತ್ತು ಕಾಂಗ್ರೆಸ್‌ನೊಳಗಿನಿಂದಲೇ ವಿರೋಧ ವ್ಯಕ್ತವಾಗಿದ್ದವು.
'ಮುಖ್ಯಮಂತ್ರಿಗಳು ಇದರ ಬಗ್ಗೆ ಮಾತನಾಡಿದ್ದಾರೆ. ನಾನು ನಿನ್ನೆ ಬೆಳಗಾವಿ ಮತ್ತು ಮಂಗಳೂರಿಗೆ ಭೇಟಿ ನೀಡಿದ್ದ ಕಾರಣ, ನಾನಿನ್ನೂ ವರದಿಯನ್ನು ನೋಡಿಲ್ಲ. ಇದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಬೇಕಾಗಿದೆ. ವಿಧಾನಸಭೆಯಲ್ಲಿಯೂ ಈ ಕುರಿತು ಚರ್ಚಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ಯಾರೂ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ' ಎಂದು ಶಿವಕುಮಾರ್ ಹೇಳಿದರು.
ದೊಡ್ಡಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕೆಲವರು ಜಾತಿ ಗಣತಿ ವರದಿ ಬಗ್ಗೆ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿರಬಹುದು. ಆದರೆ, ನಾವು ಸತ್ಯಗಳನ್ನು ಅರ್ಥಮಾಡಿಕೊಂಡು ಎಲ್ಲರಿಗೂ ನ್ಯಾಯ ಒದಗಿಸುತ್ತೇವೆ' ಎಂದರು.
ಈ ಮಧ್ಯೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವರದಿಯಲ್ಲಿ ಏನಿದೆ ಎಂಬುದರ ಬಗ್ಗೆ ತಮಗೆ ತಿಳಿದಿಲ್ಲ ಮತ್ತು ಆದ್ದರಿಂದ ಈ ಬಗ್ಗೆ ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ ಎಂದಿದ್ದಾರೆ.
'ನನಗೆ ಗೊತ್ತಿಲ್ಲ, ಏಕೆಂದರೆ ಸಂಪುಟದಲ್ಲಿ ಏನು ಚರ್ಚಿಸಲಾಗುವುದು ಅಥವಾ ವರದಿಯಲ್ಲಿ ಏನಿದೆ ಎಂಬುದರ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ವರದಿ ಸಿಕ್ಕರೆ ನಾನು ಏನನ್ನಾದರೂ ಹೇಳಬಲ್ಲೆ. ಏಪ್ರಿಲ್ 17ರ ಸಂಪುಟ ಸಭೆಯಿಂದ ಯಾವುದೇ ನಿರ್ಧಾರ ಕೈಗೊಂಡರೆ, ನಾನು ಆ ಬಗ್ಗೆ ಪ್ರತಿಕ್ರಿಯಿಸಬಲ್ಲೆ' ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಅಧಿಕೃತ ಮೂಲಗಳ ಪ್ರಕಾರ, 2015ರಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಒಟ್ಟು 5.98 ಕೋಟಿ ನಾಗರಿಕರನ್ನು ಒಳಗೊಂಡಿದ್ದು, ಅವರಲ್ಲಿ ಸುಮಾರು ಶೇ 70 ರಷ್ಟು ಅಥವಾ 4.16 ಕೋಟಿ ಜನರು ವಿವಿಧ ಒಬಿಸಿ ವರ್ಗಗಳ ಅಡಿಯಲ್ಲಿ ಬರುತ್ತಾರೆ. ಆಯೋಗವು ಒಬಿಸಿ ಕೋಟಾವನ್ನು ಸದ್ಯ ಇರುವ ಶೇ 32ರಿಂದ ಶೇ 51ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ ಎಂದು ವರದಿ ತಿಳಿಸಿದೆ.
Advertisement