ಜಾತಿ-ಜಾತಿ ಅಂತ ಮಂಗ್ಯಾಗಳ ರೀತಿ ಕಿತ್ತಾಡಬೇಡಿ; ಹಿಂದೂಗಳ ಸ್ಥಿತಿ ಏನಾಗಿದೆ ನೋಡಿ: ಪ್ರತಾಪ್ ಸಿಂಹ
ಮೈಸೂರು: ಜಾತಿ ಸಂಖ್ಯೆ ಕಡಿಮೆಯಾಯಿತು ಎಂದು ಮಂಗ್ಯಾಗಳ ತರ ಕಿತ್ತಾಡಬೇಡಿ, ಹಿಂದೂಗಳಾಗಿ ಈ ಜಾತಿಗಣತಿ ನೋಡಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿವಿಮಾತು ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಜಾತಿಗಣತಿ ಸಂಖ್ಯೆ ಹೊರ ಹಾಕಿ ಸಿಎಂ ಸಿದ್ದರಾಮಯ್ಯ ತನ್ನ ಪಕ್ಷ ಹಾಗೂ ಪ್ರತಿಪಕ್ಷ ಇಬ್ಬರನ್ನು ಕುರಿ ಮಾಡಿದ್ದಾರೆ. ವಾಸ್ತವ ವಿಚಾರಗಳನ್ನು ಮರೆ ಮಾಚಲು ಸಿದ್ದರಾಮಯ್ಯ ಜಾತಿ ಜನಗಣತಿಯನ್ನು ಮುನ್ನೆಲೆಗೆ ಬಿಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಜಾತಿಗಳನ್ನು ಒಡೆಯುತ್ತಿಲ್ಲ. ಒಟ್ಟಾರೆಯಾಗಿ ಅವರು ಹಿಂದೂ ಧರ್ಮವನ್ನು ಒಡೆಯುತ್ತಿದ್ದಾರೆ ಎಂದು ಹೇಳಿದರು.
ಲಿಂಗಾಯತರು, ಒಕ್ಕಲಿಗರು, ಒಬಿಸಿ ಜನಸಂಖ್ಯೆ ಕಡಿಮೆ ಆಯ್ತು ಅನ್ನೋದಷ್ಟೆ ನೋಡಬೇಡಿ. ಒಟ್ಟಾರೆ ಹಿಂದೂಗಳ ಸ್ಥಿತಿ ಏನಾಗಿದೆ ನೋಡಿ. ನಮ್ಮ ಜಾತಿ ಸಂಖ್ಯೆ ಕಡಿಮೆ ಆಯ್ತು ಅಂತಾ ಪರಸ್ಪರ ಮಂಗ್ಯಾಗಳ ರೀತಿ ಕಿತ್ತಾಡಬೇಡಿ. ಹಿಂದೂಗಳಾಗಿ ಈ ಜಾತಿ ಗಣತಿ ನೋಡಿ. ಯಾರ ಮನೆಗೆ ಬಂದು ಜಾತಿ ಗಣತಿ ಮಾಡಿದ್ದಾರೆ? ಸಿಎಂ ಎಲ್ಲರನ್ನು ಕುರಿ ಮಾಡುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಆಗ ಅಹಿಂದ ಅಂತಾ ಆಗ ಒಂದು ವರ್ಗ ಒಡೆದರು. ಈಗ ಜಾತಿಗಣತಿ ಹೆಸರಲ್ಲಿ ಇಡೀ ಹಿಂದೂ ಧರ್ಮ ಒಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿದಿವೆ. ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿದಿವೆ. ಬೆಲೆ ಏರಿಕೆಯಾಗಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ ನಡೆದಿದೆ.
ಇವೆಲ್ಲವನ್ನು ಮರೆ ಮಾಚಲು ಜಾತಿಗಣತಿ ಬಿಚ್ಚಿಟ್ಟಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಮಾಡುತ್ತಿರುವ ನಾಟಕ ಇದು. ಲಿಂಗಾಯತರಿಗೆ, ಒಕ್ಕಲಿಗರು, ಒಬಿಸಿ ಎಲ್ಲದರಲ್ಲೂ ಉಪಜಾತಿ ಲೆಕ್ಕ ಹಾಕಲಾಗಿದೆ. ಮುಸ್ಲಿಂ, ಕ್ರಿಶ್ಚಿಯನ್‌ರಲ್ಲಿ ಉಪಜಾತಿ ಯಾಕೆ ಲೆಕ್ಕ ಹಾಕಿಲ್ಲ ಎಂದು ಪ್ರಶ್ನಿಸಿದರು.
ನಿಮ್ಮ ಪಕ್ಷದಲ್ಲೇ ಜಾತಿಗಣತಿ ಗೊಂದಲ ಇದೆ. ಒಂದು ಕಡೆ ಡಿಕೆ ಶಿವಕುಮಾರ್ ಒಕ್ಕಲಿಗ ಶಾಸಕರ ಸಭೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಶ್ಯಾಮನೂರು ಶಿವಶಂಕರಪ್ಪ ಲಿಂಗಾಯತರ ಸಭೆ ಕರೆದಿದ್ದಾರೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ