ಭಾರತದ ಚುನಾವಣಾ ಆಯೋಗ BJP ಕೈಗೊಂಬೆಯಾಗಿದೆ, ನಮ್ಮ ಮೌನದ ಸಮಯ ಮುಗಿದಿದೆ: ಸುರ್ಜೇವಾಲಾ

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ರಕ್ಷಕನಾಗಬೇಕಿದ್ದ ಚುನಾವಣಾ ಆಯೋಗ, ಇಂದು ಭಾರತೀಯ ಪ್ರಜಾಪ್ರಭುತ್ವದ ಸಮಾಧಿ ಮಾಡುವ ಪ್ರಕ್ರಿಯೆಯ ನಿರ್ದೇಶಕನಾಗಿ ಮಾರ್ಪಟ್ಟಿದೆ.
 Randeep Singh Surjewala
ರಣದೀಪ್ ಸಿಂಗ್ ಸುರ್ಜೇವಾಲಾ
Updated on

ಬೆಂಗಳೂರು: ಭಾರತೀಯ ಚುನಾವಣಾ ಆಯೋಗ ನಿಷ್ಪಕ್ಷಪಾತ ಸಾಂವಿಧಾನಿಕ ಸಂಸ್ಥೆಯಾಗಿ ಉಳಿದಿಲ್ಲ. ಚುನಾವಣೆಗಳನ್ನು ತಿರುಚುವ ಬಿಜೆಪಿಯ ಯಂತ್ರದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಸಿಐ ತಟಸ್ಥ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ. ಬಿಜೆಪಿ ಚುನಾವಣಾ ಆಯೋಗವನ್ನೇ ತನ್ನ ಹೊಸ ಅಸ್ತ್ರವನ್ನಾಗಿಸಿಕೊಂಡಿದೆ. ಮತದಾರರ ಹೆಸರುಗಳನ್ನು ಅಳಿಸಿ ಹಾಕಲು, ವಿರೋಧಿ ಧ್ವನಿಗಳನ್ನು ದಮನ ಮಾಡಲು ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳ ಅಡಿಪಾಯವನ್ನೇ ಅಲುಗಾಡಿಸಲು ಸಾಧನವಾಗಿ ಬಳಸಿಕೊಳ್ಳುತ್ತಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ನಾವು ನೋಡಿದ್ದು, ಕೇವಲ ಆರಂಭವಷ್ಟೇ. ಅದು ಕೇವಲ ದುರುಪಯೋಗವಲ್ಲ, ಇದು ಪೂರ್ವ ನಿಯೋಜಿತ ವಂಚನೆ.

ಬಿಜೆಪಿ ಕೇವಲ ಚುನಾವಣೆಗಳನ್ನು ತಿರುಚುತ್ತಿಲ್ಲ. ಅದು ಒಬ್ಬೊಬ್ಬರ ಹೆಸರನ್ನು ಅಳಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೋಲೆ ಮಾಡುತ್ತಿದೆ. ಇದು ಚುನಾವಣಾ ಪ್ರಚಾರವಲ್ಲ ಇದು ಫಲಿತಾಂಶಗಳನ್ನೇ ಬದಲಿಸುವ ತಂತ್ರ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ರಕ್ಷಕನಾಗಬೇಕಿದ್ದ ಚುನಾವಣಾ ಆಯೋಗ, ಇಂದು ಭಾರತೀಯ ಪ್ರಜಾಪ್ರಭುತ್ವದ ಸಮಾಧಿ ಮಾಡುವ ಪ್ರಕ್ರಿಯೆಯ ನಿರ್ದೇಶಕನಾಗಿ ಮಾರ್ಪಟ್ಟಿದೆ.

 Randeep Singh Surjewala
ಮಹಾರಾಷ್ಟ್ರ, ಕರ್ನಾಟಕದಲ್ಲಿ "ಮತಗಳ್ಳತನ": ರಾಹುಲ್‌ ಗಾಂಧಿಯಿಂದ ಸ್ಫೋಟಕ ದಾಖಲೆ ಬಿಡುಗಡೆ; Video

ಬಿಹಾರ ರಾಜ್ಯ ಒಂದರಲ್ಲೇ ಸುಮಾರು 65 ಲಕ್ಷ ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದು ಕೇವಲ ತಾಂತ್ರಿಕ ದೋಷವಲ್ಲ, ಇದು ಪ್ರಜಾಪ್ರಭುತ್ವದ ಮೇಲಿನ ಕ್ರೂರ ಪ್ರಹಾರ. ಮತಪಟ್ಟಿಯಿಂದ ಕೈ ಬಿಡಲಾದ ಮತದಾರರಲ್ಲಿ ಹೆಚ್ಚಿನವರು ಬಡವರು, ದಲಿತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು. ಇವರೆಲ್ಲರೂ ವಿರೋಧ ಪಕ್ಷಗಳ ನಿಷ್ಠರು ಹಾಗೂ ಬೆಂಬಲಿಗರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಕೇವಲ 30 ನಿಮಿಷಗಳಲ್ಲಿ 70 ಲಕ್ಷ ಮತಗಳು ಚಲಾವಣೆಯಾದವು. ಇದು ಮತದಾನವಲ್ಲ ಇದು ಡಿಜಿಟಲ್ ಹ್ಯಾಕಿಂಗ್. ಈ ವಿಷಯವನ್ನು ರಾಹುಲ್ ಗಾಂಧಿಯವರು ನೇರವಾಗಿ ಚುನಾವಣಾ ಆಯೋಗದ ಗಮನಕ್ಕೆ ತಂದರೂ, ಅಲ್ಲಿಂದ ಸಿಕ್ಕಿದ್ದು ಮೌನದ ಪ್ರತ್ಯುತ್ತರ. ತನಿಖೆಯೂ ಇಲ್ಲ, ಉತ್ತರವೂ ಇಲ್ಲ. ಹೊಣೆಗಾರಿಕೆಯೂ ಇಲ್ಲ. ಆಯೋಗವು ಸಾಂವಿಧಾನಿಕ ಸಂಸ್ಥೆಯಂತೆ ವರ್ತಿಸದೆ, ಬಿಜೆಪಿಯ ಆದೇಶಕ್ಕೆ ತಲೆಬಾಗುವ ಹೇಡಿಯಂತೆ ವರ್ತಿಸುತ್ತಿದೆ.

ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಕೇವಲ 10 ನಿಮಿಷಗಳಲ್ಲಿ 65,000 ಮತಗಳು ಚಲಾವಣೆಯಾಗಿವೆ. ಚುನಾವಣೆಯೇ ಅಥವಾ ವಂಚನೆಯ ಸರ್ಕಸ್ಸೇ? ಇಲ್ಲಿನ ಯಕ್ಷ ಮಾಂತ್ರಿಕ ಬಿಜೆಪಿ. ಅಂತೆಯೇ ಕಾರ್ಯಕ್ರಮ ವ್ಯವಸ್ಥಾಪಿತ ಚುನಾವಣಾ ಆಯೋಗ. 2019ರಿಂದ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ 27 ದೂರುಗಳನ್ನು ನೀಡಿದ್ದರೂ, ಆಯೋಗ ಒಂದರ ಮೇಲೂ ಕ್ರಮ ಕೈಗೊಂಡಿಲ್ಲ. ಕನಿಷ್ಠ ಎಚ್ಚರಿಕೆಯನ್ನೂ ನೀಡಿಲ್ಲ. ಆಯೋಗವು ನಿಷ್ಪಕ್ಷಪಾತವಾಗಿಲ್ಲ. ಇಡಿ, ಸಿಬಿಐ ಮತ್ತು ಐಟಿ ಇಲಾಖೆಗಳು ಬಿಜೆಪಿಯ ಗುರಾಣಿ ಮತ್ತು ಖಡ್ಗಗಳಾಗಿ ಬದಲಾಗಿದೆ. ನಮ್ಮ ಪ್ರತಿರೋಧಕ್ಕೆ ಕರ್ನಾಟಕವೇ ಮುನ್ನುಡಿಯಾಗಲಿದೆ. ಈ ವಂಚನೆಯನ್ನು ನಾವು ಬೀದಿಯಲ್ಲಿ ಮತ್ತು ಬೂತ್ ಮಟ್ಟದಲ್ಲಿ ಬಯಲಿಗೆಳೆಯುತ್ತೇವೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಾಂಗ್ರೆಸ್ ಇದರ ವಿರುದ್ಧ ಹೋರಾಡುತ್ತದೆ. ಮೌನದ ಸಮಯ ಮುಗಿದಿದೆ. ವಿರೋಧಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com