
ಬೆಂಗಳೂರು: ನಮ್ಮ ಮೆಟ್ರೋ ಹಂತ 2 ಉದ್ಘಾಟನೆ ಆಹ್ವಾನ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಜಟಾಪಟಿ ಶುರುವಾಗಿದೆ.
ಆತುರ, ಕಾತುರ, ಅವಸರ, ಹಂಬಲ, ಹಾತೊರೆ, ತವಕ, ಉತ್ಸಾಹ, ಕುತೂಹಲಗಳನ್ನ ತಾವು ಮತ್ತು ತಮ್ಮ ಕುಟುಂಬ ರಿಪಬ್ಲಿಕ್ ಆಫ್ ಕಲಬುರಗಿ ಸೃಷ್ಟಿ ಮಾಡಿಕೊಳ್ಳುವ ಬದಲು ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗ್ಗೆ ತೋರಿಸಿದಿದ್ದರೆ, ಕಲ್ಯಾಣ ಕರ್ನಾಟಕ ಇವತ್ತು ಇಷ್ಟೊಂದು ಹಿಂದೆ ಉಳಿಯುತ್ತಿರಲಿಲ್ಲ ಎಂದ ಅಶೋಕ್ ಅವರ ಹೇಳಿಕೆಗೆ ಪ್ರಿಯಾಂಕ್ ಖರ್ಗೆಯವರು ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆಯವರು, ಅಣ್ಣಾ, ನಿಮ್ಮನ್ನು ಕಡೆಗಣಿಸಿದ್ದನ್ನು, ತಮಗಾದ ಅವಮಾನವನ್ನು, ನಿರ್ಲಕ್ಷ್ಯವನ್ನು ನಾನು ಜನರ ಮುಂದೆ ತೆರೆದಿಟ್ಟಿದ್ದಕ್ಕೆ ಈ ಕಾರ್ಯಕ್ರಮದಲ್ಲಿ ಕೊನೆ ಕ್ಷಣದಲ್ಲಿ ನಿಮಗೆ ಸ್ಥಾನ ಮತ್ತು ಕೊಂಚ ಮಾನ ದೊರಕಿದೆ. ಇದಕ್ಕಾಗಿ ನೀವು ನನಗೆ ಧನ್ಯವಾದಗಳನ್ನು ಹೇಳಬೇಕು ಎಂದು ಹೇಳಿದ್ದಾರೆ.
ಆಡಳಿತ ಪಕ್ಷದವರ ಟೀಕೆಗೆ ಆಹಾರವಾಗುತ್ತಿದೆ ದಯಮಾಡಿ ಹೆಸರು ಸೇರಿಸಿ ಎಂದು ಕೇಂದ್ರ ಸರ್ಕಾರದ ಕೈಕಾಲು ಹಿಡಿದು ಬೇಡಿಕೊಂಡು ಹೆಸರು ಸೇರ್ಪಡೆಗೆ ಶ್ರಮಿಸಿದ ನಿಮ್ಮ ಬೆಂಬಲಿಗರಿಗೂ ನೀವು ಧನ್ಯವಾದ ಹೇಳಬೇಕು. ರಾತ್ರೋ ರಾತ್ರಿ ಹೆಸರು ಸೇರಿಸಿಕೊಂಡು ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುತ್ತಾ ಮೈಮರೆಯಬೇಡಿ.
ಏನೇ ಮಾಡಿದರೂ ನಿಮ್ಮ ಜೂನಿಯರ್ ವಿಜಯೇಂದ್ರರಿಗಿಂತ ನೀವು ಕೆಳಗೇ ಇದ್ದೀರಿ. ಈ ಹೆಸರು ಸೇರ್ಪಡೆ ನಿಮಗೆ ದೊರಕಿದ ಸಮ್ಮಾನವಲ್ಲ ಭಿಕ್ಷೆ ಅಷ್ಟೇ. ಮೆಟ್ರೋ ಕಾರ್ಯಕ್ರಮದಲ್ಲಿ ಮಾತ್ರ ನಿಮಗೆ ಜಾಗ, ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ನಿಮಗೆ ಕುರ್ಚಿ ಇಲ್ಲ, ಶಿಕಾರಿಪುರದ ಶಾಸಕ ವಿಜಯೇಂದ್ರರಿಗೆ ಮಾತ್ರ ಕುರ್ಚಿ. ಪಾಪ ನೀವು ಎಂದು ವ್ಯಂಗ್ಯವಾಡಿದ್ದಾರೆ.
Advertisement