
ಬೆಂಗಳೂರು : "ಪದ್ಮನಾಭನಗರ ಕ್ಷೇತ್ರದಲ್ಲಿ ಬದಲಾವಣೆ ನಿಶ್ಚಿತ. 2028 ಕ್ಕೆ ಪದ್ಮನಾಭನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಪದ್ಮನಾಭನಗರದಲ್ಲಿ ನಡೆದ ಮಹಾಪರ್ವ ಉತ್ಸವ ಹಾಗೂ ಪುನೀತ್ ರಾಜಕುಮಾರ್ ಪುತ್ಹಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್.ಶ್ರೀನಿವಾಸ್ ಅವರಿಗೆ ನಾನು ಅಂದೇ ಹೇಳಿದೆ. ಬಿ ಫಾರಂ ನೀಡುತ್ತೇನೆ ಮೊದಲು ಶಾಸಕ ಆಗುವುದು ನೋಡು. ಅಶೋಕಣ್ಣ ಕನಕಪುರದಲ್ಲಿ ನಿಂತುಕೊಳ್ಳುತ್ತಾನೆ ಎಂದು ಹೇಳಿದೆ. ಆದರೆ ಅವರು ಸ್ವಾಮಿ ನಿಷ್ಠೆ ತೋರಿಸಿದರು. ಮುಂದೆ ಅಶೋಕ್ ಅವರು ಸೇರಿದಂತೆ ಯಾರೇ ಚುನಾವಣೆಗೆ ನಿಲ್ಲಲಿ. ನಿಮ್ಮ ಮತ ಹಸ್ತಕ್ಕೆ ಇರಲಿ" ಎಂದು ಹೇಳಿದರು.
"ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಪ್ರಮೋದ್ ಶ್ರೀನಿವಾಸ್ ಅವರು ತಮಗೆ ಕೊಟ್ಟಂತಹ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ಅತ್ಯುತ್ತಮ ಸಂಘಟಕರಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ" ಎಂದು ಹೇಳಿದರು. "ಜಗತ್ತಿನಲ್ಲಿ ಏನೇನೊ ಬದಲಾವಣೆಯಾಗುತ್ತದೆ. ಅದೇ ರೀತಿ ಇಲ್ಲಿ ಬದಲಾವಣೆಯಾಗುವುದಿಲ್ಲವೇ?" ಎಂದು ಮಾರ್ಮಿಕವಾಗಿ ನುಡಿದರು.
"ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿದೆ ಅಕ್ಟೋಬರ್ 31ರ ಒಳಗೆ ವಾರ್ಡ್ ಗಳ ರಚನೆ ಮುಗಿಯುತ್ತದೆ. ನೀವು ಬೆಂಗಳೂರು ದಕ್ಷಿಣ ಭಾಗಕ್ಕೆ ಸೇರುತ್ತೀರಾ. ನಿಮ್ಮ ಯೋಗಕ್ಷೇಮವನ್ನು ರಾಮಲಿಂಗಾರೆಡ್ಡಿ ಅವರು ನೋಡಿಕೊಳ್ಳುತ್ತಾರೆ. ಈ ಕ್ಷೇತ್ರದ ಪ್ರಮುಖ ಮುಖಂಡರಿಗೆ ನಾನು ಜವಾಬ್ದಾರಿ ನೀಡಿದ್ದೇನೆ. ಪ್ರಮೋದ್ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಎಲ್ಲಾ ಕೆಲಸಗಳು ನಡೆಯಬೇಕು ಎಂದು ತಿಳಿಸಿದ್ದೇನೆ. ಶ್ರೀನಿವಾಸ್ ಅವರ ಮಾರ್ಗದರ್ಶನ, ಪ್ರಮೋದ್ ಅವರ ನಾಯಕತ್ವದಲ್ಲಿ ಎಲ್ಲರೂ ಹೋಗಬೇಕು. ಇದರಲ್ಲಿ ಗೊಂದಲವಿಲ್ಲ ಎಲ್ಲಾ ಹಿರಿಯರು ಇದಕ್ಕೆ ಸಹಕಾರ ನೀಡಬೇಕು" ಹೇಳಿದರು.
"ನಮ್ಮ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ. ಬಡವರ ಬದುಕಿನ ಕಷ್ಟದಲ್ಲಿ ನಾವೂ ಸಹ ಪಾಲುದಾರರಾಗಿ ಅದನ್ನು ಬಗೆಹರಿಸಬೇಕು. ಮನೆ ಬಾಗಿಲಿಗೆ ಗೃಹಲಕ್ಷ್ಮೀ, ಗೃಹಜ್ಯೋತಿ ಬಂದಿದೆ. ಮಹಿಳೆಯರು ಶಕ್ತಿ ಯೋಜನೆ ಮೂಲಕ ಉಚಿತವಾಗಿ ಓಡಾಡುತ್ತಿದ್ದಾರೆ. ಯುವನಿಧಿ ನೀಡುತ್ತಿದ್ದೇವೆ. ಬಿಜೆಪಿಯವರು ಭಾವನೆ ಮೇಲೆ ರಾಜಕೀಯ ಮಾಡುತ್ತಾರೆ. ನಾವು ಬದುಕಿನ ಮೇಲೆ ರಾಜಕೀಯ ಮಾಡುತ್ತೇವೆ. ನಾವು ಹಸಿದವರ ಹೊಟ್ಟೆ ತುಂಬುವುದಕ್ಕೆ ಅನ್ನ ನೀಡುತ್ತಿದ್ದೇವೆ" ಎಂದು ಹೇಳಿದರು.
"ಸರಳತೆಯ ಸಾಕಾರವಾದ ಪುನೀತ್ ರಾಜಕುಮಾರ್ ಅವರ ಪ್ರತಿಮೆ ಸ್ಥಾಪನೆ ಮಾಡಿದ್ದು ಸಂತಸವಾಯಿತು. ನಾನು ಹಾಗು ಪುನೀತ್ ಅವರು ಅಕ್ಕಪಕ್ಕ ಮನೆಯವರು. ಅವರ ಶ್ರೀಮತಿಯವರನ್ನು ದೇಶಸೇವೆಗೆ ಕರೆದೆ ಅವರು ಪುನೀತ್ ಅವರು ನಡೆದ ದಾರಿಯಲ್ಲಿ ನಡೆಯುತ್ತೇನೆ. ಇಲ್ಲದಿದ್ದರೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು ಎನ್ನುವ ಆಸೆಯಿತ್ತು" ಎಂದರು. "ಗೃಹಲಕ್ಷ್ಮೀ ಹಣ ಸೇರಿಸಿ ಮಹಿಳೆಯರು ಗೃಹಲಕ್ಷ್ಮೀ ಕ್ಯಾಂಟೀನ್ ತೆರೆದಿದ್ದಾರೆ ಅವರಿಗೆ ಕೋಟಿ ನಮಸ್ಕಾರಗಳು. ಅದನ್ನು ಉದ್ಘಾಟನೆ ಮಾಡಿದ್ದೂ ಸಹ ಸಂತೋಷ ಉಂಟು ಮಾಡಿತು" ಎಂದರು.
Advertisement