
ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜಣ್ಣ ಅವರು ರಾಜೀನಾಮೆ ನೀಡಿರುವುದು ನಮ್ಮ ಪಕ್ಷದ ಆಂತರಿಕ ವಿಚಾರವಾಗಿದ್ದು, ಅದಕ್ಕೆ ವಿವರಣೆ ನೀಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದರು.
ವಿಧಾನ ಪರಿಷತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮ ಅವರು, ರಾಜಣ್ಣ ಅವರ ರಾಜೀನಾಮೆಗೆ ಕಾರಣಗಳ ಕುರಿತು ಸರ್ಕಾರ ಸರಿಯಾದ ಹೇಳಿಕೆ ನೀಡಿಲ್ಲ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪರಿಷತ್ತಿನ ಆಡಳಿತ ಪಕ್ಷದ ನಾಯಕ ಬೋಸರಾಜು ಅವರು, ಸರ್ಕಾರ ಈ ವಿಷಯದ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದೆ. ಇದೀಗ ಮತ್ತೆ ಅದನ್ನು ಪ್ರಸ್ತಾಪಿಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ಇದು ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಸ್ವಲ್ಪ ಸಮಯದವರೆಗೆ ವಾಗ್ವಾದಕ್ಕೆ ಕಾರಣವಾಯಿತು. ಬಳಿಕ ಈ ವಿಷಯದ ಬಗ್ಗೆ ಚರ್ಚೆಯ ಅಗತ್ಯವಿಲ್ಲ ಎಂದು ಪರಿಷತ್ತಿನ ಅಧ್ಯಕ್ಷ ಬಸವರಾಜ ಹೊರಟ್ಟಿ ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಾರಾಯಣಸ್ವಾಮಿ ಅವರು, ದಲಿತ ನಾಯಕ ರಾಜಣ್ಣ ಅವರನ್ನು ಸಂಪುಟದಿಂದ "ವಜಾಗೊಳಿಸುವ" ಮೂಲಕ ಕಾಂಗ್ರೆಸ್ ಅವರನ್ನು ಅವಮಾನಿಸಿದೆ ಎಂದು ಆರೋಪಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ಅದು ನಿಮ್ಮ (ಬಿಜೆಪಿ) ಸಂಸ್ಕೃತಿ. ನೀವು ಅಪ್ರಸ್ತುತ ವಿಷಯವನ್ನು ಎತ್ತಿದ್ದೀರಿ. ಯಡಿಯೂರಪ್ಪ ರಾಜೀನಾಮೆ ನೀಡಿದಾಗ ಮತ್ತು ಯತ್ನಾಳ್ ಅವರನ್ನು ಹೊರಹಾಕಿದಾಗ, ನಿಮ್ಮ ಪಕ್ಷ ವಿವರಣೆ ನೀಡಿದೆಯೇ? ಎಂದು ಪ್ರಶ್ನಿಸಿದರು. ಅಲ್ಲದೆ, ಇದು ನಮ್ಮ ಪಕ್ಷದ ಆಂತರಿಕ ವಿಷಯವಾಗಿದ್ದು, ವಿವರಣೆ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದರು.
Advertisement