
ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಅಂತ್ಯಕ್ರಿಯೆಗಳ ಬಗ್ಗೆ ವಿಶೇಷ ತನಿಖಾ (ಎಸ್‌ಐಟಿ) ದಳ ತನ್ನ ತನಿಖೆಯನ್ನು ಮುಂದುವರೆಸಿದ್ದು, ಈ ನಡುವಲ್ಲೇ ಪ್ರಕರಣ ಸಂಬಂಧ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಟಾಪಟಿ ಶುರುವಾಗಿದೆ.
ಪ್ರಕರಣ ಸಂಬಂಧ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದು, ಪ್ರಕರಣವನ್ನು ರಾಜಕೀಯಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆಡಳಿತಾರೂಢ ಕಾಂಗ್ರೆಸ್ ತಿರುಗೇಟು ನೀಡಿದೆ.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಜನರಲ್ಲಿ ಕ್ಷಮೆಯಾಚಿಸಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ತನಿಖೆಯ ಸಮಯದಲ್ಲಿ ಎಸ್‌ಐಟಿಗೆ ಏನೂ ಸಿಕ್ಕಿಲ್ಲ. ಹೀಗಾಗಿ ಸರ್ಕಾರ ತನ್ನ ತಪ್ಪನ್ನು ಅರಿತುಕೊಂಡಿದ್ದು, ಧರ್ಮಸ್ಥಳದ ವಿರುದ್ಧ ಪಿತೂರಿ ನಡೆದಿದೆ ಎಂದು ಡಿಕೆ ಶಿವಕುಮಾರ್ ಈಗ ಹೇಳುತ್ತಿದ್ದಾರೆ.
ಶಬರಿಮಲೆ ಅಪಪ್ರಚಾರದಲ್ಲಿ ಭಾಗಿಯಾಗಿರುವವರೇ ಇದೀಗ ಧರ್ಮಸ್ಥಳದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಮ್ಯುನಿಸ್ಟ್ ಪಕ್ಷದಂತೆ ಕೆಲಸ ಮಾಡುತ್ತಿದೆ. ಅನಾಮಧೇಯ ದೂರುದಾರರ ನಿರ್ದೇಶನದಂತೆ ಎಸ್‌ಐಟಿ ಕಾರ್ಯನಿರ್ವಹಿಸುತ್ತಿದೆ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೊಂಡಿರುವ ಅನಾಮಧೇಯ ದೂರುದಾರನನ್ನು ಬಂಧನಕ್ಕೊಳಪಡಿಸಬೇಕೆಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಏತನ್ಮಧ್ಯೆ, ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ವಿಧಾನಮಂಡಲದ ಉಭಯ ಸದನಗಳ ಮುಂದೆ ಎಸ್‌ಐಟಿ ತನಿಖೆಯ ಮಧ್ಯಂತರ ವರದಿಯನ್ನು ಮಂಡಿಸುವಂತೆ ಮತ್ತು ಜನರ ಮನಸ್ಸಿನಲ್ಲಿ ಮೂಡಿರುವ ಅನುಮಾನಗಳನ್ನು ಹೋಗಲಾಡಿಸುವಂತೆ ಒತ್ತಾಯಿಸಿದ್ದಾರೆ.
ಎಸ್ಐಟಿ ತನಿಖೆಯನ್ನು ಪೂರ್ಣಗೊಳಿಸಲು ಸರ್ಕಾರ ಗಡುವು ನಿಗದಿಪಡಿಸಬೇಕು. "ಜನರು ಕೋಪ ಮತ್ತು ಅಸಮಾಧಾನದಲ್ಲಿದ್ದಾರೆ. ಒಂದು ವೇಳೆ, ಧರ್ಮಸ್ಥಳ ಭಕ್ತರು ಮತ್ತು ಸಮಾಜ ಸುಧಾರಕರೆಂದು ಕರೆಯಲ್ಪಡುವವರ ನಡುವೆ ಘರ್ಷಣೆ ನಡೆದರೆ, ಅದರ ಪರಿಣಾಮಗಳು ಊಹಿಸಲೂ ಸಾಧ್ಯವಿಲ್ಲ. ಅಂತಹ ಅಪಾಯಕಾರಿ ಪರಿಸ್ಥಿತಿ ಉದ್ಭವಿಸಿದರೆ ಸರ್ಕಾರವೇ ಸಂಪೂರ್ಣ ಹೊಣೆಗಾರವಾಗಿರುತ್ತದೆ ಎಂದು ಹೇಳಿದ್ದಾರೆ.
ಈ ನಡುವೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬೃಹತ್ ರ್ಯಾಲಿಯನ್ನು ಪ್ರಾರಂಭಿಸಿರುವ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದ ಬಿಜೆಪಿ ಕಾರ್ಯಕರ್ತರು ಶನಿವಾರ ಧರ್ಮಸ್ಥಳ ತಲುಪಿದ್ದು, ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ, ಕರಾವಳಿ ಕರ್ನಾಟಕ ಪ್ರದೇಶದ ಸಂಸದರು, ಶಾಸಕರು, ಎಂಎಲ್‌ಸಿಗಳು ಮತ್ತು ಪಕ್ಷದ ಪದಾಧಿಕಾರಿಗಳು ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಬಿಜೆಪಿ ಆಗ್ರಹಕ್ಕೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಧರ್ಮಸ್ಥಳ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ದೂರು ದಾಖಲಾಗುವಾಗ ಬಿಜೆಪಿ ಒಂದು ಮಾತನ್ನೂ ಹೇಳಲಿಲ್ಲ, ಈಗ ರಾಜಕೀಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರು ಹಿಂದುತ್ವವನ್ನು ಅವರ ಮನೆ ಆಸ್ತಿ ಎಂದು ಭಾವಿಸಿದ್ದಾರೆ. ಇದು ಯಾರೊಬ್ಬರ ಆಸ್ತಿಯಲ್ಲ. ಅವರವರ ಭಕ್ತಿ, ನಂಬಿಕೆ ಭಾವನೆಗೆ ಸಂಬಂಧಿಸಿದ್ದು. ಬಿಜೆಪಿಯವರದ್ದು ರಾಜಕಾರಣ ಬಿಟ್ಟರೆ ಬೇರೇನೂ ಇಲ್ಲ ಎಂದು ಹೇಳಿದ್ದಾರೆ.
ಮುಸುಕುಧಾರಿ ದೂರು ಕೊಟ್ಟ ದಿನ ಬಿಜೆಪಿಯವರು ಯಾಕೆ ಮಾತನಾಡಲಿಲ್ಲ? ಆತನ ದೂರು ಸರಿಯಿಲ್ಲ ಎಂದು ಯಾಕೆ ಹೇಳಲಿಲ್ಲ? ಎಸ್ಐಟಿ ರಚಿಸಿದ ಮೊದಲ ದಿನ ಯಾಕೆ ಮಾತನಾಡಲಿಲ್ಲ ನಮಗೆ ರಾಜಕೀಯಕ್ಕೆ ಧರ್ಮಸ್ಥಳ ಬೇಡ. ಧರ್ಮಸ್ಥಳದ ಗೌರವ ಕಾಪಾಡುವುದು ನಮ್ಮ ಚಿಂತನೆ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಆಗಲಿ ಎನ್ನುವವರು ನಾವು. ನ್ಯಾಯಾಲಯದ ಮುಂದೆ ದೂರು ನೀಡಿದ ನಂತರವೂ ಸರ್ಕಾರ ತನಿಖೆ ಮಾಡದಿದ್ದರೇ ಬಿಜೆಪಿಯವರು ಏನು ಹೇಳುತ್ತಿದ್ದರು? ಅವರೇ ಟೀಕೆ ಮಾಡುತ್ತಿರಲಿಲ್ಲವೇ? ಈಗ ಈ ರೀತಿ ರಾಜಕಾರಣ ಮಾಡುತ್ತಿದ್ದು, ನಾವು ಇದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಮುಸುಕುಧಾರಿ ದೂರುದಾರನಿಗೆ ಮಂಪರು ಪರೀಕ್ಷೆ ಮಾಡಬೇಕು ಎಂಬ ಬೇಡಿಕೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಅವರು ಏನಾದರೂ ಆಗ್ರಹ ಮಾಡಲಿ, ಮಂಪರು ಪರೀಕ್ಷೆ ಅಥವಾ ಬೇರೆ ಯಾವುದೇ ತನಿಖೆಗೆ ಬೇಕಾದರೂ ಆಗ್ರಹಿಸಲಿ. ಅದು ತಪ್ಪಲ್ಲ. ಎಸ್ಐಟಿ ತನಿಖೆ ಸ್ವಾಗತಿಸಿದವರು ಇಂದು ಈ ರೀತಿ ಮಾತನಾಡುತ್ತಿದ್ದಾರೆ. ಎಷ್ಟು ಗುಂಡಿ ತೆಗೆಯಬೇಕು, ಬೇಡ ಎಂದು ತನಿಖಾಧಿಕಾರಿಗಳು ನಿರ್ಧರಿಸುತ್ತಾರೆ. ಅವರ ತನಿಖೆಯಲ್ಲಿ ನಾವೇಕೆ ಹಸ್ತಕ್ಷೇಪ ಮಾಡಬೇಕು? ಎಂದು ಮರುಪ್ರಶ್ನಿಸಿದರು.
Advertisement