
ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಕುರಿತು ಹೇಳಿಕೆ ನೀಡಿದ ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಶಿಸ್ತು ಪಾಲನಾ ಸಮಿತಿ ಭಾನುವಾರ ನೋಟಿಸ್ ನೀಡಿದೆ.
'ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಪಕ್ಷದಲ್ಲಿ ಗೊಂದಲ ಹಾಗೂ ಮುಜುಗರ ಉಂಟು ಮಾಡುವ ರೀತಿಯ ಹೇಳಿಕೆಗಳನ್ನು ನೀಡಿದ್ದೀರಿ. ತಮ್ಮ ಈ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ಉಂಟಾಗಿದ್ದಲ್ಲದೆ, ಪಕ್ಷ ಶಿಸ್ತು ಉಲ್ಲಂಘನೆಯಾಗಿರುತ್ತದೆ. ಈ ಅಶಿಸ್ತಿನ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಈ ನೋಟಿಸ್ ನೀಡಲಾಗಿದೆ. ಈ ನೋಟಿಸ್ ತಲುಪಿದ ಏಳು ದಿನಗಳಲ್ಲಿ ನಿಮ್ಮ ಹೇಳಿಕೆಗಳ ಕುರಿತು ಸಮಜಾಯಿಷಿ ನೀಡಬೇಕು' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಶಿವಗಂಗಾ ಅವರ ಹೇಳಿಕೆಯು ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಯನ್ನು ಹುಟ್ಟುಹಾಕಿದೆ.
'ಡಿಸೆಂಬರ್‌ನಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಿಎಂ ಆಗಲಿದ್ದಾರೆ. ಅಲ್ಲಿಯವರೆಗೂ ನಾನು ಮಾಧ್ಯಮಗಳ ಎದುರು ಏನೂ ಮಾತನಾಡುವುದಿಲ್ಲ' ಎಂದು ಶಾಸಕ ಬಸವರಾಜು ಶಿವಗಂಗಾ ಅವರು ಶನಿವಾರ ದಾವಣಗೆರೆಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.
ಕಾಂಗ್ರೆಸ್ ರಾಜ್ಯ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಶನಿವಾರ, ಶಿವಗಂಗಾ ಅವರ ಹೇಳಿಕೆಯನ್ನು ಪಕ್ಷದ ಶಿಸ್ತಿನ ಉಲ್ಲಂಘನೆ ಎಂದು ಕರೆದ ಅವರು, ಅವರಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದ್ದರು.
'ಮುಖ್ಯಮಂತ್ರಿ ಹುದ್ದೆ ಮತ್ತು ಇತರ ವಿಷಯಗಳ ಬಗ್ಗೆ ಯಾರೂ ಮಾತನಾಡಬಾರದು. ಶಾಸಕರು ಪಕ್ಷದ ಶಿಸ್ತನ್ನು ಪಾಲಿಸಬೇಕು. ಅವರು ಗೆರೆ ಮೀರಬಾರದು. ಅನಗತ್ಯ ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲ ಸೃಷ್ಟಿಸದಂತೆ ಅವರಿಗೆ ಹಿಂದೆಯೇ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಇದರ ಹೊರತಾಗಿಯೂ, ಶಿವಗಂಗಾ ಮತ್ತೊಮ್ಮೆ ಈ ವಿಷಯದ ಬಗ್ಗೆ ಹೇಳಿಕೆ ನೀಡುವುದು ಪಕ್ಷದ ಶಿಸ್ತಿನ ಉಲ್ಲಂಘನೆಯಾಗಿದೆ. ಆದ್ದರಿಂದ ಅವರಿಗೆ ನೋಟಿಸ್ ನೀಡಲಾಗುವುದು' ಎಂದು ಶಿವಕುಮಾರ್ ಹೇಳಿದರು.
Advertisement