2028 ಚುನಾವಣೆ: ಸಿಎಂ ರೇಸ್'ನಲ್ಲಿ ನಾನಿಲ್ಲದಿದ್ದರೂ ಕಾಂಗ್ರೆಸ್ ಅಧಿಕಾರಕ್ಕೇರುವುದು ಖಚಿತ- ಸಿದ್ದರಾಮಯ್ಯ

ಮುಂದಿನ ಸಿಎಂ ರೇಸ್ ನಲ್ಲಿ ಇರುವುದಿಲ್ಲ. ಆದರೆ ನಮ್ಮ ಮತಗಳು ನಿಮಗೆ (ವಿರೋಧ ಪಕ್ಷಗಳಿಗೆ) ಯಾವುದೇ ಕಾರಣಕ್ಕೂ ನಿಮಗೆ ಬರುವುದಿಲ್ಲ. ಏಕೆಂದರೆ ನೀವು ದಲಿತ ವಿರೋಧಿ, ಒಬಿಸಿ ವಿರೋಧಿ ಮತ್ತು ಅಲ್ಪಸಂಖ್ಯಾತರ ವಿರೋಧಿ.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿ ನಾನಿಲ್ಲದಿದ್ದರೂ, ಕಾಂಗ್ರೆಸ್ ಅಧಿಕಾರಕ್ಕೇರುವುದನ್ನು ಖಚಿತಪಡಿಸುತ್ತೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.

ಸದನದಲ್ಲಿ ಸಿದ್ದರಾಮಯ್ಯ ಅವರು ಸಿಎಂ ರೇಸ್ ನಲ್ಲಿ ಇರದಿದ್ದರೆ, ಕಾಂಗ್ರೆಸ್ ಮತಗಳು ವಿರೋಧ ಪಕ್ಷಗಳಿಗೆ ಹೋಗುತ್ತವೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಮುಂದಿನ ಸಿಎಂ ರೇಸ್ ನಲ್ಲಿ ಇರುವುದಿಲ್ಲ. ಆದರೆ ನಮ್ಮ ಮತಗಳು ನಿಮಗೆ (ವಿರೋಧ ಪಕ್ಷಗಳಿಗೆ) ಯಾವುದೇ ಕಾರಣಕ್ಕೂ ನಿಮಗೆ ಬರುವುದಿಲ್ಲ. ಏಕೆಂದರೆ ನೀವು ದಲಿತ ವಿರೋಧಿ, ಒಬಿಸಿ ವಿರೋಧಿ ಮತ್ತು ಅಲ್ಪಸಂಖ್ಯಾತರ ವಿರೋಧಿ. ಬಿಜೆಪಿ ಮತ್ತು ಜೆಡಿಎಸ್ ಒಂದಾದರೂ, ಕಾಂಗ್ರೆಸ್‌ನ 141 ಸ್ಥಾನಗಳು ಕಡಿಮೆಯಾಗುವುದಿಲ್ಲವಾದ್ದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಾಗಲಿ, ಜೆಡಿಎಸ್‌ ಆಗಲಿ, ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಶಾಸಕ ಬಸನಗೌಡ ಯತ್ನಾಳ್‌ ಅವರಾಗಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಬಸನಗೌಡ ಪಾಟೀಲ್‌ ಯತ್ನಾಳ್‌, ನನ್ನನ್ನು ಉಚ್ಚಾಟಿತ ಎನ್ನುತ್ತಿದ್ದೀರಿ. ನಿಮ್ಮನ್ನೂ ದೇವೇಗೌಡರು ಹಿಂದೆ ಉಚ್ಚಾಟನೆ ಮಾಡಿದ್ದರು. ಉಚ್ಚಾಟನೆ ಮಾಡಿದ ಬಳಿಕ ನೀವು ಮುಖ್ಯಮಂತ್ರಿ ಆಗಿದ್ದೀರಿ. ನಾನೂ ಸಿಎಂ ಆಗುತ್ತೇನೆ. ನಿಮ್ಮದು ಕೊನೇ ಅವಧಿ. ಮುಂದಿನ ಬಾರಿಗೆ ನೀವು ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳಿಬಿಟ್ಟಿದ್ದೀರಿ. ಹೀಗಾಗಿ ನಿಮ್ಮ ಮತ ಪಡೆದು ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಕಾಲೆಳೆದರು.

ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಜನವಿರೋಧಿ ಕಾರ್ಯಗಳನ್ನು ಹೀಗೆಯೇ ಮುಂದುವರೆಸಿದರೆ, ಖಂಚಿತವಾಗಿಯೂ ನಾವು 175 ಸ್ಥಾನಗಳನ್ನು ಗೆಲ್ಲುತ್ತೇವೆಂದು ಹೇಳಿದರು.

CM Siddaramaiah
'ಜನರ ನಿರೀಕ್ಷೆಗಳಿಗೆ ತಲೆಬಾಗಬೇಕಾಗುತ್ತದೆ'; ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ 20 ಕಾಲ್ತುಳಿತ ಘಟನೆ: ಸಿಎಂ ಸಿದ್ದರಾಮಯ್ಯ

ಬಳಿಕ ಜೆಡಿಎಸ್‌ ನಾಯಕ ಸುರೇಶ್‌ ಬಾಬು ಅವರು ಬಹುಮತ ಕೊರತೆ ಉಂಟಾದರೆ ನಮ್ಮನ್ನು ಕೇಳಲ್ಲವೇ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಿಎಂ, ನೀವು ಬಿಜೆಪಿ ಜತೆ ಯಾವಾಗ ಸೇರಿಕೊಂಡರೋ ಆಗ ನೀವು ಒಂಥರಾ ಅಸ್ಪೃಶ್ಯರ ರೀತಿ ಆಗಿದ್ದೀರಿ. ನಿಮಗೆ ಯಾವುದೇ ಸಿದ್ಧಾಂತವಿಲ್ಲ. ಜೆಡಿಎಸ್‌ ಪಕ್ಷ ಕಟ್ಟಿದವನು, ಅಧ್ಯಕ್ಷನಾದವನು ನಾನು. ಆ ಪಕ್ಷದಿಂದ ನಾನು ಅಧ್ಯಕ್ಷನಾಗಿದ್ದಾಗ 59 ಸ್ಥಾನ ಗೆದ್ದಿದ್ದೆವು. ಈಗ 18ಕ್ಕೆ ಬಂದಿದ್ದೀರಿ, ಮುಂದಿನ ಸಲ 2-3 ಅಷ್ಟೇ. ನೀವು ಬಿಜೆಪಿ ಜೊತೆ ವಿಲೀನ ಆದರೂ ಆಗಬಹುದು. ವಿಲೀನಕ್ಕೆ ದೇವೇಗೌಡರಿಗೆ ಸಲಹೆ ನೀಡಿ ಎಂದು ಕಿಚಾಯಿಸಿದರು.

ಮುಂದಿನ (2028ರ) ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವೇ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಆದರೆ, ನಾನು ಮುಖ್ಯಮಂತ್ರಿಯಾಗುವುದಿಲ್ಲ! ಹೀಗಂತ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸದನದಲ್ಲಿ ಘೋಷಿಸಿದ್ದಾರೆ. ಅಭಿವೃದ್ಧಿ ಕುರಿತ ಚರ್ಚೆಗೆ ಉತ್ತರ ನೀಡುವ ವೇಳೆ ಶುಕ್ರವಾರ ಮಾತನಾಡಿದ ಅವರು, ‘2028ರಲ್ಲಿ ನಮ್ಮ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರುತ್ತದೆ. ಇದು ನೂರಕ್ಕೆ ನೂರರಷ್ಟು ಸತ್ಯ. ಆದರೆ, ಮುಂದಿನ ಅವಧಿಗೆ ನಾನು ಮುಖ್ಯಮಂತ್ರಿ ಆಗುವುದಿಲ್ಲ. ಇನ್ನು ಜೆಡಿಎಸ್‌ 2-3 ಸ್ಥಾನ ಬಂದರೆ ಅದೇ ಹೆಚ್ಚು. ಹೀಗಾಗಿ ಜೆಡಿಎಸ್‌ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಲಿ’ ಎಂದು ಲೇವಡಿ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com