
ಮೈಸೂರು: ಧರ್ಮಸ್ಥಳದ ಪಾವಿತ್ರ್ಯವನ್ನು ಎತ್ತಿಹಿಡಿದು ವಿಶೇಷ ತನಿಖಾ ದಳದ (ಎಸ್‌ಐಟಿ) ತನಿಖೆಗೆ ಆದೇಶಿಸಿದ್ದಕ್ಕಾಗಿ ಬಿಜೆಪಿ ಕಾಂಗ್ರೆಸ್ ಸರ್ಕಾರಕ್ಕೆ ಕೃತಜ್ಞರಾಗಿರಬೇಕು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಷ್ಕರ್ಮಿಗಳು ಹಲವು ವರ್ಷಗಳಿಂದ ಧರ್ಮಸ್ಥಳದ ಖ್ಯಾತಿಗೆ ಕಳಂಕ ತರಲು ಪ್ರಯತ್ನಿಸಿದ್ದಾರೆ. ಆದರೆ, ಎಸ್‌ಐಟಿ ತನಿಖೆ ಸತ್ಯವನ್ನು ಬಹಿರಂಗಪಡಿಸಿದೆ. ಧರ್ಮಸ್ಥಳದ ಪಾವಿತ್ರ್ಯವನ್ನು ಎತ್ತಿ ಹಿಡಿದಿದೆ. ತನಿಖೆಯನ್ನು ಪ್ರಾರಂಭಿಸಿದ್ದಕ್ಕಾಗಿ ಬಿಜೆಪಿ ಕಾಂಗ್ರೆಸ್ ಸರ್ಕಾರಕ್ಕೆ ಧನ್ಯವಾದ ಹೇಳಬೇಕು ಎಂದು ಹೇಳಿದರು.
ಇದೇ ವೇಳೆ ಆರ್.ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಧರ್ಮಸ್ಥಳದ ವಿರುದ್ಧ ಆರೋಪ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮವಾಗಬೇಕು ಎಂದು ವಿಜಯೇಂದ್ರ, ಆರ್.ಅಶೋಕ್ ಈಗ ಮಾತನಾಡುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಸೌಜನ್ಯ ಹೋರಾಟ ನಡೆಯುವಾಗ ಇವರೆಲ್ಲ ಎಲ್ಲಿ ಹೋಗಿದ್ದರು. ಇವರದೇ ಸರ್ಕಾರವಿತ್ತಲ್ಲಾ ಎಂದು ಪ್ರಶ್ನಿಸಿದರು.
ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸಮರ್ಥಿಸಿಕೊಂಡ ಅವರು, ಬದ್ಧತೆ ಹೊಂದಿರುವ ಕಾಂಗ್ರೆಸ್ ನಾಯಕ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅತ್ಯುತ್ತಮ ಅಧ್ಯಕ್ಷರಲ್ಲಿ ಒಬ್ಬರು ಎಂದು ಕರೆದರು.
ಎಸ್‌ಐಟಿ ರಚನೆ ಮಾಡಿದಾಗ ಬಾಯಿಮುಚ್ಚಿಕೊಂಡು ಸುಮ್ಮನಿದ್ದು ಈಗ ಲಾಭ ಪಡೆಯೋಕೆ ನೋಡುತ್ತಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಕ್ರಮ ಆಗಬೇಕು ಎಂದಾಗ ಬಿಜೆಪಿಯವರಿಗೆ ಜ್ಞಾನೋದಯವಾಗಿದೆ. ಎಸ್‌ಐಟಿ ಮೂಲಕ ನಮ್ಮ ಸರ್ಕಾರ ಸತ್ಯವನ್ನು ಹೊರಗೆ ತಂದಿದೆ. ಇನ್ನು ಮುಂದೆಯಾದರೂ ಬಿಜೆಪಿಯವರು ಧರ್ಮಧ ವಿಚಾರದಲ್ಲಿ ರಾಜಕಾರಣ ಮಾಡೋದನ್ನು ಬಿಡಲಿ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಡಿ.ಕೆ.ಶಿವಕುಮಾರ್ ಬಿಜೆಪಿಗೆ ಹೋಗುವುದಾಗಿದ್ದರೆ ಎಂದೋ ಹೋಗಿರುತ್ತಿದ್ದರು. ಕಾಂಗ್ರೆಸ್‌ನಲ್ಲಿ ಗಟ್ಟಿ ನೆಲೆ ಕಂಡುಕೊಂಡಿದ್ದಾರೆ. ಉತ್ತಮ ಕೆಪಿಸಿಸಿ ಅಧ್ಯಕ್ಷರು ಅಂತ ಹೆಸರು ಪಡೆದಿದ್ದಾರೆ. ಅವರೇಕೆ ಈಗ ಬಿಜೆಪಿಗೆ ಹೋಗುತ್ತಾರೆ. ಸಂದರ್ಭ ಬಂದಾಗ ಅವರೂ ಸಿಎಂ ಆಗುತ್ತಾರೆ. ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ’ ಎಂದರು.
ಇದೇ ವೇಳೆ ಮುಂಬರುವ ದಸರಾ ಉತ್ಸವ ಉದ್ಘಾಟಿಸಲು ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದಕ್ಕೆ ಧಾರ್ಮಿಕ ಮತ್ತು ಜಾತಿ ಆಧಾರಿತ ಆಕ್ಷೇಪಣೆಗಳು ಬರುತ್ತಿರುವುದನ್ನು ಸಚಿವರು ಖಂಡಿಸಿದರು.
Advertisement