

ನವದೆಹಲಿ: ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ನಡೆಯುತ್ತಿರುವ ಹೋರಾಟದ ನಡುವೆ ಬುಧವಾರ ದೆಹಲಿಗೆ ತೆರಳಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಪಕ್ಷದ ಕೇಂದ್ರ ನಾಯಕರನ್ನು ಭೇಟಿ ಮಾಡುವ ಊಹಾಪೋಹಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಡಿಸೆಂಬರ್ 14 ರಂದು ನಡೆಯಲಿರುವ 'ವೋಟ್ ಚೋರಿ' ರ್ಯಾಲಿಯ ಸಿದ್ಧತೆಗಳ ಮೇಲ್ವಿಚಾರಣೆ ಮಾಡಲು ಮತ್ತು ಮದುವೆಯಲ್ಲಿ ಭಾಗವಹಿಸಲು ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷರು ಆಗಿರುವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಗೆ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, "ಮೊದಲನೆಯದಾಗಿ ನನ್ನ ಸ್ನೇಹಿತನ ಮಗನ ಮದುವೆಯಲ್ಲಿ ಭಾಗವಹಿಸಲು ನಾನು ಬಂದಿದ್ದೇನೆ. ಎರಡನೆಯದಾಗಿ, ಡಿಸೆಂಬರ್ 14 ರಂದು ವೋಟ್ ಚೋರಿ ರ್ಯಾಲಿಗೆ ವ್ಯವಸ್ಥೆ ಮಾಡಲು ಬಯಸಿದ್ದೇನೆ. ಕರ್ನಾಟಕದಿಂದ 10,000 ಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆಯಿದೆ. ಅವರಿಗೆ ವಾಸ್ತವ್ಯ ಮತ್ತು ಸಾರಿಗೆ ಸೇರಿದಂತೆ ಇತರ ವ್ಯವಸ್ಥೆಗಳ ಬಗ್ಗೆ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಚರ್ಚಿಸಲು ನಾನು ಬಂದಿದ್ದೇನೆ" ಎಂದರು.
ಈ ಮಧ್ಯೆ ಗುರುವಾರ ಬೆಳಗ್ಗೆ 11 ಗಂಟೆಗೆ ಕ್ಯಾಬಿನೆಟ್ ಸಭೆ ನಿಗದಿಯಾಗಿರುವುದರಿಂದ ನಾಳೆ ಬೆಂಗಳೂರಿಗೆ ಹಿಂದಿರುಗುವುದಾಗಿ ಡಿಸಿಎಂ ತಿಳಿಸಿದ್ದಾರೆ.
"ಕೇಂದ್ರ ನಾಯಕರು ಸಂಸತ್ ಅಧಿವೇಶನದಲ್ಲಿ ನಿರತರಾಗಿರುವುದರಿಂದ ನಾನು ಯಾರನ್ನೂ ಭೇಟಿಯಾಗುವುದಿಲ್ಲ ಮತ್ತು ಅವರನ್ನು ಮುಜುಗರಕ್ಕೀಡು ಮಾಡಲು ಬಯಸುವುದಿಲ್ಲ. ನಾನು ಬೆಂಗಳೂರಿಗೆ ಹಿಂತಿರುಗಬೇಕಾಗಿದೆ" ಎಂದು ಡಿಕೆಶಿ ಹೇಳಿದರು.
Advertisement