

ಬೆಂಗಳೂರು: ಜಾತ್ಯಾತೀತ ಜನತಾ ದಳ ಪಕ್ಷದ ರಾಜ್ಯ ಕೋರ್ ಸಮಿತಿ ಸಭೆ ಬುಧವಾರ ನಡೆದಿದ್ದು, ಸಭೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿ ಹೊಸದಾಗಿ ರಚನೆಯಾದ ಐದು ಪಾಲಿಕೆ ಚುನಾವಣೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಪಕ್ಷದ ಸಂಘಟನೆಯನ್ನು ಬಲಪಡಿಸುವ ಕ್ರಮಗಳ ಕುರಿತು ಚರ್ಚಿಸಲಾಯಿತು.
ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯ ಕೋರ್ ಸಮಿತಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ ಅವರು, ಪಕ್ಷದ ಸಂಘಟನೆಯನ್ನು ಬಲಪಡಿಸಲು ಜಿಲ್ಲಾ ಪ್ರವಾಸಗಳನ್ನು ಕೈಗೊಳ್ಳುವುದು ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು ಎಂದು ಹೇಳಿದರು.
ಜನವರಿಯಿಂದ ಪ್ರತಿ ವಾರ ಮೂರು ಜಿಲ್ಲೆಗಳಿಗೆ ಭೇಟಿ ನೀಡುವ ಬಗ್ಗೆಯೂ ಚರ್ಚಿಸಲಾಗಿದೆ. ಈ ಕುರಿತು ದಿನಾಂಕಗಳನ್ನು ಶೀಘ್ರದಲ್ಲೇ ನಿಗದಿಪಡಿಸಲಾಗುವುದು. ಭವಿಷ್ಯದ ಕ್ರಮಗಳ ಕುರಿತು ಚರ್ಚಿಸಲು ಡಿಸೆಂಬರ್ 22 ರಂದು ಬೆಂಗಳೂರಿನಲ್ಲಿ ಜಿಲ್ಲಾಧ್ಯಕ್ಷರ ಸಭೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಜಿಬಿಎಯಲ್ಲಿ ನಡೆಯುವ ಪಾಲಿಕೆ ಚುನಾವಣೆಯಲ್ಲಿ ಹಲವು ವಾರ್ಡ್‌ಗಳಿಂದ ಸ್ಪರ್ಧಿಸಲು ಒತ್ತು ನೀಡಲಾಗುತ್ತದೆ. ಐದು ಪಾಲಿಕೆಗಳಲ್ಲಿ ಮೈತ್ರಿ ಪಕ್ಷ ಬಹುಮತ ಪಡೆಯುವ ವಿಶ್ವಾಸವಿದೆ ಎಂದು ಹೇಳಿದರು.
Advertisement