

ಬೆಳಗಾವಿ: ಭ್ರಷ್ಟಾಚಾರ ಮತ್ತು ಅಧಿಕಾರದ ಕಿತ್ತಾಟದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ, ರೈತರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಬಲಿ ಕೊಟ್ಟಿದೆ ಎಂದು ಬಿಜೆಪಿ ಕಿಡಿಕಾರಿದೆ.
ಸುವರ್ಣ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ರೈತರ ಸಮಸ್ಯೆಗಳು ಬಗೆಹರಿಯದೆ ಉಳಿದಿವೆ. ಮೆಕ್ಕೆಜೋಳ ಬೆಳೆಗಾರರ ಕುಂದುಕೊರತೆಗಳನ್ನು ಕೇಳುವವರೇ ಇಲ್ಲ. ರೈತರು ತಮ್ಮ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಧ್ಯವರ್ತಿಗಳಿಗೆ ಮಾರಾಟ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಹತ್ತಿ, ತೊಗರಿ ಬೇಳೆ ಮತ್ತು ಇತರ ಹಲವಾರು ಬೆಳೆಗಳ ಬೆಲೆ ಕುಸಿದಿದೆ, ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಪ್ರಮುಖ ಇಲಾಖೆಗಳಲ್ಲಿ ಯಾವುದೇ ನೇಮಕಾತಿ ನಡೆಯುತ್ತಿಲ್ಲ. ಇದರೆಲ್ಲದರ ಮೇಲೆ ಮುಖ್ಯಮಂತ್ರಿ ಕುರ್ಚಿಗಾಗಿ ಸಿಎಂ ಹಾಗೂ ಡಿಸಿಎಂ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟ ರಾಜ್ಯದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದರು.
ಪಂಜಾಬ್‌ನಲ್ಲಿ ರೈತರ ಪ್ರತಿಭಟನೆಯನ್ನು ಬಿಜೆಪಿ ಬೆಂಬಲಿಸಲಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ಪಂಜಾಬ್ ಆಗಲೀ, ಅಮೆರಿಕಾ ಆಗಲೀ ಅದರ ಬಗ್ಗೆ ನಮ್ಮ ಆಸಕ್ತಿಯಿಲ್ಲ. ಕರ್ನಾಟಕ ರೈತರು ನಮ್ಮ ಆದ್ಯತೆ, ಅದಕ್ಕಾಗಿಯೇ ನಾವು ರೈತರ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದೇವೆಂದು ತಿಳಿಸಿದರು.
ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ರಾಜ್ಯ ಸರ್ಕಾರವು ಪ್ರಮುಖ ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಬೇಕು. ಇಲ್ಲವೇ, ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಹೇಳಿದ್ದಾರೆ.
ಸರ್ಕಾರದ ದ್ವಂದ್ವ ನೀತಿಯಿಂದ ಮೆಕ್ಕೆಜೋಳ ಖರೀದಿ ವಿಚಾರ, ಕಬ್ಬು ಬೆಳೆಗಾರರ ಸಮಸ್ಯೆಗಳು- ಹೀಗೆ ಅನೇಕ ಸಮಸ್ಯೆಗಳಿಗೆ ಸರ್ಕಾರ ಕಾರಣವಾಗಿದೆ. ಇವೆಲ್ಲವನ್ನು ತೆಗೆದುಕೊಂಡು ನಮ್ಮ ಹೋರಾಟವನ್ನು ಮುಂದುವರೆಸಬೇಕಾಗಿದೆ ಎಂದು ತಿಳಿಸಿದರು.
ರೈತರು, ಶಿಕ್ಷಕರು, ವಿದ್ಯಾರ್ಥಿಗಳ ಸಮಸ್ಯೆಗಳು, ರೈತರಿಗೆ ಅತಿವೃಷ್ಟಿ- ಅನಾವೃಷ್ಟಿ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ಸಮಸ್ಯೆಗಳು ಸೇರಿ ಉತ್ತರ ಭಾಗದ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಉತ್ತರ ಕರ್ನಾಟಕಕ್ಕೆ ಪ್ರಥಮ ಆದ್ಯತೆ ಇರಬೇಕೆಂದು ಸಭಾಪತಿಯವರಿಗೂ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ಶ್ವೇತ ಪತ್ರ ಹೊರಡಿಸಿ: ಸಿಟಿ ರವಿ ಆಗ್ರಹ
ಮೆಕ್ಕೆಜೋಳ ಬೆಳೆದ ರೈತರು ಕಳೆದ ಒಂದುವರೆ ತಿಂಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೂ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. ರೈತರ, ಸಾರ್ವಜನಿಕರ ವಿಷಯದಲ್ಲಿ ಸರ್ಕಾರ ಕಣ್ಣಿದ್ದು ಕುರುಡಾಗಿದೆ. ಇಲ್ಲಿಯವರೆಗೆ ಎಷ್ಟು ಅನುದಾನ ಬಿಡುಗಡೆ ಮಾಡಿದ್ದೀರಿ. ಎಷ್ಟು ಖರ್ಚು ಆಗಿದೆ ಎಂಬುದರ ಬಗ್ಗೆ ಕಾಂಗ್ರೆಸ್ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು ಎಂದು ಸಿ.ಟಿ.ರವಿಯವರು ಆಗ್ರಹಿಸಿದ್ದಾರೆ.
ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ವಿಚಾರದ ಬಗ್ಗೆ ಕೆಲವರು ಸಲಹೆ ನೀಡಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದರು.
Advertisement