

ಬೆಳಗಾವಿ: ಸಿಎಂ-ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಮುಗಿದು ಕುರ್ಚಿ ಕದನ ತಣ್ಣಗಾಯಿತು ಎಂದು ಅಂದುಕೊಂಡಿರುವಾಗಲೇ ಸಿಎಂ ಸಿದ್ದರಾಮಯ್ಯ ಪುತ್ರ ಡಾ ಯತೀಂದ್ರ ನೀಡಿರುವ ಹೇಳಿಕೆ ಮತ್ತೆ ರಾಜ್ಯ ರಾಜಕೀಯದಲ್ಲಿ ಬೆಳಗಾವಿ ಅಧಿವೇಶನ ಮಧ್ಯೆ ಸಂಚಲನ ಮೂಡಿಸಿದೆ.
ಮೇಲ್ಮನೆ ಸದಸ್ಯ ಡಾ. ಯತೀಂದ್ರ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದಾರೆ. 5 ವರ್ಷವೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದು, ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಿಲ್ಲ ಎಂದಿದ್ದಾರೆ. ಇದಕ್ಕೆ ಡಿ ಕೆ ಶಿವಕುಮಾರ್ ಬೆಂಬಲಿಗ ಶಾಸಕರು ಸೇರಿದಂತೆ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.
ಇತ್ತ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರರನ್ನು ಕರೆದು ಬುದ್ದಿ ಹೇಳುವ ಕೆಲಸ ಮಾಡಿದ್ದಾರೆ. ನಿನ್ನೆ ಬೆಳಗಾವಿಯ ಸರ್ಕಿಟ್ ಹೌಸ್‌ಗೆ ಪುತ್ರನನ್ನು ಕರೆಸಿಕೊಂಡ ಸಿಎಂ ಸಿದ್ದರಾಮಯ್ಯ ಸುಮಾರು 1 ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಬಳಿಕ ಪದೇ ಪದೇ ಈ ರೀತಿ ಮಾತನಾಡದಂತೆ ಕಿವಿಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಏನಿದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತೆ, ನೀನು ಮಾತನಾಡುವುದು ಬೇಡ. ಯಾರೂ ಮಾತನಾಡಬಾರದು ಎಂದು ಹೈಕಮಾಂಡ್ ಸೂಚನೆ ಇದೆ. ಯಾರೂ ಮಾತನಾಡುತ್ತಿಲ್ಲ ನೀನೊಬ್ಬನೇ ಮಾತನಾಡಿದರೆ ಬೇರೆ ಸಂದೇಶ ಹೋಗುತ್ತೆ. ಅಧಿವೇಶನ ಸಮಯದಲ್ಲಿ ಅನಗತ್ಯ ಗೊಂದಲ ಆಗುವುದು ಬೇಡ ಎಂದು ಸಿಎಂ ಕಿವಿಮಾತು ಹೇಳಿರುವುದಾಗಿ ಆಪ್ತಮೂಲಗಳು ತಿಳಿಸಿವೆ.
Advertisement