

ಬೆಳಗಾವಿ: ಸಿದ್ದರಾಮಯ್ಯ ಐದು ವರ್ಷ ಅವಧಿ ಪೂರ್ಣಗೊಳಿಸುವ ಮೂಲಕ ದಾಖಲೆ ಸಿಎಂ ಆಗ್ತಾರೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುರುವಾರ ವಿಧಾನಸಭೆಯಲ್ಲಿ ಹೇಳುವ ಮೂಲಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.
ಉತ್ತರ ಕರ್ನಾಟಕ ಭಾಗದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಯತ್ನಾಳ್, 1950 ರಿಂದ ದಕ್ಷಿಣ ಕರ್ನಾಟಕದವರು 15 ಜನ ಮುಖ್ಯಮಂತ್ರಿ ಗಳಾಗಿದ್ದಾರೆ. ಉತ್ತರ ಕರ್ನಾಟಕ ದವರು 8 ಬಾರಿ ಆಗಿದ್ದಾರೆ. ಯಾವ ಮುಖ್ಯಮಂತ್ರಿಯೂ ಐದು ವರ್ಷಗಳನ್ನು ಪೂರೈಸಿಲ್ಲ. ಆರು ತಿಂಗಳು, ಒಂದು ವರ್ಷ ಅಂತಾ ಏನಾದರೂ ಭ್ರಷ್ಟಾಚಾರ ಆರೋಪ ಬಂದ ಇಳಿಸಿ ಅಲ್ಲಿಗೆ ಮತ್ತೊಬ್ಬ ಗಿರಾಕಿ ಯನ್ನು ತಂದು ಕೂರಿಸುತ್ತಾರೆ ಎಂದರು.
ಬಹುಶಃ ಸಿದ್ದರಾಮಯ್ಯನೇ ಇತಿಹಾಸ ರಚನೆ ಮಾಡ್ತಿದ್ದಾರೆ. ಅದಕ್ಕಾಗಿಯೇ ನಮ್ಮ ಸಿದ್ದರಾಮಯ್ಯ ಆ ದಿನಗಳನ್ನು ಕಾಯ್ತಾ ಇದ್ದಾರೆ. ದೇವರಾಜ್ ಅರಸ್ ದಾಖಲೆ ಮುರಿದು, ಇನ್ನೂ ಮುಂದುವರಿದು ಆಮೇಲೆ ಯೋಚನೆ ಮಾಡ್ತೀನಿ ಅಂದಿದ್ದಾರೆ ಹೊರತು ಕುರ್ಚಿ ಬಿಡುತ್ತೇನೆ ಅಂತಾ ಹೇಳಿಲ್ಲ ಎಂದು ಡಿಕೆಶಿಗೆ ಟಾಂಗ್ ಕೊಟ್ಟರು.
ಆಡಳಿತ ಪಕ್ಷದ ಶಾಸಕರ ವಿರುದ್ಧ ವಾಗ್ದಾಳಿ: ಬಹಳ ಜನ ಶಾಸಕರು ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಿ ಸರ್ಕಾರ ಹಾಗೂ ಪಕ್ಷದ ವಿರುದ್ಧ ಮಾತಾಡಿದ್ರೆ ಮಂತ್ರಿ ಮಾಡಲ್ಲ ಅಂತಾ ಅದಕ್ಕಾಗಿ ಏನೇ ಮಾಡಿದ್ರು ಹೊಗಳೋದು, ವಿಪಕ್ಷದಲ್ಲಿದ್ದಾಗ ಟೀಕೆ ಮಾಡೋದು ಮತ್ತೆ ವಿರೋಧ ಪಕ್ಷದಿಂದ ಆಡಳಿತ ಪಕ್ಷಕ್ಕೆ ಬಂದಾಗ ಅದರ ಬಗ್ಗೆ ಗೊತ್ತೇ ಇಲ್ಲದಂತೆ ಇರುತ್ತಿದ್ದಾರೆ ಎಂದು ಹೇಳುವ ಮೂಲಕ ಆಡಳಿತ ಪಕ್ಷದ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.
ತಪ್ಪು ತಪ್ಪೇ ಅದು ರಾಜ್ಯ ಸರ್ಕಾರದೇ ಇರಲಿ, ಕೇಂದ್ರ ಸರ್ಕಾರದೇ ಇರಲಿ, ಕೃಷ್ಣೆಗೆ ನನ್ನ ಸರ್ಕಾರ ಬಂದರೆ 25,000 ಕೋಟಿ ಕೊಡ್ತೀನಿ ಅಂತಾ ರಕ್ತದಲ್ಲಿ ಬರೆದು ಕೊಡ್ತೀನಿ ಅಂದ್ರು, ಇವಾಗ ಅವ್ರು ಎಲ್ಲಿ ಹೋದರು ಎಂದು ಗೊತ್ತೇ ಇಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಮಂತ್ರಿಗಳು ಭಾಷಣ ಬಿಗೀತ್ತಾರೆ. ಆದರೆ ಈ ಭಾಗದ 7 ಜಿಲ್ಲೆಗಳ 38 ಜಿಲ್ಲೆಗಳಲ್ಲಿ ಸಾರಿಗೆ ವ್ಯವಸ್ಥೆಯೇ ಇಲ್ಲ ಎಂದು ಗುಡುಗಿದರು.
ಯಡಿಯೂರಪ್ಪ ವಿರುದ್ಧವೂ ಗುಡುಗಿದ ಯತ್ನಾಳ್: ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರನ್ನೂ ಬಿಟ್ಟಿಲ್ಲ. ಸದನದಲ್ಲೇ ಅವರಿಗೆ ಪ್ರಶ್ನೆ ಮಾಡಿದ್ದೆ. ಶಿವಮೊಗ್ಗಕ್ಕೆ ಬೆಣ್ಣೆ, ಬಿಜಾಪುರಕ್ಕೆ ಸುಣ್ಣಾ ಯಾಕೆ ಅಂತೆ ಯಡಿಯೂರಪ್ಪ ಅವರನ್ನು ಪ್ರಶ್ನೆ ಮಾಡಿದ್ದೆ ಎಂದು ತಿಳಿಸಿದರು. ಸುವರ್ಣಸೌಧದಿಂದ ಸಾರ್ಥಕತೆ ಏನು?ಕಾಟಚಾರಕ್ಕೆ ಅಧಿವೇಶನ ನಡೆಸಬಾರದು. ಇಲ್ಲಿ ಬಂದವರು ಜಾಲಿ ಜಾಲಿಗೆ ಎಂದು ಟೀಕೆ ಮಾಡ್ತಾರೆ. ಅದೇ ರೀತಿ ಆಗಿದೆ, ಐದು ದಿನ ಸದನ ನಡೆಸಿ, ಶನಿವಾರ ಬಂದ್ರೆ ಗೋವಾಗೆ ಹೋಗ್ತಾರೆ ಎಂದು ಕಿಡಿಕಾರಿದರು.
ಮಹಾರಾಷ್ಟ್ರದ ನಾಗ್ಪುರದಲ್ಲಿ ಒಂದು ತಿಂಗಳು ಅಧಿವೇಶನ ನಡೆಯುತ್ತದೆ. ಅಲ್ಲಿ ಎಲ್ಲಾ ಸರ್ಕಾರಿ ಕಚೇರಿ ಗಳು ಕೂಡ ಇರುತ್ತವೆ. ಇಲ್ಲಿ ಯಾವ ಅಧಿಕಾರಿಗಳು ಇದ್ದಾರೆ ಹೇಳಿ..? ಬೆಂಗಳೂರಲ್ಲಿ ಒಂದು ಕ್ಯಾಬಿನೆಟ್ ನಡೆದರೆ, ಇಲ್ಲಿಯೂ ಒಂದು ನಡೆಯಬೇಕು ಎಂದು ಒತ್ತಾಯಿಸಿದರು.
Advertisement