

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಮುಗಿದ ತಕ್ಷಣವೇ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು, ಅಧಿವೇಶನ ಮುಗಿದ ತಕ್ಷಣ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಲಭಿಸಲಿದೆ ಎಂದರು.
ಬೆಳಗಾವಿಯಲ್ಲಿ ನಿನ್ನೆ ನಡೆದ ಡಿ.ಕೆ.ಶಿವಕುಮಾರ್ ಬಣದ ಡಿನ್ನರ್ ಮೀಟಿಂಗ್ ಬಗ್ಗೆ ಪ್ರತಿಕ್ರಿಯಿಸಿದ ಇಕ್ಬಾಲ್ ಹುಸೇನ್, ಪ್ರೀತಿ ವಿಶ್ವಾಸಕ್ಕಾಗಿ ಊಟಕ್ಕೆ ಸೇರುತ್ತೇವೆ. ಅದನ್ನು ಬಣ ರಾಜಕೀಯ, ಶಕ್ತಿ ಪ್ರದರ್ಶನ ಎನ್ನುವುದು ಸರಿಯಲ್ಲ ಎಂದರು.
ಸೌಹಾರ್ದಯುತ ಭೋಜನಕೂಟ. ಊಟಕ್ಕೆ ಯಾರು ಬೇಕಾದರೂ ಬರಬಹುದು, ಇದರಲ್ಲಿ ರಾಜಕೀಯವಿಲ್ಲ. ಕಾಂಗ್ರೆಸ್ ಶಿಸ್ತಿನ ಪಕ್ಷವಾಗಿದ್ದು, ಯಾವುದೇ ನಂಬರ್ ಗೇಮ್‌ಗಳಿಗೆ ಮಹತ್ವ ನೀಡುವುದಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ಅಂತಿಮ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದರು.
ಈ ಅಧಿವೇಶನ ಮುಗಿದ ಬಳಿಕ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಸಿಗುತ್ತದೆ ಎಂಬ ವಿಶ್ವಾಸ ಇದೆ. ಎಲ್ಲದಕ್ಕೂ ಹಣೆ ಬರಹವೇ ಮುಖ್ಯ. ಅವಕಾಶ ಸಿಗದಿದ್ದರೆ ಹಣೆಯ ಬರಹಕ್ಕೆ ಹೊಣೆ ಯಾರು? ಭಗವಂತ ಏನು ಬರೆದಿದ್ದಾರೋ ಅದು ಆಗುತ್ತದೆ ಎಂದರು.
ಡಿಕೆ ಶಿವಕುಮಾರ್ ಅವರ ಹೋರಾಟ, ಶ್ರಮಕ್ಕೆ ಫಲ ಸಿಕ್ಕೇ ಸಿಗುತ್ತದೆ. ನಾವು ನಮ್ಮ ಅಭಿಪ್ರಾಯಗಳನ್ನು ಈಗಾಗಲೇ ಹೈಕಮಾಂಡ್ ನಾಯಕರ ಮುಂದೆ ಹೇಳಿದ್ದೇವೆ. ವರಿಷ್ಠರು ಕರೆದರೆ ನಾವು ಮತ್ತೊಮ್ಮೆ ದೆಹಲಿಗೆ ಹೋಗುತ್ತೇವೆ ಎಂದರು.
Advertisement