

ಬೆಳಗಾವಿ: ಸುವರ್ಣ ಸೌಧದಲ್ಲಿ ಚಳಿಗಾಲ ಅಧಿವೇಶನ ಮಧ್ಯೆ ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಹೆಚ್ಚಾಗುತ್ತಲೇ ಇದೆ. ನಿನ್ನೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಉರಿಯೋ ಬೆಂಕಿಗೆ ತುಪ್ಪ ಸುರಿದಂತೆ ಮಾಡಿದೆ. ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಬ್ರೇಕ್ ಫಾಸ್ಟ್ ಮೀಟಿಂಗ್ ಕಳೆದ ನಂತರ ಎಲ್ಲವೂ ಸದ್ಯಕ್ಕೆ ತಣ್ಣಗಾಯಿತು ಅಂದುಕೊಳ್ಳುತ್ತಿರುವಾಗಲೇ ಇನ್ನೊಂದು ತಿರುವು ಪಡೆದುಕೊಂಡಿದೆ. ರಾಜಕಾರಣ ಬೆಳಗಾವಿಗೆ ಶಿಫ್ಟ್ ಆಗಿ ಸಿಎಂ-ಡಿಸಿಎಂ ಬಣಗಳಿಂದ ಡಿನ್ನರ್ ಮೀಟಿಂಗ್ ಏರ್ಪಟ್ಟಿದೆ.
ಸಿಎಂ ಸಿದ್ದರಾಮಯ್ಯ ಅವರ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಆಪ್ತರ ಜೊತೆ ಕಳೆದ ತಡರಾತ್ರಿ ಡಿನ್ನರ್ ಸಭೆ ನಡೆಸಿದ್ದಾರೆ.ಬುಧವಾರ ರಾತ್ರಿ ಮಾಜಿ ಶಾಸಕ ಫಿರೋಜ್ ಸೇಠ್ ಅವರ ನಿವಾಸದಲ್ಲಿ ನಡೆದ ಭೋಜನ ಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದ ಸಚಿವರು ಮತ್ತು ಶಾಸಕರು ಭಾಗವಹಿಸಿದ್ದರು. ನಿನ್ನೆ ಗುರುವಾರ ರಾತ್ರಿ ತಮ್ಮ ಆಪ್ತ ಗಣಿ ಉದ್ಯಮಿ ದೊಡ್ಡಣ್ಣವರ್ ಅವರ ಫಾರ್ಮ್ ಹೌಸ್‌ನಲ್ಲಿ ಆಪ್ತ ಸಚಿವರು, ಶಾಸಕರ ಜೊತೆ ಡಿಕೆಶಿ ಸಭೆ ನಡೆಸಿದ್ದಾರೆ. ಡಿಕೆಶಿ ಸಹೋದರ ಡಿಕೆ ಸುರೇಶ್ ಅವರು ಈ ಡಿನ್ನರ್ ವ್ಯವಸ್ಥೆ ಮಾಡಿದ್ದರು.
ಈ ಡಿನ್ನರ್ ಸಭೆಯಲ್ಲಿ ಐದಕ್ಕೂ ಹೆಚ್ಚು ಸಚಿವರು, 30ಕ್ಕೂ ಹೆಚ್ಚು ಶಾಸಕರು ಸೇರಿದಂತೆ ಆಪ್ತರು ಭಾಗಿಯಾಗಿದ್ದರು. ಸಿಎಂ ಬಣದವರಿಗೆ ಆಹ್ವಾನ ನೀಡದೇ ಡಿಕೆಶಿ ಆಪ್ತರು ಮಾತ್ರ ಈ ಡಿನ್ನರ್‌ನಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.
ಡಿಸಿಎಂ ಡಿನ್ನರ್ ಸಭೆಯಲ್ಲಿ ಭಾಗಿಯಾದವರು
ಎಂ.ಸಿ ಸುಧಾಕರ್, ಮಂಕಾಳ ವೈದ್ಯ, ಕೆ.ಎಚ್. ಮುನಿಯಪ್ಪ, ಶರಣಪ್ರಕಾಶ್ ಪಾಟೀಲ್, ಡಿ.ಕೆ.ಸುರೇಶ್, ಎಂಎಲ್‌ಸಿ ಚೆನ್ನರಾಜ್ ಹಟ್ಟಿಹೊಳಿ, ಶಾಸಕ ಬಾಬಾಸಾಹೇಬ್ ಪಾಟೀಲ್, ಶಿವರಾಂ ಹೆಬ್ಬಾರ್, ಸಿ.ಪಿ ಯೋಗೇಶ್ವರ್, ಶ್ರೀನಿವಾಸ್ ಮಾನೆ, ಎನ್‌ಎ ಹ್ಯಾರೀಸ್, ಇಕ್ಬಾಲ್ ಹುಸೇನ್, ಗಣೇಶ್ ಹುಕ್ಕೇರಿ, ಎಸ್ ಟಿ ಸೋಮಶೇಖರ್, ಎಂಎಲ್‌ಸಿ ರವಿ, ಸೇರಿ 40ಕ್ಕೂ ಹೆಚ್ಚು ಶಾಸಕರು, ಸಚಿವರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಆದ ಚರ್ಚೆಗಳೇನು?
ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಡಿನ್ನರ್ ಮೀಟಿಂಗ್‌ನಲ್ಲಿ ಹೆಚ್ಚು ಚರ್ಚೆಯಾಗಿದೆ. ಯತೀಂದ್ರಗೆ ನೋಟೀಸ್ ಕೊಡಿ ಎಂದು ಕೆಲ ಶಾಸಕರು ಡಿಕೆಶಿಗೆ ಒತ್ತಡ ಹಾಕಿದ್ದಾರೆ. ಈ ವೇಳೆ ಎಲ್ಲದಕ್ಕೂ ಸರಿಯಾಗಿ ಉತ್ತರ ಕೊಡುತ್ತೇನೆ, ಕಾಯಿರಿ ಎಂದು ಡಿಕೆಶಿ ತಿಳಿಸಿದ್ದಾರೆ ಎನ್ನಲಾಗಿದೆ.
ಮುಂದಿನ ವಾರ ಡಿಕೆಶಿ ದೆಹಲಿಗೆ
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮುಂದಿನ ವಾರ ಡಿಸಿಎಂ ಡಿಕೆಶಿ ಅವರನ್ನು ದೆಹಲಿಗೆ ಹೈಕಮಾಂಡ್ ಕರೆದಿದೆ ಎಂದು ಹೇಳಲಾಗುತ್ತಿದೆ. ಸಿಎಂ ಬದಲಾವಣೆ ವಿಚಾರ ಡಿನ್ನರ್ ಮೀಟಿಂಗ್‌ನಲ್ಲಿ ಚರ್ಚೆಯಾಗಿದ್ದು, ಅಗತ್ಯ ಬಿದ್ದರೆ ಹೈಕಮಾಂಡ್ ಭೇಟಿಗೆ ಹೋಗುತ್ತೇವೆ ಎಂದು ಕೆಲವು ಶಾಸಕರು ಡಿಕೆ ಶಿವಕುಮಾರ್‌ಗೆ ಆಶ್ವಾಸನೆ ನೀಡಿದ್ದಾರೆ. ನಿಮಗೆ ಮುಖ್ಯಮಂತ್ರಿ ಸ್ಥಾನವನ್ನು ಕೊಡಲೇಬೇಕು, ಈ ಬಗ್ಗೆ ಹೈಕಮಾಂಡ್‌ಗೆ ಮನವಿ ಮಾಡ್ಕೊಳ್ಳುತ್ತೇವೆ ಎಂದು ಶಾಸಕರು ಒಕ್ಕೊರಲಿನಿಂದ ಅಭಿಪ್ರಾಯ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.
Advertisement