

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ನಾಯಕತ್ವ ಬದಲಾವಣೆ ಚರ್ಚೆಯು ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದ್ದು, ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಗುರುವಾರ 'ಬಲತ್ಕಾರ' ಎನ್ನುವ ಪದ ಬಳಸಿ ವಿವಾದ ಸೃಷ್ಟಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಮಾತನಾಡಿದರೆ ಬಲತ್ಕಾರ, ಅವರು ಮಾತನಾಡಿದರೆ ಚಮತ್ಕಾರ. ನಾವು ಏನಾದರೂ ಮಾತನಾಡಿದರೆ ನೋಟಿಸ್ ಕೊಡುತ್ತಾರೆ. ನಮ್ಮ ವರಿಷ್ಠರು ಅಷ್ಟು ವೀಕ್ ಇಲ್ಲ, ಬಲಿಷ್ಠವಾಗಿದ್ದಾರೆ ಎಂದರು.
ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂಬುದನ್ನು ಸಾರ್ವಜನಿಕವಾಗಿಯೇ ಹಲವು ಬಾರಿ ಹೇಳಿರುವ ಇಕ್ಬಾಲ್, 'ಹಮ್ ಕಿಯಾ ತೋ ಬಲತ್ಕಾರ್... ವೋ ಕಿಯಾ ತೋ ಚಮತ್ಕಾರ್' ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಕುರಿತು ಸೋಮವಾರ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಉಲ್ಲೇಖಿಸಿ ಇಕ್ಬಾಲ್ ಈ ಹೇಳಿಕೆ ನೀಡಿದ್ದಾರೆ.
'ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮಗೂ ಅವಕಾಶ ಕೊಡಿ ಎಂದು ಕೋರಿದ್ದು ನಿಜ. ಆದರೆ, ಹೈಕಮಾಂಡ್ ಒಪ್ಪಿಲ್ಲ. ಈಗ ನಾಯಕತ್ವ ಬದಲಾವಣೆಯ ಪರಿಸ್ಥಿತಿ ಇಲ್ಲ ಎಂದು ಹೇಳಿದೆ. ಹೀಗಾಗಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಐದು ವರ್ಷ ಪೂರೈಸುತ್ತಾರೆ' ಎಂದು ಯತೀಂದ್ರ ಹೇಳಿದ್ದರು.
'ನಾಯಕತ್ವ ಬದಲಾವಣೆ ಎಂಬುದು ಈಗ ಮುಗಿದ ಅಧ್ಯಾಯ. ಮುಂದಿನ ಜನವರಿಯಲ್ಲಿ ಪದವಿ ಬದಲಾವಣೆ ಆಗಲಿದೆ ಎಂಬುದು ಸುಳ್ಳು. ನಾಯಕತ್ವ ವಿಚಾರದಲ್ಲಿ ಎದ್ದಿದ್ದ ಗೊಂದಲಕ್ಕೆ ತೆರೆ ಎಳೆಯಲು ಉಪಹಾರ ಕೂಟ ಮಾಡಿದ್ದರು. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಇಬ್ಬರೂ ನಾಯಕರು ಹೇಳಿದ್ದಾರೆ. ವಿರೋಧ ಪಕ್ಷ ಬಿಜೆಪಿ ವದಂತಿಗಳನ್ನು ಹರಡುತ್ತಿದೆ ಮತ್ತು ಗ್ರಹಿಕೆಗಳನ್ನು ಸೃಷ್ಟಿಸುತ್ತಿದೆ' ಎಂದಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಹುಸೇನ್, 'ನಾವು ನಾಯಕತ್ವದ ಬಗ್ಗೆ ಮಾತನಾಡಿದರೆ ಅವರು ನೋಟಿಸ್ ನೀಡುತ್ತಾರೆ... ಆದರೆ, ಕಾಂಗ್ರೆಸ್‌ನಲ್ಲಿ ಶಿಸ್ತು ಇದೆ. ಯಾರೂ ಹೈಕಮಾಂಡ್ ಅನ್ನು ಅತಿಕ್ರಮಿಸಲು ಸಾಧ್ಯವಿಲ್ಲ. ಯತೀಂದ್ರ ಅವರು ಯಾವುದೇ ಹೇಳಿಕೆ ನೀಡುವ ಮೂದಲು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ನಾವೆಲ್ಲರೂ ನಮ್ಮ ನಿಲುವುಗಳನ್ನು ತಿಳಿದುಕೊಳ್ಳಬೇಕು' ಎಂದು ಯತೀಂದ್ರ ಅವರನ್ನು ಟೀಕಿಸಿದರು.
2023ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗಿನಿಂದ ಮತ್ತು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದಾಗಿನಿಂದ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಕೇಳಿಬರುತ್ತಲೇ ಇದೆ.
Advertisement