

ಬೆಂಗಳೂರು: ಇದು ವ್ಯಕ್ತಿನಿಷ್ಠೆಯ ಧೈರ್ಯ ಪ್ರದರ್ಶನವೋ ಅಥವಾ ಕೇವಲ ಅವಕಾಶವಾದಿ ರಾಜಕಾರಣವೋ, ರಾಜ್ಯ ಕಾಂಗ್ರೆಸ್ ನಲ್ಲಿ ಶಾಸಕರ ಒಂದು ಗುಂಪು, ಪ್ರಸ್ತುತ ಅವಧಿಯ ಮಧ್ಯಭಾಗದಲ್ಲಿ ಸಿದ್ದರಾಮಯ್ಯ ಅವರನ್ನು ಬದಲಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆ ಶಿವಕುಮಾರ್ ಅವರನ್ನು ತರುವಂತೆ ಬೆಂಬಲ ಸೂಚಿಸುತ್ತಿದೆ.
ಆದರೆ ಕರ್ನಾಟಕ ರಾಜಕೀಯ ಇತಿಹಾಸ, ಮೈತ್ರಿಗಳು ಮತ್ತು ನಿಶ್ಚಿತ ರಾಜಕೀಯ ಲೆಕ್ಕಾಚಾರಗಳು ಈ ಶಾಸಕರ ವಿರುದ್ಧವಾಗಿ ಇರುವುದರಿಂದ, ಈ ಬಂಡಾಯದ ಮಾತುಗಳು ಮತ್ತು ನಡೆ ಶೀಘ್ರದಲ್ಲೇ ಶಮನವಾಗಬಹುದು ಎಂಬ ಮಾತುಗಳು ಒಳವಲಯದಲ್ಲಿ ಕೇಳಿಬರುತ್ತಿವೆ. ಆದರೆ ಕೆಲ ಅಜ್ಞಾತ ಕಾಂಗ್ರೆಸ್ ನಾಯಕರೇ ಈ ಬೆಂಕಿಗೆ ಗಾಳಿ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಡಿ ಕೆ ಶಿವಕುಮಾರ್ ಅವರ ಪರ ನಿಷ್ಠೆ ತೋರಿಸುವ ಶಾಸಕರಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ರಾಮನಗರ ಶಾಸಕ ಇಕ್ಬಾಲ್ ಹುಸೇನ್. 2023ರ ಚುನಾವಣೆಯಲ್ಲಿ ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿಯನ್ನು 10,715 ಮತಗಳ ಅಂತರದಿಂದ ಪರಾಭವಗೊಳಿಸಿದವರು ಇವರೇ. ಡಿ ಕೆ ಶಿವಕುಮಾರ್ ಅವರು ಜನವರಿ 6ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅವರು ನಿನ್ನೆ ಸಿಡಿಸಿದ ಹೊಸ ರಾಜಕೀಯ ಬಾಂಬ್ ಬಿಸಿಬಿಸಿ ಚರ್ಚೆಯಾಗುತ್ತಿದೆ.
ಪಕ್ಷದ ಶಿಸ್ತು ಸಮಿತಿ ಇವರ ಮೇಲೆ ಏಕೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಕಾಂಗ್ರೆಸ್ ಹಿರಿಯರನ್ನು ಗೊಂದಲಕ್ಕೆ ದೂಡಿದೆ.
ಕಾಂಗ್ರೆಸ್ ಹೈಕಮಾಂಡ್‌ನಿಂದ ನೋಟಿಸ್ ಬಂದಿದ್ದರೂ, ಇಕ್ಬಾಲ್ ಹುಸೇನ್ ಇದಕ್ಕೆ ಪ್ರತಿಕ್ರಿಯಿಸುವ ಅಗತ್ಯವನ್ನೇ ಕಂಡಿಲ್ಲ. ದೆಹಲಿಯಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ನಾಯಕರು ಈ ಹೇಳಿಕೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿಲ್ಲ ಎನಿಸುತ್ತಿದೆ.
ಒಂದು ಕಡೆ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಮತ್ತು ಇನ್ನೊಂದು ಕಡೆ ಇಕ್ಬಾಲ್ ಹುಸೇನ್. ಇದಕ್ಕೂ ಮೊದಲು ಶಾಸಕ ಬಸವರಾಜ ಶಿವಗಂಗಾ, ಯತೀಂದ್ರ ಅವರ ಮಾತಿಗೆ ಪ್ರತಿಕ್ರಿಯಿಸಿ, ಅವರು ಕೇವಲ ಎಂಎಲ್‌ಸಿ ಮಾತ್ರ, ಮುಖ್ಯಮಂತ್ರಿ ಸ್ಥಾನವನ್ನು ಶಾಸಕರೇ ಆಯ್ಕೆ ಮಾಡುತ್ತಾರೆ ಎಂದು ಹೇಳಿದ್ದರು.
ಇಕ್ಬಾಲ್ ಹುಸೇನ್ ವಿಷಯಕ್ಕೆ ಬಂದರೆ, ರಾಮನಗರ ಜೆಡಿಎಸ್‌ನ ಭದ್ರಕೋಟೆ. 2018ರಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಇಕ್ಬಾಲ್ ಹುಸೇನ್ ಅವರನ್ನು 22,636 ಮತಗಳ ಅಂತರದಿಂದ ಸೋಲಿಸಿದ್ದರು. 2013ರಲ್ಲಿ ಕೂಡ ಅವರು ಕಾಂಗ್ರೆಸ್‌ನ ಮರಿದೇವರು ಅವರನ್ನು 25,000ಕ್ಕೂ ಅಧಿಕ ಮತಗಳಿಂದ ಪರಾಭವಗೊಳಿಸಿದ್ದರು.
2028ರಲ್ಲಿ ಜೆಡಿಎಸ್ ಬಿಜೆಪಿ ಜೊತೆಗೆ ಕೈಜೋಡಿಸಿದರೆ, ತ್ರಿಕೋನ ಸ್ಪರ್ಧೆ ಇರುವುದಿಲ್ಲವಾದ್ದರಿಂದ ಇಕ್ಬಾಲ್ ಹುಸೇನ್ ಸೋಲುವ ಸಾಧ್ಯತೆ ಹೆಚ್ಚು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅವರಿಗೆ ತಮ್ಮ ಭವಿಷ್ಯ ಮುಗಿದಿದೆ ಎಂಬುದು ಗೊತ್ತಿದೆ. ಅದು ಮುಳುಗುತ್ತಿರುವ ಹಡಗಿನಿಂದ ಕೇಳಿಬರುತ್ತಿರುವ ಕೂಗು ಎಂದು ಒಬ್ಬ ವಿಶ್ಲೇಷಕರು ಹೇಳುತ್ತಾರೆ.
ಈ ಗದ್ದಲಕ್ಕೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಕೂಡ ಸೇರ್ಪಡೆಯಾಗಿದ್ದಾರೆ. ಅವರು ಮೂರು ಬಾರಿ ಶಾಸಕರಾಗಿದ್ದ (1978, 1989 ಮತ್ತು 1999) ಹಾಗೂ ಮಾಜಿ ಪ್ರತಿಪಕ್ಷ ನಾಯಕಿಯಾಗಿದ್ದ ತಮ್ಮ ತಾಯಿ ಸಿ. ಮೋಟಮ್ಮ ಅವರ ಪ್ರಭಾವದ ನೆರಳಿನಲ್ಲೇ ರಾಜಕೀಯವಾಗಿ ಸಾಗುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ನಯನಾ ಅಲ್ಪಮತದಿಂದ ಗೆಲುವು ಸಾಧಿಸಿದ್ದರು. ಆದರೆ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಜೆಡಿಎಸ್‌ಗೆ ಸೇರ್ಪಡೆಯಾಗಿ 26,000 ಮತಗಳನ್ನು ಸೆಳೆದಿರುವುದು, ಹೊಸಮುಖ ದೀಪಕ್ ದೊಡ್ಡಯ್ಯ ಸುಮಾರು 700 ಮತಗಳ ಅಂತರದಿಂದ ಸೋತಿರುವುದು — ಈ ಎಲ್ಲ ಕಾರಣಗಳಿಂದ 2028ರ ವೇಳೆಗೆ ನಯನಾ ಅವರ ಭವಿಷ್ಯ ಕೂಡ ಕತ್ತಲಾಗಿರುವಂತೆ ಕಾಣುತ್ತದೆ. ಗೋಡೆಯ ಮೇಲೆ ಬರೆದಿರುವುದನ್ನು ಎಲ್ಲರೂ ನೋಡುತ್ತಿದ್ದಾರೆ ಎಂದು ಪಕ್ಷದ ಮೂಲವೊಂದು ವ್ಯಂಗ್ಯವಾಡಿದೆ.
ಇನ್ನೊಬ್ಬರು ಚನ್ನಗಿರಿಯ ಬಸವರಾಜ ಶಿವಗಂಗಾ. ಇವರೂ ಹೊಸಬರೇ ಆಗಿದ್ದು, ಅವರ ಹಿಂದಿನ ಗೆಲುವು ಅಪರೂಪದ ಘಟನೆ (ಫ್ಲುಕ್) ಎಂದು ಪರಿಗಣಿಸಲಾಗುತ್ತಿದೆ; ಅದು ಮತ್ತೆ ಮರುಕಳಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಡಿಕೆ ಶಿವಕುಮಾರ್‌ಗೆ ದೃಢ ಬೆಂಬಲ ನೀಡುತ್ತಿರುವ ಇತರರಲ್ಲಿ ಕುಣಿಗಲ್ ಶಾಸಕ ಡಾ. ಎಚ್.ಡಿ. ರಂಗನಾಥ್ ಇದ್ದಾರೆ. ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಂಬಂಧಿಯಾಗಿದ್ದು, ಇಬ್ಬರೂ ಸಹೋದರಿಯರನ್ನು ವಿವಾಹವಾಗಿದ್ದಾರೆ. ಅವರ ಜೊತೆಗೆ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಕೂಡ ಬೆಂಬಲಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಇದಕ್ಕಿಂತ ಹೆಚ್ಚಿನ ಬಲ ಬೇಕು ಎಂದು ಮೂಲಗಳು ಹೇಳುತ್ತವೆ.
ಆದರೆ ದೆಹಲಿಯಿಂದ ಕೇಳಿಬರುವ ಗುಸುಗುಸು ಮಾತುಗಳು, ಕೆಲವು ಎಐಸಿಸಿ ಪ್ರಭಾವಿ ನಾಯಕರು ಡಿಕೆಎಸ್ ಅವರ ಚಟುವಟಿಕೆಗೆ ಬೆಂಕಿ ಹಚ್ಚುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತವೆ. ಬದಲಾವಣೆಗೆ ಸಿದ್ಧರಾಗಿ ಎಂಬ ಶಿವಕುಮಾರ್ ಅವರ ವ್ಯಂಗ್ಯಮಯ ಹೇಳಿಕೆಗಳು ವದಂತಿಗಳನ್ನು ಮತ್ತೆ ಜೀವಂತಗೊಳಿಸುತ್ತಿವೆ.
ಜನವರಿ 6ರಂದು ಅಧಿಕಾರ ಬದಲಾವಣೆ ಆಗಲಿದೆ ಎಂಬ ಮತ್ತೊಬ್ಬ ಹೊಸ ಶಾಸಕರ ಭವಿಷ್ಯವಾಣಿ ಇಕ್ಬಾಲ್ ಹುಸೇನ್ ಅವರ ಖಾಲಿ ಧೈರ್ಯವನ್ನೇ ಪ್ರತಿಧ್ವನಿಸುತ್ತದೆ. ಸಿದ್ದರಾಮಯ್ಯ ಸ್ಥಿರವಾಗಿ ನಿಂತಿರುವುದರಿಂದ ಹಾಗೂ ಹೈಕಮಾಂಡ್‌ನಿಂದ ಯಾವುದೇ ಕಟ್ಟುನಿಟ್ಟಿನ ಕ್ರಮ ಇಲ್ಲದಿರುವ ಕಾರಣ, ಇದು ಕ್ರಾಂತಿಯಂತೆ ಕಾಣುವುದಕ್ಕಿಂತ, ವ್ಯರ್ಥ ಸಮಯದ ಬಂಡಾಯದಂತೆಯೇ ತೋರುತ್ತದೆ.
Advertisement