

ಬೆಂಗಳೂರು/ಬೆಳಗಾವಿ: ಬೆಳಗಾವಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಿ ಒಂದು ವಾರಕ್ಕೂ ಹೆಚ್ಚು ಸಮಯವಾಗಿದ್ದು, ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಲಾಗಿದೆ. ಆದರೆ, ಇದರ ಲಾಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಜೆಡಿಎಸ್ ವಿಫಲವಾಗುತ್ತಿರುವಂತೆ ತೋರುತ್ತಿದೆ.
ಇದಕ್ಕೆ ಪ್ರಮುಖ ಕಾರಣ ಹೆಚ್‌ಡಿ ಕುಮಾರಸ್ವಾಮಿ ಅವರ ಅನುಪಸ್ಥಿತಿ. ಕುಮಾರಸ್ವಾಮಿ ಅವರು ದಾಖಲೆ ಸಹಿತವಾಗಿ ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸುತ್ತಿದ್ದರು. ಇವರ ನಾಯಕತ್ವದಲ್ಲಿ ಸದನದಲ್ಲಿ ಜೆಡಿಎಸ್ ಕೂಡಾ ಸಕ್ರಿಯವಾಗಿ ಭಾಗಿಯಾಗುತ್ತಿತ್ತು. ಆದರೆ, ಇದೀಗ ಎಚ್‌ಡಿಕೆ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ, ಜೆಡಿಎಸ್ ಪಕ್ಷಕ್ಕೆ ಅವರ ಅನುಪಸ್ಥಿತಿ ಕಾಡಲು ಶುರುವಾಗಿದೆ.
ರಾಜ್ಯದಲ್ಲಿ ಪಕ್ಷ ಸಂಘಟನೆಗೂ ಗಮನ ಹರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ನಿಖಿಲ್ ಕುಮಾರಸ್ವಾಮಿ ರಾಜ್ಯಾಧ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಆದರೆ, ಸದನದಲ್ಲಿ ಜೆಡಿಎಸ್ ಪಕ್ಷ ವಿರೋಧ ಪಕ್ಷವಾಗಿ ಆಡಳಿತ ಪಕ್ಷದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಲು ಸಾಧ್ಯವಾಗುತ್ತಿಲ್ಲ.
ಜೆಡಿಎಸ್ ಪರಿಸ್ಥಿತಿಯ ಬಗ್ಗೆ ಕೆಲವು ಶಾಸಕರಿಗೂ ಬೇಸರ ಇದೆ. ಆದರೆ ಅವರು ಬಹಿರಂಗವಾಗಿ ಇದನ್ನು ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಶಾಸಕರೊಬ್ಬರು, ಕುಮಾರಣ್ಣ ಸದನದಲ್ಲಿ ಕಾಣದೇ ಇರಬಹುದು ಆದರೆ, ಸಣ್ಣ ಸಣ್ಣ ಸಮಸ್ಯೆಗಳಿಗೂ ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆಂದು ಹೇಳಿದ್ದಾರೆ. ಇದೇ ವೇಳೆ ಸದನದಲ್ಲಿ ಅವರ ಉಪಸ್ಥಿತಿಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ತಿಳಿಸಿದ್ದಾರೆ.
ಜೆಡಿಎಸ್ ಎಂಎಲ್ಸಿ ಶರವಣ ಅವರು ಮಾತನಾಡಿ, ಪಕ್ಷವಾಗಿ ನಾವು ಅವರ ಉಪಸ್ಥಿತಿ, ಮಾರ್ಗದರ್ಶನವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆದರೆ, ಅವರಿಗೆ ಒಂದು ಸಚಿವಾಲಯದ ಕರ್ತವ್ಯವಿದೆ. ಹೀಗಾಗಿ, ನಾವು ಕರೆ ಮಾಡಿ ಅವರಿಂದ ಮಾರ್ಗದರ್ಶನ ನಡೆಯುತ್ತಿದ್ದೇವೆ. ಆದರೆ, ಅಧಿವೇಶನದಲ್ಲಿ ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಕುಮಾರಣ್ಣಗೆ ಕುಮಾರಣ್ಣನೇ ಸಾಟಿ. ಪ್ರತೀ ನಿತ್ಯ ನಾವು ಅವರೊಂದಿಗೆ ಸಂಪರ್ಕದಲ್ಲಿರುತ್ತೇವೆಂದು ಹೇಳಿದ್ದಾರೆ.
ಶಾಸಕ ಶರಣಗೌಡ ಕಂದಕೂರ್ ಅವರು ಮಾತನಾಡಿ, ಉತ್ತರ ಕರ್ನಾಟಕದಿಂದ ನಮಗೆ ಹೆಚ್ಚಿನ ಸಂಖ್ಯಾಬಲವಿತ್ತು ಆದರೀಗ ನಮ್ಮ ಸಂಖ್ಯಾಬಲ ಕಡಿಮೆಯಾಗಿರುವುದು ನಿಜ, ಸರ್ಕಾರವು ನಮ್ಮ ಸಮಸ್ಯೆಗಳ ಬಗ್ಗೆ ಕಿವಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜಕೀಯ ವಿಶ್ಲೇಷಕ ಬಿಎಸ್ ಮೂರ್ತಿ ಅವರು ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಶಾಸಕರ ಸಂಖ್ಯೆ ಕಡಿಮೆಯಾಗಿದ್ದು, ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿ ರೀತಿಯಲ್ಲಿ ಧ್ವನಿ ಎತ್ತಿದ್ದರೆ, ಇದು ಜೆಡಿಎಸ್ ಪಕ್ಷಕ್ಕೆ ಲಾಭವಾಗುತ್ತಿತ್ತು ಎಂದು ಹೇಳಿದ್ದಾರೆ.
Advertisement