

ಬೆಂಗಳೂರು: ನಮ್ಮನ್ನು ಪಿತೂರಿಯಿಂದ ಸೋಲಿಸಲು ಸಾಧ್ಯವಿಲ್ಲ, ದ್ವೇಷದಿಂದ ಕುಗ್ಗಿಸಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಧರಣಿ ವೇಳೆ ಮಾಧ್ಯಮಗಳೊಂದಿಗೆ ಡಿಕೆ.ಶಿವಕುಮಾರ್ ಅವರು ಮಾತನಾಡಿದರು.
ನ್ಯಾಷನಲ್ ಹೆರಾಲ್ಡ್ ಈ ದೇಶದ ಆಸ್ತಿ. ದ್ವೇಷ ರಾಜಕಾರಣ ಬಿಜೆಪಿ ಆಸ್ತಿ. ಸತ್ಯಕ್ಕೆ ಸಾವಿಲ್ಲ, ಸುಳ್ಳು ಕೇಸ್‌ಗಳಿಗೆ ಆಯುಷ್ಯವಿಲ್ಲ ಎಂಬುದಕ್ಕೆ ಮಂಗಳವಾರ ಬಂದ ನ್ಯಾಯಾಲಯದ ಆದೇಶವೇ ಸಾಕ್ಷಿ. ಸತ್ಯ ಮೇವ ಜಯತೆ, ಬಿಜೆಪಿಗಿಲ್ಲ ಘನತೆ. ನಮ್ಮನ್ನು ಪಿತೂರಿಯಿಂದ ಸೋಲಿಸಲು ಸಾಧ್ಯವಿಲ್ಲ, ದ್ವೇಷದಿಂದ ಕುಗ್ಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಬಿಜೆಪಿ ಎಷ್ಟೇ ಪಿತೂರಿ ಮಾಡಿದರೂ ನಮಗೆ ನ್ಯಾಯ ಸಿಕ್ಕಿದೆ. ಬಿಜೆಪಿ ಎಂದರೆ ಬುರುಡೆ ಜನತಾ ಪಕ್ಷವಾಗಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಜೈಲಿಗೆ ಹಾಕಲು ಪಿತೂರಿ ಮಾಡಲಾಗಿದೆ. ಈ ದ್ವೇಷ ರಾಜಕಾರಣ ಇಲ್ಲಿಗೆ ಕೊನೆಯಾಗಬೇಕು. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಈ ಪ್ರತಿಭಟನೆ ಮುಂದುವರಿಯಲಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಜತೆ ನಿಂತು ಅವರ ಕೈ ಬಲಪಡಿಸೋಣ ಎಂದು ಕರೆ ನೀಡಿದರು.
ಇಂದು ಸತ್ಯಕ್ಕೆ ಜಯ ಸಿಕ್ಕಿದೆ. 1937ರಲ್ಲಿ ನಮ್ಮ ನಾಯಕರಾಗಿದ್ದ ಜವಹಾರ್ ಲಾಲ್ ನೆಹರು ಅವರು ಜನರ ಧ್ವನಿಯಾಗಬೇಕು ಎಂದು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಆರಂಭಿಸಿದರು. ಆ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೆರವಾಗಲು ಈ ಸಂಸ್ಥೆ ಆರಂಭಿಸಿದರು. ಈ ಸಂಸ್ಥೆ ಮಹಾತ್ಮಾ ಗಾಂಧಿ ಅಥವಾ ನೆಹರು ಅವರ ಆಸ್ತಿಯಲ್ಲ. ಇದು ಕಾಂಗ್ರೆಸ್ ಪಕ್ಷದ ಆಸ್ತಿ.
ಕಾಂಗ್ರೆಸ್ ಪಕ್ಷದಲ್ಲಿ ಯಾರೇ ಅಧ್ಯಕ್ಷರಾದರೂ ಈ ಸಂಸ್ಥೆಯ ಷೇರುದಾರರಾಗುತ್ತಾರೆ. ಇದರ ಜವಾಬ್ದಾರಿ ಹೊರುತ್ತಾರೆ. ಆದರೆ, ಬಿಜೆಪಿಯವರು ಯಂಗ್ ಇಂಡಿಯಾ ಸಂಸ್ಥೆ ಹಾಗೂ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯ ಆಸ್ತಿಯನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ತಮ್ಮ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿ ನೀಡಿದ ದೂರಿನ ಮೇಲೆ ನಮ್ಮ ನಾಯಕ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿ ಇ.ಡಿ ತನಿಖಾ ಸಂಸ್ಥೆ ಮೂಲಕ ತನಿಖೆ ಮಾಡಿಸುತ್ತಿದ್ದಾರೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಇ.ಡಿ ಸಂಸ್ಥೆ ನನಗೆ, ನನ್ನ ಸಹೋದರನಿಗೆ, ದಿವಂಗತ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಕುಟುಂಬದವರಿಗೆ ನೋಟೀಸ್ ನೀಡಿತ್ತು. ಈ ಸಂಸ್ಥೆಗೆ ನಮ್ಮ ಅನೇಕ ಕಾರ್ಯಕರ್ತರು ದೇಣಿಗೆ ನೀಡಿದ್ದಾರೆ. ಆಸ್ಕರ್ ಫರ್ನಾಂಡೀಸ್ ಅವರು ಈ ಸಂಸ್ಥೆಯ ಮಂಡಳಿಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಮ್ಮ ಜತೆಯಲ್ಲಿ ಸಿಎಂ ಇದ್ದಾರೆ.
ನನ್ನ ನೀರಾವರಿ ಇಲಾಖೆಯ ಅನೇಕ ನಿಗಮಗಳಿಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿದ್ದಾರೆ. ನಮ್ಮ ಅನೇಕ ಶಾಸಕರು, ಕಾರ್ಯಕರ್ತರು ವಿವಿಧ ನಿಗಮ ಮಂಡಳಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಇವರುಗಳು ಅಧ್ಯಕ್ಷರಾಗಿರುವ ಕಾರಣ ಅವರ ಹೆಸರಿಗೆ ಒಂದೆರಡು ಷೇರುಗಳನ್ನು ನೀಡಲಾಗುತ್ತದೆ. ನಮ್ಮ ಅಧಿಕಾರ ಹೋದ ಬಳಿಕ ಈ ಅಧಿಕಾರ ವರ್ಗಾವಣೆಯಾಗುತ್ತದೆ ಎಂದು ವಿವರಿಸಿದರು.
ಇದೇ ರೀತಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸಮಯದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಈ ಸಂಸ್ಥೆಯ ಜವಾಬ್ದಾರಿ ಹೊಂದಿದ್ದರು. ಈ ಸಂಸ್ಥೆಯ ಅಡಿಯಲ್ಲಿ ಅನೇಕ ಆಸ್ತಿಗಳಿವೆ. ಕಾಂಗ್ರೆಸ್ ಭವನ ಟ್ರಸ್ಟ್ ಎಂದು ಬೆಂಗಳೂರಿನಲ್ಲಿ ಇದೆ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಟ್ರಸ್ಟಿಯಾಗಿದ್ದರು. ಕೆಪಿಸಿಸಿ ಅಧ್ಯಕ್ಷನಾಗಿರುವ ನಾನು ಈಗ ಆ ಟ್ರಸ್ಟ್‌ಗೆ ಅಧ್ಯಕ್ಷನಾಗಿದ್ದೇನೆ.
ಸಿಎಲ್‌ಪಿ ನಾಯಕರಾಗಿ ಸಿಎಂ ಅವರು ಟ್ರಸ್ಟಿಯಾಗಿದ್ದಾರೆ. ಹೀಗಾಗಿ ಈ ಕಾಂಗ್ರೆಸ್ ಭವನ ಟ್ರಸ್ಟ್ ಆಸ್ತಿ ನಮ್ಮ ಆಸ್ತಿಯಾಗುತ್ತದೆಯೇ? ನೂರಾರು ಕಾಂಗ್ರೆಸ್ ಕಟ್ಟಡಗಳು ಈ ಟ್ರಸ್ಟ್ ಅಡಿಯಲ್ಲಿವೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿರುವವರೆಗೂ ನಾನು ಅದರ ಅಧ್ಯಕ್ಷನಾಗಿರುತ್ತೇನೆ, ನಾನು ಹೋದ ಬಳಿಕ ಯಾರು ಬರುತ್ತಾರೋ, ಅವರು ಇದರ ಜವಾಬ್ದಾರಿ ಹೊರುತ್ತಾರೆ ಎಂದರು.
ನ್ಯಾಷನಲ್ ಹೆರಾಲ್ಡ್ ಸಂಸ್ಥೆ 2 ಸಾವಿರ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, ಅದನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ನನಗೆ ಹಾಗೂ ನನ್ನ ತಮ್ಮನಿಗೆ ದೆಹಲಿ ಪೊಲೀಸರಿಂದ ನೋಟೀಸ್ ಬಂದಿತ್ತು. ನಾವು ಅವರ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಿನಮಗೆ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ತಕ್ಷಣಕ್ಕೆ ವಿಚಾರಣೆಗೆ ಹಾಜರಾಗಲು ಆಗುವುದಿಲ್ಲ, ನಮಗೆ ಸಮಯಾವಕಾಶ ಬೇಕು. ನೀವು ಎಫ್ಐಆರ್ ದಾಖಲಿಸಿದ್ದು, ಅದರ ಪ್ರತಿಯನ್ನು ನೀಡಿ ಎಂದು ಅವರಿಗೆ ಕೇಳಿದ್ದೆ. ನಾನು ಯಾವ ದಾಖಲೆ ಆಧಾರದ ಮೇಲೆ ಅವರಿಗೆ ಉತ್ತರ ನೀಡಲಿ? ಎಂದು ಪ್ರಶ್ನಿಸಿದರು.
ನಾನು ಸಂಪಾದನೆ ಮಾಡಿರುವ ಹಣವನ್ನು ನಾನು ಯಾರಿಗೆ ಬೇಕಾದರೂ ನೀಡಬಹುದು. ಕಾಂಗ್ರೆಸ್ ಪಕ್ಷಕ್ಕೆ ನೀಡುತ್ತೇನೆ. ನಮ್ಮ ಶಾಸಕರು ತಮ್ಮ ವೇತನದಲ್ಲಿ 25 ಸಾವಿರ ಹಣವನ್ನು ಕಾಂಗ್ರೆಸ್ ಕಚೇರಿ ನಿರ್ಮಾಣದ ನಿಧಿಗೆ ದೇಣಿಗೆ ನೀಡಿದ್ದಾರೆ. ಇವರು ದೇಣಿಗೆ ನೀಡಿದರು ಎಂಬ ಕಾರಣಕ್ಕೆ ನಾಳೆ ಇವರಿಗೆ ನೋಟೀಸ್ ನೀಡಲು ಆಗುತ್ತದೆಯೇ? ಇದೇ ರೀತಿ ನಾನು ನ್ಯಾಷನಲ್ ಹೆರಾಲ್ಡ್ ಸಂಸ್ಧೆಗೆ ದೇಣಿಗೆ ನೀಡಿದ್ದೆ. ಈಗ ಅವರು ಲೆಕ್ಕ ಕೇಳುತ್ತಿದ್ದಾರೆ. ಇ.ಡಿ ಸಂಸ್ಥೆ ನನ್ನ ವಿರುದ್ಧ ಪಿಎಂಎಲ್ಎ ಪ್ರಕರಣ ದಾಖಲಿಸಿತ್ತು. ನಂತರ ಸುಪ್ರೀಂ ಕೋರ್ಟ್ ಶಿವಕುಮಾರ್ ಮೇಲೆ ದಾಖಲಿಸಿರುವ ಈ ಪ್ರಕರಣ ಸರಿಯಿಲ್ಲ ಎಂದು ವಜಾ ಮಾಡಿದರು. ಅ ರೀತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣ ಸರಿಯಿಲ್ಲ ಎಂದು ಇದೀಗ ನ್ಯಾಯಾಲಯ ತಿಳಿಸಿದೆ.
ರಾಜಕೀಯ ಪ್ರೇರಿತ ಪ್ರಕರಣಗಳನ್ನು ನ್ಯಾಯಾಲಯ ಪರಿಗಣಿಸದೇ ಇರುವುದು ಬಿಜೆಪಿ ಮತ್ತು ಇ.ಡಿಗೆ ನೀಡಿರುವ ದೊಡ್ಡ ಸಂದೇಶ. ನ್ಯಾಯಾಲಯದ ತೀರ್ಪಿನಿಂದ ನನಗೆ ಸಂತೋಷವಾಗಿದೆ. ಇ.ಡಿ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ತನ್ನ ವರ್ಚಸ್ಸನ್ನು ಕಳೆದುಕೊಂಡಿದೆ. ಇ.ಡಿ ವಿವಿಧ ಪಕ್ಷಗಳ ನಾಯಕರ ಮೇಲೆ ಅನೇಕ ಪ್ರಕರಣಗಳನ್ನು ದಾಖಲಿಸಿದೆ. ಅವರು ಆಡಳಿತರೂಡ ಬಿಜೆಪಿ ವಿರುದ್ಧ ಏಕೆ ಪ್ರಕರಣ ದಾಖಲಿಸಿಲ್ಲ? ಅಂತಿಮವಾಗಿ ನ್ಯಾಯ ಗೆದ್ದಿದೆ. ಸತ್ಯವನ್ನು ಎತ್ತಿ ಹಿಡಿದಿದ್ದಕ್ಕೆ ನ್ಯಾಯಸ್ಥಾನದಲ್ಲಿ ಕುಳಿತಿರುವವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆಂದು ಹೇಳಿದರು.
Advertisement