

ಬೆಳಗಾವಿ: ಬೆಳಗಾವಿ ಚಳಿಗಾಲದ ಅಧಿವೇಶನದ ನಡುವಲ್ಲೇ ಬಣ ರಾಜಕೀಯ ಡಿನ್ನರ್ ಪಾರ್ಟಿ ಜೋರಾಗಿದ್ದು, ಈ ನಡುವಲೆ ಸಚಿವ ಸತೀಶ್ ಜಾರಕಿಹೊಳಿಯವರು ಆಯೋಜಿಸಿದ್ದ ಔತಣಕೂಡಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಿರುವುದು ಕುತೂಹಲ ಹೆಚ್ಚಾಗುವಂತೆ ಮಾಡಿದೆ.
ಬೆಳಗಾವಿಯ ತಮ್ಮ ನಿವಾಸದಲ್ಲಿ ಗುರುವಾರ ರಾತ್ರಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಔತಣಕೂಟ ಆಯೋಜನೆ ಮಾಡಿದ್ದು, ಔತಣಕೂಟದಲ್ಲಿ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ.
ಸಿದ್ದರಾಮಯ್ಯ ಅವರಷ್ಟೇ ಅಲ್ಲದೆ, ಸಚಿವರಾದ ಜಿ ಪರಮೇಶ್ವರ್, ಎಚ್‌ಸಿ ಮಹಾದೇವಪ್ಪ, ಜಮೀರ್ ಅಹ್ಮದ್ ಖಾನ್, ಎಂಸಿ ಸುಧಾಕರ್ ಮತ್ತು ಶಾಸಕ ಎಎಸ್ ಪೊನ್ನಣ್ಣ ಹಾಜರಿದ್ದರು ಎಂದು ತಿಳಿದುಬಂದಿದೆ. ಇವರೆಲ್ಲರೂ ಸಿದ್ದರಾಮಯ್ಯ ಅವರ ಆಪ್ತರು ಎಂದು ಪರಿಗಣಿಸಲಾಗಿದೆ.
ಡಿಸೆಂಬರ್ 17 ರಂದೂ ಕೂಡ ಸತೀಶ್ ಜಾರಕಿಹೊಳಿಯವರು ಔತಣಕೂಟ ಆಯೋಜಿಸಿದ್ದರು. ಹೋಟೆಲ್ ವೊಂದರಲ್ಲಿ ಔತಣಕೂಡ ಆಯೋಜಿಸಲಾಗಿದ್ದು, 30ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದರು. ಈ ಔತಣಕೂಟದಲ್ಲಿ ಸಿದ್ದರಾಮಯ್ಯ ಅವರು ಭಾಗಿಯಾಗದಿದ್ದರೂ, ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಾಗೂ ಶಾಸಕ ಕೆ.ಎನ್. ರಾಜಣ್ಣ ಪಾಲ್ಗೊಂಡಿದ್ದರು.
ಬೆಳಗಾವಿಯ ಹೊರವಲಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಕೆಲವು ಸಚಿವರು ಸೇರಿದಂತೆ 30 ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಔತಣಕೂಟದಲ್ಲಿ ಸೇರಿದ ಒಂದು ವಾರದ ನಂತರ ಈ ಬೆಳವಣಿಗೆಗಳು ಕಂಡು ಬಂದಿದೆ.
ರಾಜ್ಯವಿಧಾನಸಭೆ ಚಳಿಗಾಲ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿರುವುದರಿಂದ ಶಾಸಕರಿಗೆ ಭೋಜನಕೂಟವನ್ನು ನಡೆಸಲಾಗಿದೆ ಎಂದು ಹೇಳಲಾಗುತ್ತಿದ್ದರು. ಈ ನೆಪದಲ್ಲಿ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ನಾಯಕರು ಚರ್ಚೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಅಧಿವೇಶನದ ಮುಕ್ತಾಯದ ನಂತರ ಸಿಎಂ ಮತ್ತು ಡಿಸಿಎಂ ಅವರು ದೆಹಲಿ ವರಿಷ್ಠರ ಭೇಟಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಡಿನ್ನರ್ ಪಾರ್ಟಿ ಕೂಡ ತೀವ್ರ ಕುತೂಹಲ ಮೂಡಿಸಿದೆ.
ಅಧಿವೇಶನ ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ಗೆ ಮಾತುಕತೆಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
Advertisement