

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನದ ಜಟಾಪಟಿ ಇನ್ನು ನಿಂತಿಲ್ಲ. ನವೆಂಬರ್ ಕ್ರಾಂತಿ ಸದ್ದು ಗದ್ದಲ ಪದೇ ಪದೇ ಮುನ್ನಲೆಗೆ ಬರುತ್ತಿದೆ. ಸಿಎಂ ಸ್ಥಾನ ನಿರ್ಧಾರ ಮಾಡುವುದು ಹೈಕಮಾಂಡ್ ನಾಯಕರು ಎಂದು ಡಿಕೆ ಶಿವಕುಮಾರ್ ಅವರು ಹೇಳುತ್ತಲೇ ಇದ್ದರು, ಸಿಎಂ ಗಾದಿ ಕನಸನ್ನು ನನಸಾಗಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನಗಳನ್ನು ನಡೆಸುತ್ತಲೇ ಇದ್ದಾರೆ.
ಸಿಎಂ ಸ್ಥಾನಕ್ಕಾಗಿ ಡಿ.ಕೆ.ಶಿವಕುಮಾರ್ ಅವರು ದೇವರ ಮೊರೆ ಹೋಗುತ್ತಲೇ ಇದ್ದು, ಬಿಜೆಪಿ ನಾಯಕರೂ ಕೂಡ ಭೇಟಿ ನೀಡಿದ ಸಂಖ್ಯೆಯಲ್ಲಿ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ.
ಕಳೆದ ಕೆಲವು ವಾರಗಳಿಂದ ಡಿಕೆ.ಶಿವಕುಮಾರ್ ಅವರು ಹಲವು ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಈ ಮೂಲಕ ನಾಯಕತ್ವ ಬದಲಾವಣೆ ಸನ್ನಿಹಿತವಾಗಿದೆ ಎಂಬ ಸಂದೇಶವನ್ನು ರವಾನಿಸುತ್ತಿದ್ದಾರೆ.
ನವೆಂಬರ್ ಅಂತ್ಯದಿಂದ ಡಿಸೆಂಬರ್ ಮಧ್ಯದವರೆಗೆ, ಶಿವಕುಮಾರ್ ಅವರು ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ವಿಶೇಷವಾಗಿ ಕರಾವಳಿ ಕರ್ನಾಟಕದ ದೇಗುಲಗಳಿಗೆ ಹೆಚ್ಚಿನ ಭೇಟಿ ನೀಡಿದ್ದಾರೆ.
ನವೆಂಬರ್ 29 ರಂದು, ತಮ್ಮ ಪತ್ನಿ ಉಷಾ ಅವರೊಂದಿಗೆ ಮಂಡ್ಯದ ಭೂ ವರಾಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ತಿಹಾರ್ ಜೈಲಿನಲ್ಲಿದ್ದಾಗ, ನಮ್ಮ ಅತ್ತೆ, ಮಾವ ಈ ದೇವಾಲಯಕ್ಕೆ ಬಂದು 4 ಬಾರಿ ಪ್ರಾರ್ಥನೆ ಸಲ್ಲಿಸಿದ್ದರು. ಕಳೆದ ಎರಡು ವರ್ಷಗಳಿಂದ ಬೇರೆ ಪಕ್ಷದ ಸ್ನೇಹಿತರೊಬ್ಬರು ಇಲ್ಲಿಗೆ ಹೋಗುವಂತೆ ಹೇಳುತ್ತಿದ್ದರು. ಇಲ್ಲಿಗೆ ಬಂದು ನೋಡಿದಾಗ ಇದರ ಮಹಿಮೆ ಅರ್ಥವಾಯಿತು. ಇದು ಅದ್ಭುತ, ಐತಿಹಾಸಿಕ ದೇವಾಲಯ, ಎಂದು ಭಾವುಕರಾದರು.
ಈ ದೇವಾಲಯ ಕಟ್ಟಲು ಕೆಲಸ ಮಾಡುತ್ತಿರುವವರು ಮುಸ್ಲಿಮರು. ಈ ದೇವಾಲಯದಲ್ಲಿ ಜಾತಿ, ಧರ್ಮ ಇಲ್ಲ ಎಂದರು ಮುಂದುವರಿದು, ಇವತ್ತು ಈ ದೇವಾಲಯಕ್ಕೆ ಬರಲು ಕಾರಣ ದೇವರ ಪ್ರೇರಣೆ. ಇಂದು ಬೆಳಗ್ಗೆಯಷ್ಟೇ ಭೇಟಿ ನಿಗದಿಯಾಯಿತು. ರಾಜ್ಯಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೇನೆಂದು ತಿಳಿಸಿದ್ದರು.
ಬಳಿಕ ಡಿಸೆಂಬರ್ 19 ರಂದು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ನಂತರ ಅಮವಾಸ್ಯೆಯಂದು ಅಂಕೋಲಾ ಬಳಿಯ ಶ್ರೀ ಜಗದೀಶ್ವರಿ ದೇವಸ್ಥಾನದಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ವಿಶೇಷ ಪೂಜೆ, ಹೋಮಗಳನ್ನು ನಡೆಸಿದರು.
ಐದು ವರ್ಷಗಳಲ್ಲಿ ಕರಾವಳಿ ಶಕ್ತಿ ಪೀಠಕ್ಕೆ ಇದು ಅವರ ಮೊದಲ ಭೇಟಿಯಾಗಿದ್ದು, ಈ ಬೇಟಿ ತೀವ್ರ ಚರ್ಚೆಗಳನ್ನು ಹುಟ್ಟುಹಾಕಿದೆ. ಶಕ್ತಿ ಪೀಠಕ್ಕೆ ಭೇಟಿ ನೀಡಿದ ಮರುದಿನ ಇಡಗುಂಜಿ ಗಣಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು, ದೇಗುಲ ಭೇಟಿ ಬಳಿಕ ಪ್ರತಿಕ್ರಿಯಿಸಿದ ಅವರು, ಈ ಪ್ರಾರ್ಥನೆ ನನ್ನ ಹಾಗೂ ದೇವರ ನಡುವಿನ ವಿಚಾರವಾಗಿದೆ ಎಂದು ಹೇಳಿದರು. ಇದೇ ವೇಳೆ ಕುಮಾರಸ್ವಾಮಿಯವರು ದೇಗುಲ ಭೇಟಿ ನೀಡುವ ವಿಚಾರ ಪ್ರಸ್ತಾಪಿಸಿ ವ್ಯಂಗ್ಯವಾಡಿದರು.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ರಾಜಕೀಯ ವಿಶ್ಲೇಷಕ ಪ್ರೊ. ಪಿ. ಎಸ್. ಜಯರಾಮು ಅವರು, ಶಿವಕುಮಾರ್ ಅವರು 'ಆಧ್ಯಾತ್ಮಿಕತೆ' ಮತ್ತು ಅಧಿಕಾರ ರಾಜಕಾರಣದ ಮಿಶ್ರಣ ಮಾಡುತ್ತಿದ್ದಾರೆ ಎಂಬುದು ನಿಜ. ಆಧ್ಯಾತ್ಮಿಕ ಹಾಗೂ ವ್ಯವಹಾರಿಕವಾಗಿ ಜರನ್ನು ಹಿಡಿದಿಟ್ಟುಕೊಳ್ಳುವ ತಂತ್ರ ಅವರಿಗೆ ತಿಳಿದಿದೆ. ಡಿಕೆ.ಶಿವಕುಮಾರ್ ಅವರು ಒಕ್ಕಲಿಗ ಶ್ರೀಗಳನ್ನು ತಮ್ಮ ಪರವಾಗಿ ಇಟ್ಟುಕೊಂಡಿದ್ದಾರೆ. ಆದರೆ, ಎಷ್ಟು ಶಾಸಕರು ಅವರನ್ನು ನಿಜವಾಗಿಯೂ ಬೆಂಬಲಿಸುತ್ತಾರೆ ಎಂಬುದು ನಿಜವಾದ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.
Advertisement