

ಬೆಂಗಳೂರು: ಜೆಡಿಎಸ್ ಜೊತೆ ಚುನಾವಣಾ ಮೈತ್ರಿ ಕುರಿತ ಅಂತಿಮ ತೀರ್ಮಾನವನ್ನು ಬಿಜೆಪಿ ಹೈಕಮಾಂಡ್ ಕೈಗೊಳ್ಳಲಿದ್ದು, ಅದನ್ನು ರಾಜ್ಯ ಬಿಜೆಪಿ ಘಟಕ ಗೌರವಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡ ಅವರು ರಾಜ್ಯದ ದೊಡ್ಡ ನಾಯಕ. ಅವರು ಒಬ್ಬ ರಾಷ್ಟ್ರತಜ್ಞರು. ನನ್ನ ತಂದೆಯನ್ನು ನಾನು ಹೇಗೆ ಗೌರವಿಸುತ್ತೇನೋ ಅದೇ ರೀತಿ ದೇವೇಗೌಡ ಅವರನ್ನೂ ಗೌರವಿಸುತ್ತೇನೆ. ಇಬ್ಬರೂ ಜನಸಾಮಾನ್ಯರ ನಾಯಕರಾಗಿದ್ದಾರೆ. ಚುನಾವಣಾ ಮೈತ್ರಿ ವಿಚಾರದಲ್ಲಿ ಬಿಜೆಪಿ ರಾಜ್ಯ ಘಟಕವು ಕೇಂದ್ರ ನಾಯಕತ್ವ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ಕೇಂದ್ರ ನಾಯಕತ್ವವು ಜೆಡಿಎಸ್ ಜೊತೆ ಕೈಜೋಡಿಸಲು ತೀರ್ಮಾನಿಸಿದೆ. ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈಬ ಲಪಡಿಸಲು ಮುಂದಾಗಿದ್ದಾರೆಂದು ತಿಳಿಸಿದರು.
ಇದೇ ವೇಳೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್–ಬಿಜೆಪಿ ಮೈತ್ರಿ ಇರುವುದಿಲ್ಲ ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಲು ವಿಜಯೇಂದ್ರ ಅವರು ನಿರಾಕರಿಸಿದ್ದಾರೆ.
ಬಳಿಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇತ್ತೀಚೆಗೆ ಮುಕ್ತಾಯಗೊಂಡ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರ ಅಸಮಾಧಾನಕ್ಕೆ ಸ್ಪಷ್ಟ ಸಂದೇಶವಾಗಿದೆ ಎಂದರು.
ಗ್ರಾಮ ಮಟ್ಟದಲ್ಲೇ ಜನರು ಕೋಪಗೊಂಡಿದ್ದು, ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಲಿ ಅಥವಾ ಅಧಿಕಾರ ತ್ಯಜಿಸಲಿ ಎಂಬ ಸಂದೇಶ ನೀಡಿದ್ದಾರೆಂದು ಹೇಳಿದರು.
Advertisement