

ಬೆಂಗಳೂರು: ಬೆಂಗಳೂರಿನ ಕೋಗಿಲು ಫಕೀರ್ ಲೇಔಟ್ ನಲ್ಲಿರುವ ಅನಧಿಕೃತ ಮನೆಗಳನ್ನು ತೆರವುಗೊಳಿಸಲಾಗಿದ್ದು, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಹೆಸರಿನಲ್ಲಿ ರಾಜ್ಯ ಸರ್ಕಾರ ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಮನೆಗಳನ್ನು ಮಂಜೂರು ಮಾಡುತ್ತಿದೆ ಎಂಬ ವಿರೋಧ ಪಕ್ಷ ಬಿಜೆಪಿ ಆರೋಪವನ್ನು ಗೃಹ ಸಚಿವ ಜಿ ಪರಮೇಶ್ವರ ಅವರು ಬುಧವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ ಮತ್ತು ಇದು "ರಾಜಕೀಯ ಹೇಳಿಕೆ" ಎಂದು ಹೇಳಿದ್ದಾರೆ.
ದಾಖಲೆಗಳ ಸರಿಯಾದ ಪರಿಶೀಲನೆ ಮತ್ತು ಅವರ ಅರ್ಹತೆಯನ್ನು ದೃಢಪಡಿಸಿದ ನಂತರ ಅವರು ಸ್ಥಳೀಯರಾಗಿದ್ದರೆ ಮಾನವೀಯ ಆಧಾರದ ಮೇಲೆ ಪರಿಹಾರ ನೀಡಲಾಗುತ್ತಿದೆ ಎಂದು ಪರಮೇಶ್ವರ ಪ್ರತಿಪಾದಿಸಿದ್ದಾರೆ.
"ಅವರು (ಬಿಜೆಪಿ) ಪ್ರತಿಭಟಿಸಲಿ, ಆದರೆ ಬಾಂಗ್ಲಾದೇಶಿಯರು ಅಲ್ಲಿದ್ದಾರೆ ಎಂದು ಸುಮ್ಮನೆ ಹೇಳಿಕೆ ನೀಡುವುದು ಸರಿಯಲ್ಲ. ನಾವು ಪರಿಶೀಲಿಸುವುದಿಲ್ಲವೇ? ಸರಿಯಾದ ಪರಿಶೀಲನೆಯ ನಂತರ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಬಾಂಗ್ಲಾದೇಶಿಗಳು ಅಲ್ಲಿದ್ದರೆ, ಅವರಿಗೆ ಮನೆಗಳನ್ನು ನೀಡಲಾಗುತ್ತದೆಯೇ? ಅವರನ್ನು ಬಂಧಿಸಿ ಗಡಿಯಲ್ಲಿ ಬಿಡಲಾಗುತ್ತದೆ. ನಾವು ಅವರ ರಾಯಭಾರ ಕಚೇರಿಗೆ ಮಾಹಿತಿ ನೀಡಿ ಗಡೀಪಾರು ಮಾಡುತ್ತೇವೆ" ಎಂದು ಪರಮೇಶ್ವರ ಹೇಳಿದರು."
"ಅವರು(ಅಕ್ರಮ ಬಾಂಗ್ಲಾದೇಶಿ ವಲಸಿಗರು) ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ, ಅವರನ್ನು ಬಂಧಿಸಿ ಜೈಲಿಗೆ ಹಾಕಲಾಗುತ್ತದೆ. ಆರ್ ಅಶೋಕ(ವಿರೋಧ ಪಕ್ಷದ ನಾಯಕ) ಹಿಂದೆ ಗೃಹ ಸಚಿವರಾಗಿದ್ದರು. "ಅವರಿಗೆ ಇದೆಲ್ಲವೂ ಗೊತ್ತಿದೆ. ಆದರೆ ಅವರು ರಾಜಕೀಯ ಕಾರಣಗಳಿಗಾಗಿ ಮಾತನಾಡುತ್ತಿದ್ದಾರೆ" ಎಂದು ಪರಮೇಶ್ವರ ಸುದ್ದಿಗಾರರಿಗೆ ತಿಳಿಸಿದರು.
ಪ್ರವಾಹದಿಂದ ಹಾನಿಗೊಳಗಾದ ರಾಜ್ಯದ ಜನರಿಗೆ ಇನ್ನೂ ಸರಿಯಾದ ವಸತಿ ಕಲ್ಪಿಸಿಲ್ಲ. ಆದರೆ ರಾಜ್ಯ ಸರ್ಕಾರವು ಹೊಸ ವರ್ಷದ ಉಡುಗೊರೆಯಾಗಿ ಎರಡು ದಿನಗಳಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರಿಗೆ ಮನೆಗಳನ್ನು ಒದಗಿಸುತ್ತಿದೆ ಎಂದು ಆರ್ ಅಶೋಕ ಆರೋಪಿಸಿದ್ದರು.
ಕೆಡವಲಾದ ಹೆಚ್ಚಿನ ಅಕ್ರಮ ಮನೆಗಳು ಮುಸ್ಲಿಮರಿಗೆ ಸೇರಿದವು ಎಂದು ವರದಿಯಾಗಿರುವುದರಿಂದ, ರಾಜ್ಯ ಸರ್ಕಾರವು "ಮುಸ್ಲಿಂ ತುಷ್ಟೀಕರಣ ರಾಜಕೀಯ"ದಲ್ಲಿ ತೊಡಗಿದೆ ಎಂದು ಹಲವರು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಇನ್ನು ಕಲಬುರಗಿ ಜೈಲಿನಲ್ಲಿ ಪಾರ್ಟಿ ಮತ್ತು ಇಸ್ಪೀಟ್ ಆಟವಾಡುತ್ತಿರುವ ಕೈದಿಗಳ ಕುರಿತ ವರದಿ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ ಅವರು, ಅದು ನಿನ್ನೆ ಅಥವಾ 2020-21 ರಲ್ಲಿ ನಡೆದಿರಲಿ ಎಲ್ಲವನ್ನೂ ಪರಿಶೀಲಿಸಲಾಗುವುದು ಎಂದು ಹೇಳಿದರು.
"ಕೆಲವು ಜನ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಹಳೆಯ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ನಾವು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಘಟನೆ ಇತ್ತೀಚೆಗೆ ನಡೆದಿದ್ದರೆ, ಜೈಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಡಿಜಿ, ಎಲ್ಲಾ ಜೈಲುಗಳಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ" ಎಂದು ಅವರು ಹೇಳಿದರು.
Advertisement