

ಬೆಂಗಳೂರು: ಕೋಗಿಲು ಕ್ರಾಸ್‌ನ ಫಕೀರ್ ಬಡಾವಣೆ ಕ್ರಮೇಣ ಸ್ಲೀಪರ್ ಸೆಲ್‌ಗಳ ಕೇಂದ್ರವಾಗುವ ಅಪಾಯವಿದೆ. ಆದ್ದರಿಂದ ಅಕ್ರಮ ನಿವಾಸಿಗಳ ಪೌರತ್ವವನ್ನು ಸರ್ಕಾರ ಪರಿಶೀಲಿಸಬೇಕು. ಹೀಗಾಗಿ ಇದನ್ನು ಎನ್‌ಐಎ ತನಿಖೆಗೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
ಕೋಗಿಲು ಕ್ರಾಸ್‌ನಲ್ಲಿ ಒತ್ತುವರಿ ತೆರವು ಮಾಡಿದ ವಿವಾದಿತ ಸ್ಥಳಕ್ಕೆ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಇಂದು ಬಿಜೆಪಿ ಮುಖಂಡರೊಂದಿಗೆ ಭೇಟಿ ನೀಡಿದರು. ಸ್ಥಳದಲ್ಲೇ ಇದ್ದ ನಿವಾಸಿಗಳ ಜೊತೆ ಮಾತನಾಡಿದ ಅವರು, ಗುರುತಿನ ಚೀಟಿ ಹಾಗೂ ಇತರೆ ದಾಖಲೆಗಳನ್ನು ಕೇಳಿ ಪರಿಶೀಲಿಸಿದರು.
ಭೇಟಿ ವೇಳೆ ಸ್ಥಳೀಯ ಮಹಿಳೆಯೊಂದಿಗೆ ಮಾತುಕತೆ ನಡೆಸಿದ ಅವರು, ಇಲ್ಲಿ ಎಷ್ಟು ವರ್ಷಗಳಿಂದ ವಾಸಿಸುತ್ತಿದ್ದೀರಿ, ಕರೆತಂದವರು ಯಾರು, ನಿವೇಶನ ಮಂಜೂರು ಮಾಡಲಾಗಿದೆಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, ಕಳೆದ 25 ವರ್ಷಗಳಿಂದ ಇಲ್ಲಿ ವಾಸವಿದ್ದೇವೆ ಎಂದು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ, ಗೂಗಲ್ ನಕ್ಷೆಯಲ್ಲಿ 1 ವರ್ಷದ ಹಿಂದೆ ಮನೆಗಳು ಇರಲಿಲ್ಲ. ಯಾರ ಬಳಿಯೂ ಗುರುತಿನ ಚೀಟಿ ಇಲ್ಲ ಎಂದು ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆ ಕಟ್ಟಿಕೊಡುವುದೇ ಮಾನದಂಡವಾದರೆ ಇನ್ನು ಮುಂದೆ ಸರ್ಕಾರ ಯಾವ ಮುಖ ಇಟ್ಟುಕೊಂಡು ಒತ್ತುವರಿ ತೆರವು ಮಾಡಲಿದೆ? ಬೆಂಗಳೂರಿನಲ್ಲಿ 40 ಕಡೆ 150-200 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಇವರೆಲ್ಲರಿಗೂ ಮನೆ ನಿರ್ಮಿಸಿಕೊಡಲು ಸಾಧ್ಯವೇ? ಒತ್ತುವರಿ ತೆರವಾದ ಕಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿಲ್ಲ. ಇಲ್ಲಿ ಅವರ ಕುಕ್ಕರ್ ಬ್ರದರ್ ಇರುವುದರಿಂದ ಕರು ಹಸುವಿನ ಬಳಿ ಓಡಿ ಬರುವಂತೆ ಬಂದಿದ್ದಾರೆ. ಬಾಂಗ್ಲಾದಿಂದ ಪಶ್ಚಿಮ ಬಂಗಾಳ ಹೊತ್ತಿ ಉರಿಯುತ್ತಿದೆ. ಮುಂದೆ ಕರ್ನಾಟಕವೂ ಹೀಗೆಯೇ ಆಗಲಿದೆ. ಆದ್ದರಿಂದ ಮೊದಲು ಇಲ್ಲಿನ ಜನರ ಪೌರತ್ವ ಪರಿಶೀಲಿಸಬೇಕು. ಜೊತೆಗೆ ಎನ್‌ಐಎ ತನಿಖೆಗೆ ನೀಡಬೇಕು. ಅಧಿಕಾರಿಗಳ ಮೇಲೆ ಯಾವುದೇ ಒತ್ತಡ ಹಾಕದೆ ಈ ಕೆಲಸ ಮಾಡಬೇಕು. ಅಧಿಕಾರಿಗಳು ಅಕ್ರಮ ಮಾಡಿದರೆ ಭವಿಷ್ಯದಲ್ಲಿ ಅವರೇ ಸಿಕ್ಕಿಹಾಕಿಕೊಳ್ಳುತ್ತಾರೆ. ನಕಲಿ ದಾಖಲೆ ಸೃಷ್ಟಿಸಿದರೆ ತನಿಖೆ ಎದುರಿಸಬೇಕಾಗುತ್ತದೆ ಎಂಬುದನ್ನು ಅಧಿಕಾರಿಗಳು ನೆನಪಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ಟೋಪಿ ಸರ್ಕಾರ ಕನ್ನಡಿಗರಿಗೆ ಟೋಪಿ ಹಾಕಿ ಕರ್ನಾಟಕದ ವಿವಿಧೆಡೆ ಮಿನಿ ಬಾಂಗ್ಲಾದೇಶಗಳನ್ನು ಸೃಷ್ಟಿಸಿದೆ. ಕರ್ನಾಟಕ ಈಗ ಮಿನಿ ಬಾಂಗ್ಲಾಗಳ ಹಬ್ ಆಗುತ್ತಿದೆ. ನಾನು ಇಲ್ಲಿಗೆ ಭೇಟಿ ನೀಡುವ ಮುಂಚೆಯೇ ಬಿಜೆಪಿ ಮುಖಂಡರು ಇಲ್ಲಿ ಸರ್ವೆ ಮಾಡಿದ್ದಾರೆ. ನಾನು ಇಲ್ಲಿ ಮಾತನಾಡಿಸಿದಾಗ, ಆಂಧ್ರಪ್ರದೇಶದ ಪೆನುಗೊಂಡದಿಂದ ಬಂದವರು ಎಂದು ತಿಳಿದುಬಂದಿದೆ. ಒಬ್ಬ ಮಹಿಳೆ 26 ವರ್ಷದಿಂದ ಇಲ್ಲಿಯೇ ಇದ್ದೇವೆ ಎನ್ನುತ್ತಾರೆ. ಅಂದರೆ ಆಕೆ ಎರಡು ವರ್ಷದ ಮಗುವಿದ್ದಾಗ ಹೇಗೆ ನಡೆದುಕೊಂಡು ಇಲ್ಲಿಗೆ ಬಂದಳು ಎಂಬ ಪ್ರಶ್ನೆ ಮೂಡುತ್ತದೆ. ಇದು ನಿಜಕ್ಕೂ ಸಾಧ್ಯವೇ? ಎಂದು ಪ್ರಶ್ನೆ ಮಾಡಿದರು.
ಇಲ್ಲಿ ಎಲ್ಲೂ ವ್ಯವಸಾಯ ಮಾಡುವ ಜಾಗವಿಲ್ಲ. ಆದರೂ ಅಷ್ಟು ವರ್ಷದ ಹಿಂದೆ ಇಷ್ಟೊಂದು ಜನರು ಇಲ್ಲಿಗೇಕೆ ಬಂದರು ಎಂದು ತಿಳಿದಿಲ್ಲ. ನಾವು ಬರುವ ಮುನ್ನವೇ ವಾಸೀಮ್ ಎಂಬ ಮುಖಂಡ ನಿವಾಸಿಗಳನ್ನು ಹೊರಕ್ಕೆ ಕಳುಹಿಸಿದ್ದಾರೆ. ಸುತ್ತ ಇರುವ ಟಿಪ್ಪು ನಗರ ಮೊದಲಾದ ಪ್ರದೇಶಗಳಿಂದ ಕನ್ನಡ ಮಾತನಾಡುವವರನ್ನು ಇಲ್ಲಿಗೆ ಕರೆಸಲಾಗಿದೆ. ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಅಧಿಕಾರಿಗಳಿಗೆ ಬೆದರಿಕೆ ಹಾಕಿ, ಇಲ್ಲಿ ಇರುವವರೆಲ್ಲರೂ ಸ್ಥಳೀಯರು ಎಂದು ದಾಖಲು ಮಾಡಬೇಕು, ಯಾರನ್ನೂ ಪ್ರಶ್ನೆ ಮಾಡಬಾರದು ಎಂದು ಸೂಚಿಸಿದ್ದಾರೆ ಎಂದರು.
ಇಲ್ಲಿ 160 ನಿವಾಸಿಗಳಿದ್ದರು ಎಂದು ಮಾಧ್ಯಮಗಳಲ್ಲೂ ಬಂದಿದೆ. ಈಗ ಅಧಿಕಾರಿಯನ್ನು ಕೇಳಿದರೆ 280 ಜನರಿದ್ದಾರೆ ಎನ್ನುತ್ತಿದ್ದಾರೆ. ಇನ್ನೂ ಜನಸಂಖ್ಯೆ 400 ಆಗಬಹುದು ಎನ್ನುತ್ತಿದ್ದಾರೆ. ಇಷ್ಟು ಜನರಿಗೆ ಆಶ್ರಯ ನೀಡುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಮಾಡಿದ್ದಾರೆ. ಒಂದೇ ವರ್ಷದ ಹಿಂದಿನ ಗೂಗಲ್ ಮ್ಯಾಪ್‌ನಲ್ಲಿ ಎಲ್ಲ ಕಡೆ ಹಸಿರು ಇತ್ತು. ಈಗ ಎಲ್ಲವೂ ಬದಲಾಗಿದೆ. ಅಂದರೆ ಒಂದೇ ವರ್ಷದಲ್ಲಿ ಇವರೆಲ್ಲರೂ ಇಲ್ಲಿಗೆ ಬಂದಿದ್ದಾರೆ. ಬಾಂಗ್ಲಾದಲ್ಲಿ 20,000 ರೂ. ನೀಡಿದರೆ ಗುರುತಿನ ಚೀಟಿ ನೀಡುತ್ತಾರೆ. ವಾಸೀಮ್ ಎಂಬ ರೌಡಿಶೀಟರ್ ಅವನ ಹೆಸರಲ್ಲೇ ಬಡಾವಣೆ ನಿರ್ಮಿಸಿದ್ದಾರೆ. ಈತ ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದರು.
ಅಕ್ರಮ ವಿದ್ಯುತ್ ಸಂಪರ್ಕ
ರಾಜ್ಯದಲ್ಲಿ 4 ಲಕ್ಷ ಜನರು ಮನೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದೆ ಬದುಕುತ್ತಿದ್ದಾರೆ. ಆದರೆ ಈ ಪ್ರದೇಶದಲ್ಲಿ ದುಬಾರಿ ಕೇಬಲ್ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಈ ಸೌಲಭ್ಯ ಕಲ್ಪಿಸಿದ ಬೆಸ್ಕಾಂ ಅಧಿಕಾರಿಗಳಿಗೆ ನಾಚಿಕೆಯಾಗಬೇಕು. ಇಲ್ಲಿ ಮೀಟರ್ ಕೂಡ ಅಳವಡಿಸಿಲ್ಲ. ಬೆಂಕಿ ಅನಾಹುತವಾಗಿ ಯಾರಾದರೂ ಸತ್ತರೆ, ಮತ್ತೆ ಪರಿಹಾರ ನೀಡುತ್ತಾರೆ. ಬೆಂಗಳೂರಿನಲ್ಲಿ ಪೊಲೀಸರೇ ಡ್ರಗ್ ಮಾಫಿಯಾದಲ್ಲಿ ಶಾಮೀಲಾಗಿದ್ದಾರೆ. 130 ಪೊಲೀಸರು ಅಮಾನತಾಗಿದ್ದಾರೆ. ಇದು ಉಡ್ತಾ ಬೆಂಗಳೂರು ಆಗಿದೆ. ಇಂತಹ ಸನ್ನಿವೇಶ ಇರುವಾಗ ಪ್ರತಿ ಕಾಲೋನಿಯಲ್ಲಿ ಬಾಂಗ್ಲಾ ಹುಟ್ಟಿಕೊಳ್ಳುತ್ತಿದೆ. ಇವರಿಗೆ ಕೆಲಸ ಕೊಟ್ಟವರಾರು, ಊಟ ಎಲ್ಲಿಂದ ಮಾಡುತ್ತಾರೆ ಎಂದು ಅಧಿಕಾರಿಗಳಿಗೆ ಗೊತ್ತಿಲ್ಲ. ಅನೇಕರ ಬಳಿ ಜನ್ಮ ಪ್ರಮಾಣಪತ್ರವೇ ಇಲ್ಲ. ಬೇರೆ ಸ್ಥಳದ ರೇಷನ್ ಕಾರ್ಡ್ ಇಟ್ಟುಕೊಂಡಿದ್ದಾರೆ. 600 ಕೋಟಿ ರೂ. ಮೌಲ್ಯದ ಜಮೀನನ್ನು ಇವರಿಗೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಪ್ರವಾಹದಿಂದ 13,999 ಮನೆಗಳಿಗೆ ಹಾನಿಯಾಗಿದ್ದು, ಅವರಿಗೆ ಮನೆ ನೀಡಿಲ್ಲ. ಅಂತಹವರು ನಮ್ಮದೇ ರೈತರ ಮಕ್ಕಳಾಗಿದ್ದು, ಇನ್ನೂ ನಿರಾಶ್ರಿತರಾಗಿದ್ದಾರೆ. 2,400 ಶಾಲೆಗಳ ಶೀಟ್‌ಗಳು ಹಾರಿಹೋಗಿದೆ. ಅದನ್ನು ಇನ್ನೂ ಕಟ್ಟಿಕೊಟ್ಟಿಲ್ಲ. ಆದರೆ ಹೊಸ ವರ್ಷಕ್ಕೆ ಬಾಂಗ್ಲಾದವರಿಗೆ ಮನೆಯ ಕೊಡುಗೆ ನೀಡಿದ್ದಾರೆ. ಕನ್ನಡಿಗರಿಗೆ ಚಿಪ್ಪು ನೀಡಿ, ಬಾಂಗ್ಲಾದವರಿಗೆ ಕಪ್ ನೀಡಿದ್ದಾರೆ. ಇವೆಲ್ಲ ಸ್ಥಳಗಳು ಅಪರಾಧಿ ಚಟುವಟಿಕೆಗಳ ಕೇಂದ್ರವಾಗಲಿದೆ. ಸ್ಲೀಪರ್ ಸೆಲ್‌ಗಳು ಇಲ್ಲಿಗೆ ಬಂದು ನೆಲೆಸುತ್ತಾರೆ, ಭಯೋತ್ಪಾದಕರು ಬರುತ್ತಾರೆ ಎಂದರು.
ಕೇರಳ ಸಿಎಂ ಮಾಡಿದ ಒಂದೇ ಒಂದು ಟ್ವೀಟ್‌ಗೆ ಸರ್ಕಾರ ಕ್ರಮ ವಹಿಸಿದೆ. ಈ ವಿಚಾರ ಕೂಡಲೇ ಪಾಕಿಸ್ತಾನಕ್ಕೆ ತಲುಪಿದೆ ಎಂದರೆ ಇಲ್ಲಿನ ಭಯೋತ್ಪಾದಕರೇ ಆ ಮಾಹಿತಿ ರವಾನಿಸಿದ್ದಾರೆ ಎಂದರ್ಥ. ಈಗ ಸಿಎಂ ಸಿದ್ದರಾಮಯ್ಯ ಕೇರಳ ಸಿಎಂ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಎಂದರೆ ಅವರು ಬುಲ್ಡೋಜರ್ ಸರ್ಕಾರ ಎಂದು ಒಪ್ಪಿಕೊಂಡಂತಾಗಿದೆ. ಕೇರಳ ಸಿಎಂ ಜೊತೆ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಸಿದ್ದರಾಮಯ್ಯನವರು ನಾಚಿಕೆ ಪಡಬೇಕು ಎಂದರು.
Advertisement