
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಿತ್ತಾಟಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಕಾಣಿಸುತ್ತಿಲ್ಲ. ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತುಹಾಕಬೇಕು ಎಂದು ಮತ್ತೊಂದು ಬಣ ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ, ತಮ್ಮ ಬೇಡಿಕೆಗಳನ್ನು ಸಲ್ಲಿಸಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.
ಶಾಸಕ ರಮೇಶ್ ಜಾರಕಿಹೊಳಿ ಮತ್ತು ಸಂಸದ ಕೆ ಸುಧಾಕರ್, ಮಾಜಿ ಶಾಸಕರಾದ ಕುಮಾರ್ ಬಂಗಾರಪ್ಪ ಮತ್ತು ಅರವಿಂದ ಲಿಂಬಾವಳಿ ಅವರನ್ನೊಳಗೊಂಡ ತಂಡ ಸೋಮವಾರ ರಾಷ್ಟ್ರ ರಾಜಧಾನಿ ತಲುಪಲಿದೆ ಎಂದು ತಿಳಿದುಬಂದಿದೆ.
ನಮ್ಮ ವಿಷಯ ಈಗ ದೆಹಲಿ ತಲುಪಿದೆ. ಅಲ್ಲಿ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ತಿಳಿಸುವುದಾಗಿ ಸುಧಾಕರ್ ಸುದ್ದಿಗಾರರಿಗೆ ತಿಳಿಸಿದರು. ಜಾರಕಿಹೊಳಿ ಮತ್ತು ಬಂಗಾರಪ್ಪ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ತಮ್ಮ ಕಾರ್ಯಾಚರಣೆಯ ಯಶಸ್ಸಿಗೆ ಆಶೀರ್ವಾದ ಪಡೆದರು ಎಂದು ಮೂಲಗಳು ತಿಳಿಸಿವೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆರಂಭಿಸಿರುವ ವಿಜಯೇಂದ್ರ ವಿರುದ್ಧದ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಸೇರಿದಂತೆ ಹಲವು ಮುಖಂಡರ ಬೆಂಬಲ ವ್ಯಕ್ತವಾಗಿದೆ.
ಹಲವು ಹಿರಿಯ ನಾಯಕರನ್ನು ಬದಿಗೊತ್ತಲು ಯತ್ನಿಸಿದ ಆರೋಪದ ಮೇಲೆ ವಿಜಯೇಂದ್ರ ವಿರುದ್ಧ ಬಣ ಅಸಮಾಧಾನಗೊಂಡಿದೆ.
ಯತ್ನಾಳ್ ಅವರು ವಿಜಯೇಂದ್ರ ಮತ್ತು ಅವರ ತಂದೆ - ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಹೋರಾಡುತ್ತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ನಿಲುವಿಗೆ ವಿರುದ್ಧವಾಗಿ ಕರ್ನಾಟಕದ ರಾಜ್ಯ ಘಟಕದಲ್ಲಿ ವಂಶಾಡಳಿತ ಹೆಚ್ಚಾಗುತ್ತಿರುವುದು ತಮ್ಮಅಸಮಾಧಾನಕ್ಕೆ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.
Advertisement