ಸರ್ವ ಸಮ್ಮತ ಅಧ್ಯಕ್ಷರ ಆಯ್ಕೆಯೇ ಬಿಜೆಪಿಗೆ ಕಗ್ಗಂಟು! (ಸುದ್ದಿ ವಿಶ್ಲೇಷಣೆ)

ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಯತ್ನಾಳ್ ನೇತೃತ್ವದ ಭಿನ್ನಮತೀಯರ ಗುಂಪು ಅಧ್ಯಕ್ಷ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಖಚಿತವಾಗಿದೆ.
Karnataka BJP office- Amit shah-Modi
ಕರ್ನಾಟಕ ಬಿಜೆಪಿ ಕಚೇರಿ- ಅಮಿತ್ ಶಾ- ಮೋದಿonline desk
Updated on

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆಗುತ್ತಾರಾ? ಅಥವಾ ಅವರನ್ನು ಬಿಟ್ಟು ಹೊಸಬರಿಗೆ ವರಿಷ್ಠರು ಪಟ್ಟ ಕಟ್ಟುತ್ತಾರಾ?

ಪಕ್ಷದ ಕೇಂದ್ರ ನಾಯಕರ ವಿರುದ್ಧವೇ ಸಿಡಿದೆದ್ದು ಇದೀಗ ಬೀದಿ ರಂಪ ಎಬ್ಬಿಸಿರುವ ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ್. ರಮೇಶ್ ಜಾರಕಿಹೊಳಿ ಮತ್ತಿತರರ ವಿರುದ್ಧ ಕೇಂದ್ರ ಮಂಡಳಿ ಕ್ರಮ ಯಾವುದೇ ಕೈಗೊಳ್ಳದೇ ಇರುವುದರ ಮರ್ಮ ಏನು?

ಈ ಪ್ರಶ್ನೆಗಳಿಗೆ ಬಿಜೆಪಿಯಲ್ಲೂ ಉತ್ತರಗಳ ಹುಡುಕಾಟ ನಡೆದಿದೆ. ವಿಜಯೇಂದ್ರ ಅವರೇನೋ ಅಧ್ಯಕ್ಷರಾಗಿ ಮತ್ತೆ ಮುಂದುರಿಯುವ ಪ್ರಚಂಡ ಆತ್ಮ ವಿಶ್ವಾಸದಲ್ಲಿದ್ದಾರೆ. ಇತ್ತೀಚೆಗೆ ಜಿಲ್ಲಾ ಘಟಕಗಳ ಅಧ್ಯಕ್ಷರ ಆಯ್ಕೆಯಲ್ಲಿ ಬಹುತೇಕ ಅವರೇ ಮೇಲುಗೈ ಸಾಧಿಸಿದ್ದಾರೆ. ಒಂದುವೇಳೆ ಸಹಮತ ಮೂಡದೇ ಚುನಾವಣೆಯೇ ಅನಿವಾರ್ಯವಾದಲ್ಲಿ ಅದನ್ನು ಎದುರಿಸಲೂ ಅವರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಹಾಗೇನಾದರೂ ಚುನಾವಣೆಯೇ ಅನಿವಾರ್ಯವಾದರೆ ಅದರಿಂದ ಮುಂದಿನ ದಿನಗಳಲ್ಲಿ ಆಗಬಹುದಾದ ಪ್ರತಿಕೂಲ ಪರಿಣಾಮಗಳ ಬಗ್ಗೆ ಬಿಜೆಪಿ ಹೈಕಮಾಂಡ್ ಚಿಂತೆಗೀಡಾಗಿದ್ದು. ಈ ನಿಟ್ಟಿನಲ್ಲಿ ಸಂಘ ಪರಿವಾರದ ಪ್ರಮುಖರ ಅಭಿಪ್ರಾಯ ಮತ್ತು ಸೂಚನೆ ಪಡೆದು ಸಹಮತದ ಅಧ್ಯಕ್ಷರ ಆಯ್ಕೆ ನಡೆಸುವ ಆಲೋಚನೆಯೂ ಪಕ್ಷದ ವರಿಷ್ಠರಿಗಿದೆ.

ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಯತ್ನಾಳ್ ನೇತೃತ್ವದ ಭಿನ್ನಮತೀಯರ ಗುಂಪು ಅಧ್ಯಕ್ಷ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಖಚಿತವಾಗಿದೆ. ಇದೇ ಅಂತಿಮವಾದರೆ ಯತ್ನಾಳ್ ಅಥವಾ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಣದಿಂದ ಅಭ್ಯರ್ಥಿಯಾಗುವ ಸಾಧ್ಯತೆಗಳು ಇವೆ. ಬೊಮ್ಮಾಯಿ ನೇರವಾಗಿ ಯತ್ನಾಳ್ ಗುಂಪಿನ ಜತೆ ಗುರುತಿಸಿಕೊಂಡಿಲ್ಲ ಎಂಬುದು ನಿಜವಾದರೂ ಅವರು ವಿಜಯೇಂದ್ರ ಪರವಾಗಿಯಂತೂ ಇಲ್ಲ. ತಟಸ್ಥ ಗುಂಪಿನಲ್ಲಿದ್ದುಕೊಂಡೇ ಯತ್ನಾಳ್ ಗುಂಪಿನ ಜತೆ ಸಹಮತ ಹೊಂದಿದ್ದಾರೆ. ಸಂದರ್ಭ ಒದಗಿ ಬಂದರೆ ತಾನು ಸಹಮತದ ಅಭ್ಯರ್ಥಿ ಆಗಬಹುದು ಎಂಬುದು ಒಂದು ಲೆಕ್ಕಾಚಾರ. ಆದರೆ ಅವರ ಆಯ್ಕೆಗೆ ಸಂಘ ಪರಿವಾರದ ಪ್ರಮುಖರು ಸಮ್ಮತಿ ಸೂಚಿಸುವ ಸಾಧ್ಯತೆಗಳು ತೀರಾ ಕಡಿಮೆ.

ಅಧ್ಯಕ್ಷರ ಆಯ್ಕೆಗೆ ಚುನಾವಣಾಧಿಕಾರಿಯಾಗಿ ದಿಲ್ಲಿ ನಾಯಕರಿಂದ ನೇಮಕಗೊಂಡಿರುವ ಹಿರಿಯ ನಾಯಕ ಶಿವರಾಜ್ ಸಿಂಗ್ ಚವ್ಹಾಣ್ ಸದ್ಯದಲ್ಲೇ ಬೆಂಗಳೂರಿಗೆ ಬರಲಿದ್ದು ಈ ಸಂಬಂಧ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಬಹತೇಕ ಸಂಧಾನ ಸೂತ್ರದೊಂದಿಗೆ ಅವರು ಬರುವ ಸಾಧ್ಯತೆಗಳಿವೆ.

ಜಿಲ್ಲಾ ಘಟಕಗಳ ಅಧ್ಯಕ್ಷರು, ಶಾಸಕರು, ಸಂಸದರು, ರಾಜ್ಯ ಕೋರ್ ಕಮಿಟಿ ಸದಸ್ಯರು ಸೇರಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ. ಈಗಿನ ಸನ್ನಿವೇಶದಲ್ಲಿ ಹೊಸದಾಗಿ ನೇಮಕಗೊಂಡಿರುವ 23 ಜಿಲ್ಲಾಧ್ಯಕ್ಷರ ಬೆಂಬಲ ವಿಜಯೇಂದ್ರಗೆ ಇದೆ. ಜಿಲ್ಲಾಧ್ಯಕ್ಷರ ಆಯ್ಕೆ ಚುನಾವಣಾ ಪ್ರಕ್ರಿಯೆಗಳಿಗೆ ಅನುಸಾರವಾಗಿ ನಡೆದಿದ್ದು ಅದರಲ್ಲಿ ತನ್ನ ಪಾತ್ರ ಏನೂ ಇಲ್ಲ ಎಂದು ವಿಜಯೇಂದ್ರ ಹೇಳುತ್ತಿದ್ದಾರೆ. ಆದರೆ ಆಯ್ಕೆಯಾಗಿರುವ ಎಲ್ಲರೂ ಅವರ ಪರ ಒಲವು ಉಳ್ಳವರೇ ಎಂಬುದನ್ನು ನಿರಾಕರಿಸಲು ಆಗುವುದಿಲ್ಲ. ಪ್ರಮುಖವಾಗಿ ಇದೇ ಯತ್ನಾಳ್ ಗುಂಪಿನ ಆಕ್ರೋಶಕ್ಕೆ ಕಾರಣವಾಗಿದೆ. ವಿಜಯೇಂದ್ರ ರಾಜಕೀಯ ತಂತ್ರಕ್ಕೆ ಹೈಕಮಾಂಡ್ ಕೂಡಾ ಕೈಜೋಡಿಸಿರುವುದರಿಂದ ಜಿಲ್ಲಾಧ್ಯಕ್ಷರುಗಳ ಆಯ್ಕೆ ವಿಚಾರದಲ್ಲಿ ಭಿನ್ನಮತೀಯರಿಗೆ ಹಿನ್ನಡೆಯಾಗಿದೆ.

ಇನ್ನುಳಿದಂತೆ ಬಿಜೆಪಿಯ ಶಾಸಕರ ಪೈಕಿ ಹೆಚ್ಚಿನವರ ಬೆಂಬಲ ವಿಜಯೇಂದ್ರಗೆ ಇದೆ. ತಟಸ್ಥ ಬಣದ ಶಾಸಕರಪೈಕಿ ಹೆಚ್ಚಿನವರೂ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಯತ್ನಾಳ್ ರನ್ನು ಬೆಂಬಲಿಸುವ ಸಾಧ್ಯತೆಗಳು ಕಡಿಮೆ ಎಂಬುದು ಬಿಜೆಪಿಯ ಮೂಲಗಳೇ ಹೇಳುತ್ತವೆ.

ನಾಲ್ಕು ಗೋಡೆಗಳ ನಡುವೆ ಇತ್ಯರ್ಥವಾಗಬೇಕಾದ ವಿಚಾರವನ್ನು ಯತ್ನಾಳ್ ಬೀದಿಗೆ ತಂದು ರಂಪ ಮಾಡುತ್ತಿರುವುದಲ್ಲದೇ ಪಕ್ಷದ ಎಲ್ಲ ನಾಯಕರ ವಿರುದ್ಧವೂ ಬಹಿರಂಗವಾಗೇ ಹರಿಹಾಯುತ್ತಿದ್ದಾರೆ. ಅವರ ಆಕ್ರೋಶದ ಬಿರು ನುಡಿಗಳು ಬರೀ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮಾತ್ರ ಗುರಿಯಾಗಿಸಿಕೊಂಡಿಲ್ಲ. ಈ ಹಿಂದೆ ಪಕ್ಷದ ರಾಜ್ಯ ಉಸ್ತುವಾರಿಯಾಗಿದ್ದ ಅರುಣ್ ಸಿಂಗ್, ಈಗಿನ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ವಿರುದ್ಧವೂ ಕಟು ಟೀಕೆಗಳನ್ನು ಮಾಡಿದ್ದಾರೆ. ಅವರ ಬಹಿರಂಗ ಟೀಕೆಗೆ ಗುರಿಯಾಗದ ನಾಯಕರುಗಳೇ ಇಲ್ಲ. ಇದು ಬಿಜೆಪಿಯ ಅಧಿಕ ಸಂಖ್ಯೆಯ ಮುಖಂಡರು , ಶಾಸಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿರುವ ಅಂಶ.

Karnataka BJP office- Amit shah-Modi
ಪರಿಹಾರ ಕಾಣದ ಬಿಜೆಪಿಯ ಬೀದಿ ರಂಪ ಇಬ್ಭಾಗಕ್ಕೆ ಮುನ್ನುಡಿಯೆ? (ಸುದ್ದಿ ವಿಶ್ಲೇಷಣೆ)

ಇದು ಅವರಿಗೆ ಅಡ್ಡಿಯಾಗಿರುವ ಸಂಗತಿ. ಇದಕ್ಕಿಂತ ಹೆಚ್ಚಾಗಿ ಮಾಜಿ ಸಚಿವರಾದ ರಮೇಶ ಜಾರಕಿಹೊಳಿ,ಕುಮಾರ ಬಂಗಾರಪ್ಪ, ಸಂಸದ ಡಾ. ಸುಧಾಕರ್,ಶಾಸಕ ಹರೀಶ್ ಸೇರಿದಂತೆ ಅವರ ಬೆಂಬಲಕ್ಕಿರುವವರ ಪೈಕಿ ಕೆಲವು ಪ್ರಮುಖರು ಯಾರೂ ಮೂಲ ಬಿಜೆಪಿಯವರೂ ಅಲ್ಲ, ಸಂಘ ಪರಿವಾರದ ಹಿನ್ನೆಲೆ ಉಳ್ಳವರೂ ಅಲ್ಲ. ಹೀಗಾಗಿ ಈ ವಿಚಾರವೂ ಅಧ್ಯಕ್ಷರ ಆಯ್ಕೆಯಲ್ಲಿ ಪರಿಗಣನೆ ಆಗುವ ಸಾಧ್ಯತೆಗಳಿವೆ.

ಇನ್ನುಳಿದಂತೆ ಅಧ್ಯಕ್ಷ ಪದವಿಯ ಮೇಲೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ಥನಾರಾಯಣ ಸೇರಿದಂತೆ ಕೆಲವರು ಕಣ್ಣಿಟ್ಟಿದ್ದಾರೆ. ಆದರೆ ಜಾತಿ ಸಮೀಕರಣವೇ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈಗಾಗಲೇ ಒಕ್ಕಲಿಗ ಸಮುದಾಯಕ್ಕೆ ಸೇರಿದ ಆರ್. ಅಶೋಕ್ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದಾರೆ. ಸಿ.ಟಿ.ರವಿ ಹಾಗೂ ಡಾ. ಅಶ್ವತ್ಥ ನಾರಾಯಣ ಅದೇ ಸಮುದಾಯಕ್ಕೆ ಸೇರಿರುವುದರಿಂದ ಮತ್ತೆ ಅದೇ ಜಾತಿಗೆ ಪ್ರಾತಿನಿಧ್ಯ ಕೊಡುವುದು ದೂರದ ಮಾತು. ಹಾಗೊಂದು ವೇಳೆ ಈ ಇಬ್ಬರಲ್ಲಿ ಯಾರನ್ನೇ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರೆ ಆರ್. ಅಶೋಕ್ ಕ್ಯಾಬಿನೆಟ್ ಸಚಿವರ ದರ್ಜೆಯ ಸಕಲ ಸೌಲಭ್ಯಗಳಿರುವ ವಿಪಕ್ಷ ನಾಯಕನ ಹುದ್ದೆಯನ್ನು ಕಳೆದುಕೊಳ್ಳಬೇಕಾಗುತ್ತದೆ.

ಅವರು ವಿಪಕ್ಷ ನಾಯಕರಾದಂದಿನಿಂದ ಶಾಸನ ಸಭೆಯ ಒಳಗೆ ಮತ್ತು ಹೊರಗೆ ಪರಿಣಾಮಕಾರಿಯಾಗಿ ಸರ್ಕಾರದ ವಿರುದ್ಧ ಪ್ರತಿಭಟಿಸಿಲ್ಲ. ಅವರ ಕಾಋ್ಯ ನಿರ್ವಹಣೆ ಬಗ್ಗೆ ಅತೃಪ್ತಿ ಇದೆಯಾದರೂ ಸದ್ಯಕ್ಕೆ ಬೇರೆ ಬೇರೆ ಕಾರಣಗಳಿಗೆ ಅವರನ್ನು ಬದಲಾಯಿಸುವ ಸ್ಥಿತಿಯಲ್ಲಿ ಬಿಜೆಪಿ ವರಿಷ್ಠರೂ ಇಲ್ಲ. ಮತ್ತೊಂದು ಮುಖ್ಯ ಕಾರಣ ಎಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕತ್ವ ಒಕ್ಕಲಿಗರ ಕೈನಲ್ಲೇ ಇರುವುದು. ಹೀಗಾಗಿ ಮತ್ತೆ ಅದೇ ಸಮುದಾಯಕ್ಕೆ ಸೇರಿದವರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸುವ ಸಾಧ್ಯತೆಗಳು ಕಡಿಮೆ.

ಪರಿಶಿಷ್ಟ ಜಾತಿಗೆ ಸೇರಿದ ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕರಾಗಿದ್ದಾರೆ. ಹೀಗಾಗಿ ಆ ಸಮುದಾಯವನ್ನು ಪರಿಗಣಿಸುವ ಸಾಧ್ಯತೆಗಳು ಸದ್ಯಕ್ಕೆ ಇಲ್ಲ. ಯಾವುದೇ ಕೋನದಿಂದ ನೋಡಿದರೂ ಬಿಜೆಪಿ ಪ್ರಬಲ ಲಿಂಗಾಯಿತ ಸಮುದಾಯದ ವಿರೋಧ ಕಟ್ಟಿಕೊಳ್ಳುವ ಸಾಹಸಕ್ಕೆ ಮುಂದಾಗುವುದಿಲ್ಲ. ಅಧಿಕಾರ ಇರಲಿ, ಇಲ್ಲದಿರಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿ ದೊಡ್ಡ ರಾಜಕೀಯ ಶಕ್ತಿ ಎಂಬುದನ್ನು ಪಕ್ಷದಲ್ಲಿನ ಅವರ ವಿರೋಧಿಗಳೂ ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. ಅವರನ್ನು ಬದಿಗೊತ್ತಿ ತೀರ್ಮಾನ ತೆಗೆದುಕೊಳ್ಳುವ ಧೈರ್ಯ ಬಿಜೆಪಿ ನಾಯಕತ್ವಕ್ಕೂ ಇಲ್ಲ.

Karnataka BJP office- Amit shah-Modi
ಕುಸ್ತಿಗೆ ತೊಡೆ ತಟ್ಟಿದ ಸಿದ್ದು ಬೆಂಬಲಿಗರು; ಡಿ.ಕೆ.ಶಿ. ಗುಪ್ತ ಚದುರಂಗದಾಟ; ದಾಳ ಯಾರು? (ಸುದ್ದಿ ವಿಶ್ಲೇಷಣೆ)

ಒಂದು ವರ್ತಮಾನದ ಪ್ರಕಾರ ಚುನಾವಣೆ ಇಲ್ಲದೇ ಸಹಮತದ ಅಧ್ಯಕ್ಷರ ಆಯ್ಕೆಗೆ ಸೂತ್ರವೊಂದನ್ನು ಶಿವರಾಜ್ ಸಿಂಗ್ ಚೌಹಾಣ್ ದಿಲ್ಲಿಯಿಂದ ಹೊತ್ತು ತರುವ ನಿರೀಕ್ಷೆ ಇದೆ. ಅದೆಂದರೆ ವಿಜಯೇಂದ್ರ ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು. ಪಕ್ಷದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಪ್ರಮುಖ ಪದಾಧಿಕಾರಿಗಳ ಹುದ್ದೆಗಳ ನೇಮಕಾತಿಯಲ್ಲಿ ತಟಸ್ಥ ಬಣದ ಪಕ್ಷ ನಿಷ್ಠ ಮತ್ತು ಸಂಘ ನಿಷ್ಠ ಶಾಸಕರು, ಮುಖಂಡರನ್ನು ಪರಿಗಣಿಸುವುದು. ಹಾಗೆಯೇ ಕೋರ್ ಕಮಿಟಿಯಲ್ಲಿ ಭಿನ್ನಮತೀಯರ ಪೈಕಿ ಒಬ್ಬರಿಗೆ ಅಥವಾ ಇಬ್ಬರಿಗೆ ಅವಕಾಶ ಕಲ್ಪಿಸುವುದು , ಪಕ್ಷದ ರಾಷ್ಟ್ರೀಯ ಸಮಿತಿಯಲ್ಲಿ ಕಾರ್ಯದರ್ಶಿ ಹುದ್ದೆಗೆ ಶಾಸಕ ಯತ್ನಾಳ್ ಅವರನ್ನು ಪರಿಗಣಿಸುವುದು ಈ ಸೂತ್ರದಲ್ಲಿ ಸೇರಿದೆ ಎಂದೂ ಹೇಳಲಾಗುತ್ತಿದೆ.

ಆದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಉಮೇದಿನಲ್ಲಿರುವ ಯತ್ನಾಳ್ ಇದನ್ನು ಒಪ್ಪುತ್ತಾರೆಯೆ? ಎಂಬುದು ಸದ್ಯದ ಪ್ರಶ್ನೆ.

ಹೀಗೆ ಯಾವುದೇ ದೃಷ್ಟಿಯಿಂದ ನೋಡಿದರೂ ಬಿಜೆಪಿಯ ಬಣಗಳ ಬೀದಿ ಕಿತ್ತಾಟ ಸದ್ಯಕ್ಕೆ ಕೊನೆಯಾಗುವ ಲಕ್ಷಣಗಳು ಇಲ್ಲ. ಲಿಂಗಾಯಿತರು ಬಿಜೆಪಿಯ ಓಟ್ ಬ್ಯಾಂಕ್ ಎಂಬ ಸಿದ್ಧಾಂತಕ್ಕೆ ಬದ್ದವಾಗಿರುವ ಬಿಜೆಪಿ ಅದನ್ನು ಹೊರತುಪಡಿಸಿ ಬೇರೆ ಸಮುದಾಯದವರೊಬ್ಬರಿಗೆ ಅಧ್ಯಕ್ಷ ಪಟ್ಟ ಕಟ್ಟುವ ಉದಾರತೆ ಪ್ರದರ್ಶಿಸುತ್ತದೆಯೆ? ಎಂಬುದು ಸದ್ಯಕ್ಕೆ ಪ್ರಶ್ನೆಯಾಗೇ ಉಳಿದಿದೆ.

ಬಿಜೆಪಿಯ ಮೂಲಗಳ ಪ್ರಕಾರ ಅಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರ ಇರುತ್ತಾರೆ . ಆದರೆ ಪಕ್ಷದ ಇಡೀ ಸೂತ್ರ ಹೈಕಮಾಂಡ್ ಕೈನಲ್ಲಿ ಇರುತ್ತದೆ. ಸ್ವತಂತ್ರವಾಗಿ ಅವರು ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಆಗುವುದಿಲ್ಲ.

ಅಮಿತ್ ಶಾ ನಿಗೂಢ ಮೌನದ ಗುಟ್ಟೇನು?

ಇನ್ನು ರಾಜ್ಯ ಬಿಜೆಪಿಯಲ್ಲಿ ಇಷ್ಟೆಲ್ಲ ಬೀದಿ ರಂಪ ಆಗುತ್ತಿದ್ದರೂ ಹೈಕಮಾಂಡ್ ಮೌನವಾಗಿ ಕುಳಿತಿರುವುದು ಏಕೆ? ಎಂದು ಒಳಹೊಕ್ಕು ನೋಡಿದರೆ, ಇದು ದಿಲ್ಲಿಯಲ್ಲೇ ಕುಳಿತಿರುವ ಕೆಲವೇ ಮುಖಂಡರು ನಡೆಸುತ್ತಿರುವ ಬೊಂಬೆಯಾಟ ಎಂಬ ಮಾಹಿತಿ ಸಿಗುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇಲ್ಲಿನ ವಿದ್ಯಮಾನಗಳ ಇಂಚಿಂಚೂ ಮಾಹಿತಿ ಇದೆ. ಆದರೂ ಅವರು ಯಾವುದೇ ಕ್ರಮಕ್ಕೆ ಮುಂದಾಗದಿರುವುದರ ಹಿಂದೆ ಅನೇಕ ನಿಗೂಢ ಅಂಶಗಳಿವೆ ಎಂದೂ ಹೇಳಲಾಗುತ್ತಿದೆ.

ಒಂದಂತೂ ಖಚಿತ. ವಿಜಯೇಂದ್ರ ಅಥವಾ ಯಾರೇ ರಾಜ್ಯ ಬಿಜೆಪಿ ಅಧ್ಯಕ್ಷರಾದರೂ ಭಿನ್ನಮತೀಯ ಚಟುವಟಿಕೆ ನಿಲ್ಲುವ ಸಾಧ್ಯತೆಗಳಿಲ್ಲ. ಈ ಬೆಳವಣಿಗೆಗಳು ನಡೆದಿರುವಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಜೆಪಿಯ ಕೆಲವು ಶಾಸಕರ ಜತೆ ಬಹು ನಿಕಟವಾಗಿ ಮತ್ತು ಪ್ರತ್ಯೇಕವಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇಬ್ಬರು ನಾಯಕರೂ ತಮ್ಮದೇ ಶೈಲಿಯಲ್ಲಿ ಪ್ರತ್ಯೇಕ ಕಾರ್ಯಾಚರಣೆ ಆರಂಭಿಸಿದ್ದು ಮುಂದಿನ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕಾಂಗ್ರೆಸ್ ನಲ್ಲಿದ್ದ ರಾಜೀನಾಮೆ ನೀಡಿ ಬಿಜೆಪಿಗೆ ಬಂದ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದು, ಇತ್ತೀಚೆಗೆ ಚಿಕ್ಕಬಳ್ಳಾಪುರ ದಿಂದ ಲೋಕಸಭೆಗೆ ಆಯ್ಕೆಯಾದ ಡಾ. ಸುಧಾಕರ್ , ಬಿಜೆಪಿಯಲ್ಲಿದ್ದರೂ ಕಾಂಗ್ರೆಸ್ ಜತೆ ಬಹಿರಂಗವಾಗಿ ಗುರುತಿಸಿಕೊಂಡಿರುವ ಶಾಸಕ ಎಸ್.ಟಿ.ಸೋಮಶೇಖರ್, ಮತ್ತು ಶಿವರಾಮ ಹೆಬ್ಬಾರ್ ಸೇರಿದಂತೆ ಕೆಲವರ ಬಹಿರಂಗ ಚಟುವಟಿಕೆಗಳು, ಬಂಡಾಯ ಗಮನಿಸಿದರೆ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಗೊತ್ತಾಗುತ್ತದೆ.

100%

-ಯಗಟಿ ಮೋಹನ್
yagatimohan@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com