
ನಿಜವಾದ ಸಮರ ಇನ್ನೂ ಆರಂಭವಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ನಡೆಯುವ ಮಹಾ ಯುದ್ಧಕ್ಕೆ ಇದು ಮತ್ತೊಂದು ಸುತ್ತಿನ ತಾಲೀಮು. ಈಗ ನಡೆದಿರುವುದು ಪರಸ್ಪರರ ಶಕ್ತಿ ಪರೀಕ್ಷೆ ಅಷ್ಟೆ.
ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಒಪ್ಪಂದದ ವಿಚಾರದಲ್ಲಿ ನಡೆಯುತ್ತಿರುವ ಮುಸುಕಿನ ಗುದ್ದಾಟ ಈಗ ಗುಂಪುಗಳ ಬಲ ಪ್ರದರ್ಶನದ ಹಂತಕ್ಕೆ ಮುಟ್ಟಿದೆ.
ಇತ್ತೀಚೆಗೆ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಒಗ್ಗಟ್ಟಿನ ಪ್ರದರ್ಶನ ಮಾಡಿದ್ದ ಕಾಂಗ್ರೆಸ್ ಗೆ ಅದು ನಡೆದ ಕೆಲವೇ ದಿನಗಳಲ್ಲಿ ಮತ್ತೆ ಬಣ ಬಡಿದಾಟ ಆರಂಭವಾಗಿರುವುದು ಒಂದು ಕಡೆಯಾದರೆ, ಸಿದ್ದರಾಮಯ್ಯ ಅವರೇ ತೆರೆಯ ಹಿಂದೆ ನಿಂತು ಇಡೀ ಪ್ರಸಂಗವನ್ನು ನಿರ್ದೇಶಿಸುತ್ತಿರುವುದು ಕಾಂಗ್ರೆಸ್ ಗೆ ನುಂಗಲಾರದ ತುತ್ತು. ಮತ್ತೊಂದು ಕಡೆ ಕಾಂಗ್ರೆಸ್ ನ ಒಕ್ಕಲಿಗ ಶಾಸಕರು, ಸಚಿವರು ಪ್ರತ್ಯೇಕ ಸಭೆ ಸೇರಿ ಸಿದ್ದರಾಮಯ್ಯ ಬೆಂಬಲಿಗರ ವಿರುದ್ಧ ಕ್ರಮಕ್ಕೆ ವರಿಷ್ಠರನ್ನು ಒತ್ತಾಯಿಸುತ್ತಿರುವುದನ್ನು ಗಮನಿಸಿದರೆ ಸದ್ಯಕ್ಕೆ ಈ ಅಂತರ್ಯುದ್ಧ ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ.
ಇದೆಲ್ಲ ಆರಂಭವಾಗಿದ್ದು ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅವರ ಆಪ್ತೇಷ್ಟರಾದ ಕೆಲವೇ ಸಚಿವರಿಗೆ ಏರ್ಪಡಿಸಿದ್ದ ಭೋಜನಕೂಟದಿಂದ. ಅದೂ ಹೊಸ ವರ್ಷ ಆಚರಣೆಗಾಗಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಡಿ.ಕೆ.ಶಿವಕುಮಾರ್ ವಿದೇಶಕ್ಕೆ ಹೋದ ಸಂದರ್ಭದಲ್ಲಿ. ಬರೀ ಊಟಕ್ಕಷ್ಟೆ ಸೇರಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆ ಭೋಜನಕೂಟಕ್ಕೆ ಎಲ್ಲ ಸಚಿವರನ್ನೂ ಆಹ್ವಾನಿಸಿರಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿಯಾದರೆ, ಮತ್ತೊಂದು ಅಲ್ಲಿ ಮುಂದಿನ ದಿನಗಳಲ್ಲಿ ನಡೆಯಬಹುದಾದ ಸಚಿವ ಸಂಪುಟ ವಿಸ್ತರಣೆ, ಬರುವ ಮೇ ನಲ್ಲಿ ಒಪ್ಪಂದದಂತೆ ಆಗಬೇಕಾಗಿರುವ ಅಧಿಕಾರ ಹಸ್ತಾಂತರ, ಪಕ್ಷದಲ್ಲಿ ದಿನೇ ದಿನೇ ಪ್ರಬಲವಾಗುತ್ತಿರುವ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರತಿತಂತ್ರ ರೂಪಿಸುವ ಕುರಿತ ವಿಚಾರಗಳೂ ಚರ್ಚೆ ಆಗಿದ್ದು ಮುಖ್ಯ ವಿಚಾರ.
ವಿಶೇಷ ಎಂದರೆ ಈ ಭೋಜನಕೂಟದ ಸುದ್ದಿಗಳು ಮಾಧ್ಯಮಗಳಲ್ಲಿ ಬಿತ್ತರವಾದಾಗ ಎಚ್ಚೆತ್ತ ಸಿದ್ದರಾಮಯ್ಯ ಬರೀ ಊಟಕ್ಕೆ ಸೇರಿದ್ದು ಬಿಟ್ಟರೆ ಅಲ್ಲಿ ರಾಜಕೀಯ ವಿಚಾರಗಳ ಚರ್ಚೆಯೇ ನಡೆಯಲಿಲ್ಲ ಎಂದು ಪ್ರತಿಕ್ರಿಯಿಸಿದರೆ ಅವರದೇ ಸಂಪುಟದ ಸಚಿವ ಹಾಗೂ ಪರಮಾಪ್ತರಾದ ಸಚಿವ ಕೆ.ಎನ್. ರಾಜಣ್ಣ ರಾಜಕೀಯ ವಿದ್ಯಮಾನಗಳ ಚರ್ಚೆ ನಡೆದಿದ್ದು ನಿಜ ಎಂದು ಸ್ಪಷ್ಟಪಡಿಸಿದ್ದು ಗಮನಾರ್ಹ ಸಂಗತಿ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಆ ಸ್ಥಾನದಿಂದ ಕೆಳಗಿಳಿಸುವ ಮೂಲಕ ಪಕ್ಷದಲ್ಲಿ ತಮ್ಮ ಹಿಡಿತ ಸಾಧಿಸಲು ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಹಲವಾರು ತಿಂಗಳಿನಿಂದ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ತಲೆಕೆಡಿಸಿಕೊಂಡಿಲ್ಲ. ಇದಷ್ಟೇ ಅಲ್ಲದೇ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂಬ ಬೇಡಿಕೆಗೂ ವರಿಷ್ಠರು ಸೊಪ್ಪು ಹಾಕಿಲ್ಲ. ಇದೆಲ್ಲದರ ನಡುವೆಯೇ ಬೆಳಗಾವಿಯಲ್ಲಿ ಇತ್ತಿಚೆಗೆ ನಡೆದ ಕಾಂಗ್ರೆಸ್ನ ರಾಷ್ಟ್ರೀಯ ಅಧಿವೇಶನದ ಸಂದರ್ಭದಲ್ಲೂ ಸ್ಥಳೀಯರೇ ಆದ ಸತೀಶ್ ಜಾರಕಿಹೊಳಿಯವರನ್ನು ದೂರ ಇಟ್ಟು ಶಿವಕುಮಾರ್ ಪ್ರಾಬಲ್ಯ ಮೆರೆದಿದ್ದು ಅವರ ವಿರೋಧಿ ಗುಂಪಿಗೆ ಕಸಿವಿಸಿ ಉಂಟು ಮಾಡಿದೆ.
ಎರಡು ದಿನಗಳ ಸಮಾವೇಶವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ವರಿಷ್ಠರ ಕಣ್ಣಲ್ಲಿ ಶಿವಕುಮಾರ್ ಮೆಚ್ಚುಗೆ ಗಳಿಸಿದ್ದು ಸಿದ್ದರಾಮಯ್ಯ ಬೆಂಬಲಿಗರ ಕಣ್ಣು ಕೆಂಪಾಗಿಸಿದೆ. ಪರಿಸ್ಥಿತಿಯನ್ನು ಹೀಗೇ ಮುಂದುವರಿಯಲು ಬಿಟ್ಟರೆ ಮುಂಬರುವ ದಿನಗಳಲ್ಲಿ ಪಕ್ಷ ಮತ್ತು ಸರ್ಕಾರದಲ್ಲಿ ತಮ್ಮ ಅಸ್ತಿತ್ವಕ್ಕೂ ಸಂಚಕಾರ ಬರಬಹುದೆಂಬ ಆತಂಕವೇ ಈ ಸಭೆಗೆ ಕಾರಣ ಎಂಬುದು ಕಾಂಗ್ರೆಸ್ ನ ಬೆಳವಣಿಗೆಗಳ ಒಳಹೊಕ್ಕು ನೋಡಿದರೆ ಗೊತ್ತಾಗುವ ಸಂಗತಿ. ಸತೀಶ್ ಜಾರಕಿಹೊಳಿ ಮನೆಯಲ್ಲಿನ ಭೋಜನಕೂಟದ ವಿವರಗಳನ್ನು ವಿದೇಶದಲ್ಲಿದ್ದುಕೊಂಡೇ ತಿಳಿದುಕೊಂಡ ಶಿವಕುಮಾರ್, ಪರ್ಯಾಯವಾಗಿ ತಮ್ಮದೇ ಸಮುದಾಯದ ಸಚಿವರ ಸಭೆ ಸಚಿವ ಚೆಲುವರಾಯ ಸ್ವಾಮಿ ನೇತೃತ್ವದಲ್ಲಿ ನಡೆದು ಹೈಕಮಾಂಡ್ ಗೆ ವರದಿ ಸಲ್ಲಿಸುವಂತೆ ನೋಡಿಕೊಂಡಿದ್ದಲ್ಲದೇ ವಿದೇಶದಿಂದ ಬಂದು ದಿಲ್ಲಿಯಲ್ಲಿಳಿದವರೇ ಪಕ್ಷದ ನಾಯಕರಾದ ವೇಣುಗೋಪಾಲ್, ಸುರ್ಜೆವಾಲ ರನ್ನು ಭೇಟಿಯಾಗಿ ಸಿದ್ದರಾಮಯ್ಯ ಬೆಂಬಲಿಗರ ಸಭೆಯ ಕುರಿತು ಎಲ್ಲ ವಿವರಗಳನ್ನೂ ನೀಡಿದ್ದಲ್ಲದೇ ಗೃಹ ಸಚಿವ ಡಾ. ಪರಮೇಶ್ವರ್ ನೇತೃತ್ವದಲ್ಲಿ ನಡೆಯಲಿದ್ದ ಪರಿಶಿಷ್ಟ ಸಚಿವರು, ಶಾಸಕರು,ಮುಖಂಡರ ಭೋಜನಕೂಟದ ಸಭೆಯನ್ನು ನಡೆಯದಂತೆ ನೋಡಿಕೊಂಡಿದ್ದು ಪ್ರಮುಖ ಸಂಗತಿ.
ಈ ಎರಡೂ ಸಭೆಗಳ ಕುರಿತು ತಮಗೇ ಮಾಹಿತಿಯೇ ಇರಲಿಲ್ಲ. ವರಿಷ್ಠರು ಯಾವುದೇ ಸಭೆ ನಡೆಸದಂತೆ ಸೂಚನೆ ಕೊಟ್ಟಿದ್ದರ ಹಿನ್ನಲೆಯೂ ತಮಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸುವ ಮೂಲಕ ಶಿವಕುಮಾರ್ ಅಮಾಯಕರಂತೆ ವರ್ತಿಸುತ್ತಿದ್ದಾರೆ. ಆದರೆ ಈ ಎಲ್ಲ ಬೆಳವಣಿಗೆಗಳ ಮಾಹಿತಿ ಅವರಿಗೆ ಇಲ್ಲ ಎಂಬುದನ್ನು ನಂಬಲು ಸಾಧ್ಯವೇ ಇಲ್ಲ.
ಡಾ. ಪರಮೇಶ್ವರ್ ಮನೆಯಲ್ಲಿ ನಡೆಯಬೇಕಿದ್ದ ಭೋಜನಕೂಟದ ಸಭೆ ಏರ್ಪಾಟಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ. ಕಾಂಗ್ರೆಸ್ ಉನ್ನತ ಮೂಲಗಳು ಹೇಳುವ ಪ್ರಕಾರ ಆ ಸಭೆ ರದ್ದಾಗುವ ಸೂಚನೆಗಳೂ ಅವರಿಗೆ ಮೊದಲೇ ಗೊತ್ತಿತ್ತು. ಆದರೆ ಶಿವಕುಮಾರ್ ವಿರುದ್ಧ ಪರಿಶಿಷ್ಟ ಸಚಿವರು, ಶಾಸಕರು ಸಿಡಿದೇಳುವುದು ಅವರಿಗೆ ಬೇಕಾಗಿತ್ತು. ಅಲ್ಲಿಗೆ ಅವರ ಉದ್ದೇಶಕ್ಕೆ ಡಾ. ಪರಮೇಶ್ವರ್ ಅಸ್ತ್ರವಾದರು. ಈ ಸಭೆ ರದ್ದಾಗಿರುವುಕ್ಕೆ ಅಸಮಾಧಾನಗೊಂಡು ಪ್ರತಿಕ್ರಿಯಿಸಿರುವ ಸಚಿವ ರಾಜಣ್ಣ ಶಿವಕುಮಾರ್ ವಿರುದ್ಧ ವೈಯಕ್ತಿಕವಾಗಿಯೂ ದಾಳಿ ಮಾಡಿದ್ದಾರೆ. ಇನ್ನು ಈ ವಿಚಾರದ ಕುರಿತಂತೆ ಅಸಮಾಧಾನದ ಪ್ರತಿಕ್ರಿಯೆ ನೀಡುತ್ತಿರುವ ಮತ್ತೊಬ್ಬ ಸಚಿವ ಡಾ. ಮಹದೇವಪ್ಪ ಕೂಡಾ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರು ಎಂಬುದು ಇಲ್ಲಿ ಗಮನಾರ್ಹವಾದ ಸಂಗತಿ.
ಇನ್ನುಳಿದಂತೆ ಈ ವಿಚಾರದಲ್ಲಿ ಹಿರಿಯ ನಾಯಕ ಹಾಗೂ ಕೆ.ಎಚ್. ಮುನಿಯಪ್ಪ ಸೇರಿದಂತೆ ಇತರ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಒಂದು ಕಡೆ ಸಿದ್ದರಾಮಯ್ಯ ವಿರುದ್ಧ ಮೂಡಾ ಹಗರಣದ ತನಿಖೆ ದಿನೇ ದಿನೇ ಬಿಗಿಯಾಗುತ್ತಿದೆ. ಮತ್ತೊಂದು ಕಡೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡದ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರೇ ಒಬ್ಬೊಬ್ಬರಾಗಿ ಸಿಡಿದೇಳುತ್ತಿದ್ದಾರೆ. ಇದೆಲ್ಲ ಒಂದು ಕಡೆಯಾದರೆ, ತನ್ನ ಸ್ವಭಾವಕ್ಕೆ ವಿರುದ್ಧವಾಗಿ ಅತಿ ಜಾಣ್ಮೆಯಿಂದ ಮತ್ತು ತಾಳ್ಮೆಯಿಂದ ತಮ್ಮ ರಾಜಕೀಯ ನಡೆ ಆರಂಭಿಸಿರುವ ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಬರುವ ಮೇ ತಿಂಗಳಿಗೆ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ತುಂಬುತ್ತದೆ. ಕಾಂಗ್ರೆಸ್ ನಲ್ಲಿ ವರಿಷ್ಠರ ಸಮ್ಮುಖದಲ್ಲಿ ಆಗಿದೆ ಎಂದು ಹೇಳಲಾಗುತ್ತಿರುವ ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಪದವಿಗೆ ಏರಿಸಬೇಕಿದೆ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಅವರು ಯಾವುದೇ ಕಾರಣಕ್ಕೂ ಅಧಿಕಾರ ಬಿಡುವ ಸೂಚನೆಗಳು ಇಲ್ಲ. ಈ ಪರಿಸ್ಥಿತಿ ಮೇ ನಂತರವೂ ಮುಂದುವರಿದರೆ ಕಾಂಗ್ರೆಸ್ ನಲ್ಲಿ ದೊಡ್ಡ ಬಿಕ್ಕಟ್ಟು ಸೃಷ್ಟಿಯಾಗಲಿದ್ದು, ಅದು ಪರಾಕಾಷ್ಠೆಯ ಹಂತಕ್ಕೂ ಹೋಗುವುದರಲ್ಲಿ ಅನುಮಾನವೇ ಇಲ್ಲ.
ಶಾಸಕರ ಸಂಖ್ಯೆಯ ಬಲಾಬಲ ಲೆಕ್ಕ ಹಾಕಿದರೆ ಸದ್ಯಕ್ಕೆ ಅಧಿಕ ಸಂಖ್ಯೆಯ ಶಾಸಕರು ಸಿದ್ದರಾಮಯ್ಯ ಬೆಂಬಲಕ್ಕಿದ್ದಾರೆ. ಆದರೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿದರೆ ಅವರು ತಿರುಗಿ ಬೀಳುವುದು ನಿಶ್ಷಿತ. ಹಾಗಾದಾಗ ಪರಿಸ್ಥಿತಿ ಏನಾಗಲಿದೆ ಎಂಬುದೇ ಸದ್ಯದ ಕುತೂಹಲ. ಈ ಎಲ್ಲದರ ಮಧ್ಯೆ ಇದೇ 13 ರಂದು ಮುಖ್ಯಮಂತ್ರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಈ ಸಭೆಗೆ ವರಿಷ್ಠರಾದ ವೇಣುಗೋಪಾಲ್ ಹಾಗೂ ಸುರ್ಜೇವಾಲ ಆಗಮಿಸಲಿದ್ದು ಭಿನ್ನಮತಕ್ಕೆ ತೇಪೆ ಹಚ್ಚುವ ಪ್ರಯತ್ನ ಮಾಡಲಿದ್ದಾರೆ. ಮತ್ತೊಂದು ಕಡೆ ಈ ತಿಂಗಳ ಮೂರನೇ ವಾರದಲ್ಲಿ ಬೆಳಗಾವಿಯಲ್ಲಿ ಮತ್ತೆ ಕಾಂಗ್ರೆಸ್ ರಾಷ್ಟ್ರೀಯ ಅಧಿವೇಶನ ನಡೆಯುವುದಾಗಿ ಶಿವಕುಮಾರ್ ಘೋಷಿಸಿದ್ದಾರೆ.
ದೆಹಲಿ ವಿಧಾನಸಭೆಗೆ ಸದ್ಯದಲ್ಲೇ ನಡೆಯುವ ಚುನಾವಣೆಯ ಜವಾಬ್ದಾರಿಯನ್ನು ಹೈಕಮಾಂಡ್ ಶಿವಕುಮಾರ್ ಅವರಿಗೆ ನೀಡಿದೆ. ಹೀಗಾಗಿ ಪಕ್ಷದಲ್ಲಿ ಅವರ ಪ್ರಾಮುಖ್ಯತೆ ಹೆಚ್ಚಿದೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ನ್ನೇ ಅವರು ನಂಬಿಕೊಂಡಿದ್ದಾರೆ. ಒಂದು ವೇಳೆ ಕಾಂಗ್ರೆಸ್ ವರಿಷ್ಠರು ಏನಾದರೂ ಅವರ ಬೆಂಬಲಕ್ಕೆ ನಿಂತರೆ ಆಗ ಪಕ್ಷದ ರಾಜ್ಯ ಘಟಕದಲ್ಲಿ ಸನ್ನಿವೇಶಗಳು ಬದಲಾಗಲೂಬಹುದು. ಕಾಂಗ್ರೆಸ್ ಹಿಂದೆ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು, ವೀರೇಂದ್ರ ಪಾಟೀಲ್, ಬಂಗಾರಪ್ಪ ಅವರನ್ನು ಬದಲಾಯಿಸುವ ಸಂದರ್ಭದಲ್ಲೂ ಕಡೇ ಘಳಿಗೆಯ ವರೆಗೂ ಪಕ್ಷದಲ್ಲಿ ಅವರು ಪ್ರಬಲರೇ ಆಗಿದ್ದು ಅಧಿಕ ಶಾಸಕರ ಸಂಖ್ಯಾಬಲ ಅವರೆಲ್ಲರಿಗಿತ್ತು. ಆದರೆ ರಾತ್ರೋರಾತ್ರಿ ಚಿತ್ರಣ ಬದಲಾಗಿ ಅಧಿಕಾರದಿಂದ ಅವರು ನಿರ್ಗಮಿಸಿದ ಉದಾಹರಣೆಗಳೂ ಇವೆ. ಸಿದ್ದರಾಮಯ್ಯ ಬೆಂಬಲಕ್ಕೆ ಇರುವ ಸಚಿವರ ಪೈಕಿ ಡಾ. ಪರಮೇಶ್ವರ್ ಯಾವುದೇ ಕಾರಣಕ್ಕೆ ಕಾಂಗ್ರೆಸ್ ತ್ಯಜಿಸುವುದಿಲ್ಲ. ಇನ್ನುಳಿದವರ ಪೈಕಿ ಡಾ. ಮಹದೇವಪ್ಪ, ಕೆ.ಎನ್. ರಾಜಣ್ಣ ಸೇರಿದಂತೆ ಕೆಲವರು ಸಂದರ್ಭಾನುಸಾರ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳೇ ಹೆಚ್ಚು. ಮಂತ್ರಿಗಿರಿಯ ಅಧಿಕಾರವೇ ಪ್ರಧಾನವಾಗಿರುವ ರಾಜಕಾರಣದಲ್ಲಿ ನಿಷ್ಠೆಗಿಂತ ಅಧಿಕಾರದ ಸ್ಥಾನಕ್ಕೇ ಹೆಚ್ಚು ಮಹತ್ವ ಎನ್ನುವುದು ಜನಜನಿತ.
ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಅಂತರ್ಯುದ್ದ ಶುರುವಾಗಿದೆ. ಮತ್ತೊಂದು ಕಡೆ ಸತೀಶ್ ಜಾರಕಿಹೊಳಿಯವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ಆರಂಭವಾಗಿದೆ. ಅವರ ಬೆಂಬಲಕ್ಕೆ 35 ಶಾಸಕರು ಇದ್ದಾರೆ ಎಂದೂ ಹೇಳಲಾಗುತ್ತಿದೆ.
ಇದೇ ವೇಳೆ ಜಾತ್ಯತೀತ ಜನತಾದಳದಲ್ಲೂ ಶಾಸಕರ ಅತೃಪ್ತಿ ಹೊಗೆಯಾಡಲಾರಂ ಬಿಸಿದೆ. ಚೆನ್ನಪಟ್ಟಣ ಉಪ ಚುನಾವಣೆಯಲ್ಲಿ ಪುತ್ರ ನಿಖಿಲ್ ಸೋಲಿನ ಆಘಾತದಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಚೇತರಿಸಿಕೊಳ್ಳುವ ಮುನ್ನವೇ ಶಾಸಕಾಂಗ ಪಕ್ಷದ ನಾಯಕ ಸುರೇಶಬಾಬು ಕಾರ್ಯ ವೈಖರಿ ವಿರುದ್ಧ ಜೆಡಿಎಸ್ ಶಾಸಕರು ಸಿಡಿದೆದ್ದಿದ್ದಾರೆ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪುತ್ರನನ್ನು ತಂದು ಕೂರಿಸುವ ಪ್ರಯತ್ನಗಳ ಬಗ್ಗೆಯೂ ಅತೃಪ್ತಿ ಹೊಗೆಯಾಡಲಾರಂಭಿಸಿದೆ.
ಪಕ್ಷದ 12 ಕ್ಕೂ ಹೆಚ್ಚು ಶಾಸಕರು ಶಿವಕುಮಾರ್ ಸಂಪರ್ಕದಲ್ಲಿದ್ದಾರೆ ಎಂಬ ಮಾತೂ ಕೇಳಿ ಬರುತ್ತಿದೆ. ಬಹಳಷ್ಟು ಶಾಸಕರಿಗೆ ಕುಮಾರಸ್ವಾಮಿಯವರ ಗೊಂದಲದ ರಾಜಕೀಯ ನಡೆಗಳು ಬೇಸರ, ಆತಂಕ ತಂದಿರುವುದಂತೂ ಸತ್ಯ. ಹೀಗಿರುವಾಗ ಭವಿಷ್ಯದ ರಾಜಕಾರಣದ ಅಸ್ತಿತ್ವದ ಚಿಂತೆಯಲ್ಲಿದ್ದಾರೆ.
ಇನ್ನು ಬಿಜೆಪಿಯಲ್ಲೂ ಪರಿಸ್ಥಿತಿ ನೆಟ್ಟಗಿಲ್ಲ. ಅಲ್ಲೂ ಮೂರು ಗುಂಪುಗಳಾಗಿವೆ. ಭಿನ್ನಮತಕ್ಕೆ ಮದ್ದರೆಯುವ ಕೆಲಸವನ್ನು ವರಿಷ್ಠರೂ ಮಾಡುತ್ತಿಲ್ಲ.ಮೊನ್ನೆ ಮೊನ್ನೆ ವರೆಗೆ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನಿಷ್ಠರಾಗಿದ್ದ ಮಾಜಿ ಮುಖ್ಯಮಂತ್ರಿ , ಸಂಸದ ಬಸವರಾಜ ಬೊಮ್ಮಾಯಿ ಇದೀಗ ತಮ್ಮದೇ ಪ್ರತ್ಯೇಕ ಗುಂಪು ಸ್ಥಾಪಿಸಲು ಹೊರಟಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಮೇಲೆ ಅವರ ಕಣ್ಣಿದೆ. ಇತ್ತೀಚೆಗೆ ಆಯ್ದ ಕೆಲವು ಶಾಸಕರ ಜತೆ ಭೋಜನಕೂಟದ ಸಭೆ ನಡೆಸಿದ್ದು ಇದಕ್ಕೆ ನಿದರ್ಶನ. ಈ ಸಭೆಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಕೂಡಾ ಪಾಲ್ಗೊಂಡಿದ್ದರು.
Advertisement