
ಇದು ಇಬ್ಭಾಗದ ಮುನ್ಸೂಚನೆಯೆ?
ರಾಜ್ಯ ಬಿಜೆಪಿಯಲ್ಲಿ ಕಳೆದ ಕೆಲವು ತಿಂಗಳುಳಿಂದ ತಾರಕಕ್ಕೇರಿರುವ ಗುಂಪುಗಾರಿಕೆ, ಬಹಿರಂಗ ಕಿತ್ತಾಟ, ಪಕ್ಷದ ವರಿಷ್ಠರ ಅಸಹಾಯಕತೆ ಮತ್ತಿತರ ವಿದ್ಯಮಾನಗಳನ್ನು ಗಮನಿಸಿದರೆ ಇಂಥದೊಂದು ಸಾಧ್ಯತೆ ಗೋಚರಿಸುತ್ತದೆ.
ಬಿ.ವೈ. ವಿಜಯೇಂದ್ರ ರಾಜ್ಯ ಘಟಕದ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ್ದರೂ ಪಕ್ಷದಲ್ಲಿ ನಾಯಕರ ನಡುವಿನ ಕಿತ್ತಾಟ ನಿಂತಿಲ್ಲ. ಅಕ್ಷರಶಃ ಬೀದಿಗೆ ಬಂದು ನಿಂತಿದೆ.
ಇಷ್ಟೆಲ್ಲ ವಿದ್ಯಮಾನಗಳು ನಡೆಯುತ್ತಿದ್ದರೂ ದಿಲ್ಲಿ ವರಿಷ್ಠರು ಮೌನವಾಗಿರುವುದು ಹಲವು ಅನುಮಾನಗಳಿಗೂ ಕಾರಣವಾಗಿದೆ. ಈ ಹಿನ್ನಲೆಯಲ್ಲೇ ತಲೆ ಎತ್ತಿರುವ ಪ್ರಶ್ನೆ ಎಂದರೆ ಈಗಿನ ಬಿಕ್ಕಟ್ಟು ಪರಿಹಾರವಾಗಿದ್ದರೆ ಮುಂದಿನ ದಿನಗಳಲ್ಲಿ ಪಕ್ಷ ರಾಜ್ಯ ಮಟ್ಟದಲ್ಲಿ ಇಬ್ಭಾಗದ ಹಾದಿ ಹಿಡಿಯುತ್ತದಾ ಎಂಬುದು. ಒಂದಂತೂ ಸ್ಪಷ್ಟ ರಾಜ್ಯದಲ್ಲಿನ ವಿದ್ಯಮಾನಗಳ ಬಗ್ಗೆ ಬಿಜೆಪಿಯ ದಿಲ್ಲಿ ವರಿಷ್ಠರು ಗೊತ್ತಿದ್ದೂ ಗೊತ್ತಿಲ್ಲದಂತೆ ಇದ್ದಾರೆ. ಸಮಸ್ಯೆ ತನ್ನ ಪಾಡಿಗೆ ತಾನೇ ಬಗೆಹರಿಯಲಿದೆ ಎಂಬ ಭರವಸೆಯಲ್ಲಿ ಅವರು ಇದ್ದಂತೆ ತೋರುತ್ತಿದೆ. ಈಗಿನ ಸನ್ನಿವೇಶದಲ್ಲಿ ಯಾರ ಪರವಾಗಿಯೂ ತೀರ್ಮಾನ ಕೈಗೊಳ್ಳುವುದು ಕಷ್ಟ ಎಂಬ ನಿಲುವಿಗೆ ಬಂದಿರುವ ವರಿಷ್ಠರು ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.
ಮುಂದಿನ ತಿಂಗಳು ಬಿಜೆಪಿ ರಾಜ್ಯ ಮತ್ತು ರಾಷ್ಟ್ರ ಘಟಕದ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಬೇಕಿದ್ದು ಸರ್ವ ಸಮ್ಮತ ಅಧ್ಯಕ್ಷರ ಆಯ್ಕೆಗೆ ತೆರೆಮರೆಯಲ್ಲಿ ನಡೆದಿರುವ ಪ್ರಯತ್ನಗಳು ಫಲ ನೀಡಿಲ್ಲ.
ಬಿಜೆಪಿಯ ಬೆಳವಣಿಗೆಯದ್ದು ಈ ಕತೆಯಾದರೆ, ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುಂಪುಗಳ ನಡುವಣ ಕಿತ್ತಾಟಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಪೂರ್ಣ ತಡೆ ನೀಡುವ ಮೂಲಕ ಪಕ್ಷದ ಬಿಕ್ಕಟ್ಟು ತಾರಕಕ್ಕೆ ಏರದಂಎ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಧಿಕಾರ ಹಂಚಿಕೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಇನ್ನುಳಿದ ವಿಚಾರಗಳ ಬಗ್ಗೆ ಪಕ್ಷದ ಯಾರೇ ಮುಖಂಡರೂ ಯಾವುದೇ ಹೇಳಿಕೆ ನೀಡದಂತೆ ಬಾಯಿ ಮುಚ್ಚಿಕೊಂಡಿರಬೇಕೆಂಬ ಕಟ್ಟು ನಿಟ್ಟಿನ ಎಚ್ಚರಿಕೆಗೆ ವಿವಿಧ ಗುಂಪುಗಳು ತಣ್ಣಗಾಗಿವೆ. ಆದರೆ ಬಿಜೆಪಿಯಲ್ಲಿ ಇಂತಹ ಶಿಸ್ತು ಕಾಣುತ್ತಿಲ್ಲ.
ವಿಜಯೇಂದ್ರ ವಿರುದ್ಧ ಬಹಿರಂಗ ಸಮರ ಸಾರಿರುವ ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ, ಹರೀಶ್ ಮೊದಲಾದವರ ಜತೆಗೆ ಇದೀಗ ಲೋಕಸಭಾ ಸದಸ್ಯ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಪ್ರಮುಖ ಮುಖಂಡರು ಜತೆಯಾಗಿರುವುದು ಪ್ರಮುಖ ಬೆಳವಣಿಗೆ.
ರಾಜ್ಯ ಬಿಜೆಪಿಯಲ್ಲಿ ಇದುವರೆಗೆ ಯತ್ನಾಳ್ ನೇತೃತ್ವದ ಗುಂಪು ಮತ್ತು ವಿಜಯೇಂದ್ರ ಗುಂಪು ಎಂಬ ಎರಡು ಬಣಗಳು ಮಾತ್ರ ಇತ್ತು. ಇನ್ನುಳಿದಂತೆ ಒಂದಷ್ಟು ಶಾಸಕರು ಮತ್ತು ಮುಖಂಡರು ಯಾವುದೇ ಗುಂಪಿನ ಜತೆ ಗುರುತಿಸಿಕೊಳ್ಳದೇ ತಮ್ಮ ಪಾಡಿಗೆ ತಾವೆಂಬಂತೆ ಇದ್ದು ಬೆಳವಣಿಗೆಗಳನ್ನು ದೂರದಿಂದಲೇ ಗಮನಿಸುತ್ತಿದ್ದರು.
ಆದರೆ ಇದೀಗ ಮೂರನೇ ಗುಂಪು ಇದ್ದಕ್ಕಿದ್ದಂತೆ ಬಸವರಾಜಬೊಮ್ಮಾಯಿ ನೇತೃತ್ವದಲ್ಲಿ ಕ್ರಿಯಾಶೀಲವಾಗಿದೆ. ಮೂಲತಃ ಸಂಘ ಪರಿವಾರ ಅಥವಾ ಬಿಜೆಪಿಯ ಹಿನ್ನೆಲೆ ಇಲ್ಲದಿದ್ದರೂ ಬೊಮ್ಮಾಯಿ ಸದ್ಯದ ಪರಿಸ್ಥಿತಿಯಲ್ಲಿ ತಟಸ್ಥ ಗುಂಪಿಗೆ ಆಶಾಕಿರಣವಾಗಿ ಗೋಚರಿಸಿರುವುದರ ಹಿಂದೆ ನಾನಾ ಲೆಕ್ಕಾಚಾರಗಳಿವೆ.
ಈ ಮೊದಲು ಹಿರಿಯ ನಾಯಕ , ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಿಷ್ಠರಾಗಿದ್ದ ಬೊಮ್ಮಾಯಿ ಇದೀಗ ಇದ್ದಕ್ಕಿದಂತೆ ಮುನ್ನೆಲೆಗೆ ಬಂದು ವಿಜಯೇಂದ್ರ ವಿರುದ್ಧ ಕುದಿಯುತ್ತಿರುವ ಅತೃಪ್ತರ ನಾಯಕನಾಗಿ ಮುಂದಾಳತ್ವ ವಹಿಸಿರುವುದನ್ನು ಗಮನಿಸಿದರೆ ಸನ್ನಿವೇಶದ ಲಾಭ ಪಡೆದು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವ ಲೆಕ್ಕಾಚಾರ ಇದೆ ಎಂಬುದು ಬೆಳವಣಿಗೆಗಳ ಒಳಹೊಕ್ಕು ನೋಡಿದರೆ ಗೋಚರವಾಗುವ ಸಂಗತಿ.
ರಾಜ್ಯದಲ್ಲಿ ಬಿಜೆಪಿಗೆ ಲಿಂಗಾಯಿತ ಓಟ್ ಬ್ಯಾಂಕುಗಳೇ ಆಸರೆ. ಸದ್ಯ ಬಿಜೆಪಿ ಅಧ್ಯಕ್ಷರಾಗಿರುವ ವಿಜಯೇಂದ್ರ ಕೂಡಾ ಇದೇ ಸಮುದಾಯಕ್ಕೆ ಸೇರಿದವರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರನಾಗಿರುವ ಕಾರಣಕ್ಕೂ ಅವರಿಗೆ ಪಕ್ಷದಲ್ಲಿ ಪ್ರಾಮುಖ್ಯತೆ ಇದೆ. ಹೀಗಾಗಿ ಈಗ ಅವರ ವಿರುದ್ಧ ಗಟ್ಟಿಯಾಗುತ್ತಿರುವ ಬಂಡಾಯ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪ ಪಡೆದು ಅಧ್ಯಕ್ಷರ ಬದಲಾವಣೆ ಸನ್ನಿವೇಶ ಬಂದರೆ ಲಿಂಗಾಯಿತರ ಅಸಮಾಧಾನ ತಪ್ಪಿಸಲು ಸಹಜವಾಗೇ ಅದೇ ಸಮುದಾಯಕ್ಕೆ ಸೇರಿದ ಬೊಮ್ಮಾಯಿಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ವರಿಷ್ಠರು ಮುಂದಾಗಬಹುದು ಎಂಬುದು ಇನ್ನೊಂದು ಲೆಕ್ಕಾಚಾರ.
ಈ ಕಾರಣದಿಂದಲೇ ಅಶೋಕ್ ಮೊದಲಾದವರು ಅವರ ನೇತೃತ್ವದಲ್ಲಿ ಮೇಲಿಂದಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ. ಬೊಮ್ಮಾಯಿ ಹೆಸರಿಗೆ ರಮೇಶ್ ಜಾರಕಿಜೊಳಿ, ಶ್ರೀರಾಮುಲು ಮೊದಲಾದವರೂ ಸಮ್ಮತಿ ಸೂಚಿಸಬಹುದು ಎಂಬುದು ಒಂದು ನಿರೀಕ್ಷೆ. ಆದರೆ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಬಂಡಾಯ ಎದ್ದಿರುವ ಬಸವನಗೌಡ ಪಾಟೀಲ್ ಯತ್ನಾಳ್ ಈ ಪ್ರಸ್ತಾಪಕ್ಕೆ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ.
ಇಲ್ಲೂ ಸಮಸ್ಯೆ ಇದೆ. ಬಸವರಾಜ ಬೊಮ್ಮಾಯಿ ಸಂಘ ಪರಿವಾರದ ಹಿನ್ನಲೆಯಿಂದ ಬಂದವರಲ್ಲ. ಮೂಲತಃ ಜನತಾಪರಿವಾರಕ್ಕೆ ಸೇರಿದವರು. ಪಕ್ಷದ ನಾಯಕತ್ವಕ್ಕೆ ಅವರು ಎಷ್ಟೇ ನಿಷ್ಠೆ ವ್ಯಕ್ತಪಡಿಸಿದರೂ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಸಂಭವ ತೀರಾ ಕಡಿಮೆ. ಇದುವರೆಗೆ ಸಂಘಪರಿವಾರದ ಹೊರಗಿನವರು ಅಧ್ಯಕ್ಷರಾದ ಉದಾಹರಣೆಗಳು ಇಲ್ಲ.
ಇದಕ್ಕಿಂತ ಹೆಚ್ಚಾಗಿ ವಿಜಯೇಂದ್ರ ಹೊರತುಪಡಿಸಿ ಬೊಮ್ಮಾಯಿ, ಯತ್ನಾಳ್ ಅಥವಾ ಬೇರೆಯವರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲು ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಪ್ಪುವುದು ಸಾಧ್ಯವೇ ಇಲ್ಲದ ಮಾತು. ಅವರ ವಿರೋಧ ಕಟ್ಟಿಕೊಡು ವರಿಷ್ಠರು ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳೂ ಇಲ್ಲ.ಹೀಗಾಗಿ ಬಿಕ್ಕಟ್ಟೂ ಸದ್ಯಕ್ಕೆ ಬಗೆ ಹರಿಯುವ ಲಕ್ಷಣಗಳೂ ಇಲ್ಲ.
ಪಕ್ಷದ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ವಿಚಾರದಲ್ಲಿ ವಿಜಯೇಂದ್ರ ಎಡವುತ್ತಿದ್ದಾರೆ. ಮುಖಂಡರ ನಡುವೆ ಸಮನ್ವಯತೆ ಸಾಧಿಸುತ್ತಿಲ್ಲ. ವಿಧಾನ ಮಂಡಲದ ಒಳಗೆ ಮತ್ತು ಹೊರಗೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟಗಳನ್ನು ರೂಪಿಸುವಲ್ಲಿ ಶಾಸಕಾಂಗ ಪಕ್ಷ ಮತ್ತು ಮತ್ತು ರಾಜ್ಯಾಧ್ಯಕ್ಷರ ನಡುವೆ ಪರಸ್ಪರ ಹೊಂದಾಣಿಕೆಯೇ ಇಲ್ಲ. ಇನ್ನು ಪಕ್ಷದ ಪ್ರಮುಖ ನಿರ್ಣಯಗಳು ಬಿಜೆಪಿ ಕಚೇರಿಯಲ್ಲಿ ಆಗುತ್ತಿಲ್ಲ ಎಲ್ಲವೂ ವಿಜಯೇಂದ್ರ ಅವರ ಮನೆಯಲ್ಲಿ ತೀರ್ಮಾನವಾಗುತ್ತಿದೆ ಎಂಬುದು ಪಕ್ಷದ ಅನೇಕ ಶಾಸಕರು, ಮುಖಂಡರ ದೂರು. ಇದೇ ದೂರನ್ನು ಮೊನ್ನೆ ರಾಜ್ಯಕ್ಕಾಗಮಿಸಿದ್ದ ಪಕ್ಷದ ಉಸ್ತುವಾರಿ ರಾಧಾಮೋಹನ್ ದಾಸ್ ರವರ ಬಳಿಯೂ ಅನೇಕ ಹಿರಿಯ ಶಾಸಕರು ಹೇಳಿದ್ದಾರೆ. ಬಿಜೆಪಿಯಲ್ಲಿ ಇನ್ನೊಂದು ಪ್ರಮುಖ ಬೆಳವಣಿಗೆ ಎಂದರೆ ಹಿರಿಯ ಶಾಸಕ ಸುನಿಲ್ ಕುಮಾರ್ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತನ್ನನ್ನು ಬಿಡುಗಡೆ ಮಾಡುವಂತೆ ಕೋರಿ ವರಿಷ್ಠರಿಗೆ ಪತ್ರ ಬರೆದಿದರುವುದು. ಮೂಲತಃ ಬಜರಂಗದಳದ ಸಂಚಾಲಕರಾಗಿ ಚಿಕ್ಕಮಗಳೂರಿನ ದತ್ತ ಪೀಠ ಸೇರಿದಂತೆ ಹೋರಾಟಗಳ ಮೂಲಕ ನಾಯಕರಾದ ಸುನಿಲ್ ಯಾವತ್ತೂ ಪಕ್ಷದ ಸಿದ್ಧಾಂತಗಳಿಗೆ ನಿಷ್ಠರಾದವರು.
ಹಿಂದುಳಿದ ವರ್ಗಕ್ಕೆ ಸೇರಿದ ಅವರು ರಾಷ್ಟ್ರೀಯ ನಾಯಕರಿಗೆ ಆಪ್ತರಾಗಿದ್ದಾರಷ್ಟೇ ಅಲ್ಲ. ಕರಾವಳಿ ಭಾಗದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದಾರೆ. ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಿಜೆಪಿಯಲ್ಲಿ ಪ್ರಾಮುಖ್ಯತೆ ಇದೆ. ಕೆಲವೊಂದು ನಿರ್ದಿಷ್ಟ ಜವಾಬ್ದಾರಿಗಳನ್ನು ಅವರು ನಿರ್ವಹಿಸಲೇ ಬೇಕಾದುದು ಕಡ್ಡಾಯ. ಇಂತಹ ಹೊಣೆಗಾರಿಕೆಗಳನ್ನು ಅಧ್ಯಕ್ಷರು ಅವರಿಗೆ ವಹಿಸಬೇಕು.
ಆದರೆ ಅಂತಹ ಯಾವುದೇ ಕ್ರಿಯೆಗಳು ನಡೆದಿಲ್ಲ. ಪದಾಧಿಕಾರಿ ಹುದ್ದೆಯಲ್ಲಿ ಯಾವುದೇ ಪ್ರಾಮುಖ್ಯತೆ ಇಲ್ಲದಂತೆ ಸೂತ್ರದ ಗೊಂಬೆಯಂತೆ ಇರುವುದು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ನಿರ್ಗಮಿಸಲು ಬಯಸಿದ್ದಾರೆ. ಬಿಜೆಪಿಗೆ ಇದೂ ನುಂಗಲಾರದ ತುತ್ತು.
ಈ ಎಲ್ಲ ಬೆಳವಣಿಗೆಗಳು ಒಂದು ಕಡೆಯಾದರೆ ಇದೀಗ ಪಕ್ಷದ ಮತ್ತೊಬ್ಬ ಮುಖಂಡ, ಮಾಜಿ ಸಚಿವ ಬಳ್ಳಾರಿಯ ಶ್ರೀರಾಮುಲು ಕೂಡ ವಿಜಯೇಂದ್ರ ವಿರುದ್ಧ ಮುನಿಸಿಕೊಂಡಿದ್ದಾರೆ. ತಮ್ಮ ಬಹುಕಾಲದ ಆಪ್ತ ಮಿತ್ರ ಮಾಜಿ ಸಚಿವ ಜನಾರ್ದನ ರೆಡ್ಡಿ ಜತೆಗಿನ ಭಿನ್ನಾಭಿಪ್ರಾಯ ಇದೀಗ ಬಹಿರಂಗ ಕಿತ್ತಾಟಕ್ಕೆ ತಿರುಗಿದ್ದು ಈ ವಿಚಾರದಲ್ಲಿ ವಿಜಯೇಂದ್ರ ತನ್ನ ನೆರವಿಗೆ ಬರದೇ ರೆಡ್ಡಿ ಪರ ನಿಂತರು ಎಂಬುದು ಅವರ ಆಕ್ರೋಶಕ್ಕೆ ಕಾರಣ. ಪರಿಶಿಷ್ಟ ಪಂಗಡಕ್ಕೆ ಸೇರಿದ ರಾಮುಲು ಬಳ್ಳಾರಿ ಸೇರಿದಂತೆ ಕೆಲವು ಭಾಗಗಳಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿದ್ದಾರೆ. ಜನಾರ್ಧನ ರೆಡ್ಡಿ ಬಿಜೆಪಿ ತ್ಯಜಿಸಿದಾಲೂ ಅವರ ಜತೆ ಹೋಗದೇ ಪಕ್ಷದ ಪರ ನಿಂತರು. ಇದೂಸೇರಿದಂತೆ ಅನೇಕ ವೈಯಕ್ತಿಕ ಮತ್ತು ವ್ಯವಹಾರಿಕ ವಿಚಾರಗಳೂ ಇಬ್ಬರ ನಡುವೆ ಮನಸ್ತಾಪಕ್ಕೆ ಕಾರಣವಾಗಿದೆ. ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ತಾನೂ ಆಕಾಂಕ್ಷಿ ಎಂದು ಅವರು ಘೋಷಿಸಿರುವುದು ಪಕ್ಷದಲ್ಲಿ ತಳಮಳಕ್ಕೆ ಕಾರಣವಾಗಿದೆ.
ರಾಜ್ಯ ಬಿಜೆಪಿಯಲ್ಲಿನ ವಿದ್ಯಮಾಗಳ ಬಗ್ಗೆ ಅರಿತು ಪರಿಹಾರ ಕಂಡು ಹಿಡಿಯಲು ಬಂದಿದ್ದ ಉಸ್ತುವಾರಿ ರಾಧಾಮೋಹನ್ ದಾಸ್ ಇಡೀ ಸಮಸ್ಯೆಯನ್ನು ತಿಳಿದು ಪರಿಹಾರ ಕಲ್ಪಿಸುವ ಬದಲು ಭಿನ್ನಮತೀಯರ ಮಾತನ್ನೇ ಸಮರ್ಪಕವಾಗಿ ಆಲಿಸಲಿಲ್ಲ ಎಂಬುದು ಒಂದು ಗುಂಪಿನ ನಾಯಕರ ದೂರು. ಒಂದು ಹಂತದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ನಿಮ್ಮನ್ನು ಪಕ್ಷ ವಿಧಾನ ಪರಿಷತ್ತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡುವ ಮೂಲಕ ನಿಮ್ಮ ಸೇವೆ ಗುರುತಿಸಿದೆ. ಅದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸೂಕ್ಷ್ಮವಾಗಿ ಎಚ್ಚರಿಸಿದರು ಎಂಬುದು ಪಕ್ಷದ ಮೂಲಗಳಿಂದಲೇ ಬಂದಿರುವ ಮಾಹಿತಿ.
ರಾಜ್ಯ ಬಿಜೆಪಿಯಲ್ಲಿ ಇಷ್ಟೆಲ್ಲ ರಾದ್ಧಾಂತಗಳು ನಡೆಯುತ್ತಿದ್ದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಕ್ಕಟ್ಟನ್ನು ಬಗೆಹರಿಸಲು ಮುಂದಾಗುತ್ತಿಲ್ಲ. ಕೇಂದ್ರ ಬಿಜೆಪಿ ಘಟಕದಲ್ಲೇ ವಿಜಯೇಂದ್ರ ಪರ- ವಿರೋಧ ಎಂಬ ಎರಡು ಗುಂಪುಗಳಾಗಿವೆ. ಹೀಗಾಗಿ ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬರಲು ಆಗುತ್ತಿಲ್ಲ ಎಂಬುದು ಈ ವಿದ್ಯಮಾನಗಳ ಬಗ್ಗೆ ಪ್ರಮುಖ ಮುಖಂಡರೊಬ್ಬರು ನೀಡುವ ವಿವರಣೆ.
ವಿಜಯೇಂದ್ರ ವಿರುದ್ಧ ಸಿಡಿದೆದ್ದಿರುವ ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇತ್ತೀಚೆಗೆ ಹೆಚ್ಚು ಆಪ್ತರಾಗಿದ್ದಾರೆ. ಅವರ ಜತೆಗೆ ಗಣನೀಯ ಸಂಖ್ಯೆಯಲ್ಲಿ ಶಾಸಕರು ಇದ್ದಾರೆ ಎಂದೂ ಹೇಳಲಾಗುತ್ತಿದೆ. ತಮ್ಮ ಬೇಡಿಕೆ ಈಡೇರದಿದ್ದರೆ ಬೆಂಬಲಿಗರೊಂದಿಗೆ ಪಕ್ಷ ತ್ಯಜಿಸುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿವೆ. ಅಂತಹ ಸನ್ನಿವೇಶ ಒದಗಿ ಬಂದರೆ ಯತ್ನಾಳ್ ನಿಲುವೇನು? ಎಂಬುದೇ ಸದ್ಯದ ಪ್ರಶ್ನೆ. ಅವರದ್ದು ಸದ್ಯಕ್ಕೆ ಒಂಟಿ ಹೋರಾಟ.
ಜಾರಕಿಹೊಳಿ ಬಿಟ್ಟರೆ ಜತೆಗಿರುವವರೆಲ್ಲ ಮಾಜಿಗಳು. ಅವರನ್ನು ನಂಬಿ ಕೂರುವಂತಿಲ್ಲ. ಹೈಕಮಾಂಡ್ ಕೂಡಾ ನೆರವಿಗೆ ಬರುವ ಸೂಚನೆಗಳು ಕಾಣುತ್ತಿಲ್ಲ. ಹಾಗಿದ್ದ ಮೇಲೆ ಪಕ್ಷದಲ್ಲಿದ್ದೂ ಕಾಂಗ್ರೆಸ್ ಗೆ ನಿಷ್ಠೆ ವ್ಯಕ್ತಪಡಿಸಿರುವ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ಜತೆ ಬಿಜೆಪಿಯ ಬಂಡೆದ್ದ ಗುಂಪಿನ ಶಾಸಕರೂ ಸೇರುತ್ತಾರಾ.?
ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು.!
Advertisement