
ಬೆಂಗಳೂರು: ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟದ ಬಗ್ಗೆ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದಲ್ಲಿನ ಬಣಗಳು ತಾಳ್ಮೆಯಿಂದ ವರ್ತಿಸಿ, ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಚರ್ಚೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕು ಎಂದರು.
ಪಕ್ಷದ ಹೈಕಮಾಂಡ್ ಶೀಘ್ರದಲ್ಲೇ ಕರ್ನಾಟಕ ಬಿಜೆಪಿಯಲ್ಲಿನ ಬೆಳವಣಿಗೆಗಳತ್ತ ಗಮನ ಹರಿಸಿ, ಎಲ್ಲ ಪ್ರಮುಖ ನಾಯಕರೊಂದಿಗೆ ಚರ್ಚೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.
'ಕಾಂಗ್ರೆಸ್ ಪಕ್ಷದ ದುರಾಡಳಿತದಿಂದಾಗಿ ರಾಜ್ಯದಲ್ಲಿ ಜನರು, ಅದರಲ್ಲೂ ವಿಶೇಷವಾಗಿ ರೈತರು, ಮಹಿಳೆಯರು ಸಂಕಷ್ಟದಲ್ಲಿದ್ದು, ದಿನನಿತ್ಯ ಹಿಂಸಾಚಾರ ಮತ್ತು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇದರ ವಿರುದ್ಧ ಸಮರ ಸಾರಬೇಕಿದ್ದ ವಿರೋಧ ಪಕ್ಷ ಬಿಜೆಪಿ ಆಂತರಿಕ ಕಚ್ಚಾಟದಲ್ಲಿ ತೊಡಗಿರುವುದು ದುರದೃಷ್ಟಕರ' ಎಂದು ಬೊಮ್ಮಾಯಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನನ್ನಾಗಿ ಬಿವೈ ವಿಜಯೇಂದ್ರ ಅವರನ್ನು 2023ರ ನವೆಂಬರ್‌ನಲ್ಲಿ ನೇಮಿಸಲಾಯಿತು. ವಿಜಯೇಂದ್ರ ಅವರನ್ನು ಬದಲಿಸಬೇಕೆಂದು ಬಿಜೆಪಿ ನಾಯಕರ ಗುಂಪೊಂದು ಸಾರ್ವಜನಿಕವಾಗಿಯೇ ಒತ್ತಾಯಿಸುತ್ತಿದ್ದು, ಪರ - ವಿರೋಧದ ಬಣಗಳಾಗಿ ಬದಲಾಗಿವೆ. ವಿಜಯೇಂದ್ರ ಅವರಿಗೆ ಪಕ್ಷದೊಳಗಿನ ಅಸಮಾಧಾನವನ್ನು ತಣಿಸಿ, ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪಕ್ಷವು ರಾಷ್ಟ್ರದಾದ್ಯಂತ ದಕ್ಷ ಆಡಳಿತವನ್ನು ನೀಡುತ್ತಿದೆ. ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮವಾಗಿದ್ದು, ಗುಂಪುಗಾರಿಕೆಯಲ್ಲಿ ನನಗೆ ನಂಬಿಕೆ ಇಲ್ಲ. ಹೀಗಾಗಿ, ನಾನು ಯಾವುದೇ ಒಂದು ಗುಂಪಿನ ಸಭೆ ಕರೆಯುವ ಪ್ರಶ್ನೆ ಉದ್ಭವಿಸುವುದಿಲ್ಲ. ಎಲ್ಲರನ್ನು ಒಟ್ಟಿಗೆ ಸೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವ ಹಲವು ನಾಯಕರಲ್ಲಿ ನಾನು ಒಬ್ಬ ಎಂದು ಅವರು ಹೇಳಿದರು.
ಸದ್ಯ ದೆಹಲಿಯಲ್ಲಿರುವ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಮತ್ತು ಇತರ ನಾಯಕರು ಮಂಗಳವಾರ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂಬ ವರದಿಗಳ ನಂತರ ಈ ಸ್ಪಷ್ಟನೆ ಬಂದಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಇತರ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಎರಡೂ ಕಡೆಯ ಸದಸ್ಯರು ತಾಳ್ಮೆಯಿಂದ ವರ್ತಿಸಬೇಕು ಮತ್ತು ಚರ್ಚೆಯ ಮೂಲಕ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬೇಕು. ಇದು ಸಾಧ್ಯವಾಗದಿದ್ದರೆ, ಅವರೆಲ್ಲರೂ ಕೇಂದ್ರ ನಾಯಕತ್ವದ ನಿರ್ಧಾರಕ್ಕೆ ಬದ್ಧರಾಗಿರಬೇಕು' ಎಂದು ಹೇಳಿದರು.
Advertisement