
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಸೋಮವಾರ ಮತ್ತೆ ನೋಟಿಸ್ ನೀಡಿದೆ ಎಂದು ವರದಿಯಾಗಿದೆ.
ನೋಟಿಸ್ ಗೆ 72 ಗಂಟೆಗಳಲ್ಲೇ ಉತ್ತರಿಸುವಂತೆ ಯತ್ನಾಳ್ ಅವರಿಗೆ ಬಿಜೆಪಿ ಹೈಕಮಾಂಡ್ ಸೂಚಿಸಿದ್ದು, ಒಂದು ವೇಳೆ ನಿಗದಿತ ಸಮಯದಲ್ಲಿ ಉತ್ತರ ನೀಡದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ ಎನ್ನಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಯತ್ನಾಳ್, ನನಗೆ ಅಧಿಕೃತವಾಗಿ ಯಾವುದೇ ನೋಟೀಸು ಬಂದಿರುವುದಿಲ್ಲ. ನೋಟೀಸು ಬಂದಮೇಲೆ ಕೆಲವ್ಯಕ್ತಿಗಳ ಏಕಸ್ವಾಮ್ಯತೆ, ಏಕಪಕ್ಷೀಯ ನಿರ್ಧಾರಗಳು, ಉತ್ತರ ಕರ್ನಾಟಕದ ಕಡೆಗಣನೆ, ಕುಟುಂಬ ರಾಜಕಾರಣ, ಕಾಂಗ್ರೆಸ್ ಪಕ್ಷದ ವೈಫಲ್ಯಗಳನ್ನು ರಾಜ್ಯದ ಜನತೆಗೆ ವಿವರಿಸಲು ವಿಫಲವಾಗಿರುವ ಪಕ್ಷದ ಧೋರಣೆ, ಹೊಂದಾಣಿಕೆ ರಾಜಕೀಯ ಸೇರಿದಂತೆ ಸ್ವಜನಪಕ್ಷಪಾತದ ಬಗ್ಗೆ ವಿವರವಾಗಿ ಲಿಖಿತ ರೂಪದಲ್ಲಿ ಉತ್ತರ ನೀಡುತ್ತೇನೆ ಎಂದಿದ್ದಾರೆ.
ಈ ಹಿಂದೆಯೂ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿತ್ತು ಮತ್ತೆ ಅವರು ಉತ್ತರ ಸಹ ನೀಡಿದ್ದರು. ಆದರೆ ವಿಜಯೇಂದ್ರ ವಿರುದ್ಧ ನಿರಂತವಾಗಿ ಹೇಳಿಕೆ ನೀಡುವುದನ್ನು ಮಾತ್ರ ನಿಲ್ಲಿಸಿಲ್ಲ. ಹೀಗಾಗಿ ಇಂದು ಮತ್ತೊಮ್ಮೆ ಯತ್ನಾಳ್ ಅವರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಲಾಗಿದೆ.
ದೆಹಲಿಯಲ್ಲಿದ್ದ ಯತ್ನಾಳ್ ಅವರು ಈಗ ಹೈದರಾಬಾದ್ ನತ್ತ ಪ್ರಯಾಣ ಬೆಳಸಿದ್ದು, ಬಿಜೆಪಿ ಶಿಸ್ತು ಸಮಿತಿ ನೀಡಿದ ನೋಟಿಸ್ ಇನ್ನೂ ಅವರ ಕೈಸೇರಿಲ್ಲ ಎಂದು ತಿಳಿದುಬಂದಿದೆ
Advertisement