
ಬೆಂಗಳೂರು/ಮೈಸೂರು: ಮೈಸೂರಿನ ಉದಯಗಿರಿಯಲ್ಲ ನಡೆದ ಗಲಭೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ತುಷ್ಟೀಕರಣ ರಾಜಕೀಯ ಕಾರಣ ಎಂದು ಬಿಜೆಪಿ ಆರೋಪಿಸಿದೆ.
ಮಂಗಳವಾರ ಮಧ್ಯಾಹ್ನ ಪೊಲೀಸ್ ಠಾಣೆಗೆ ಭೇಟಿ ನೀಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದ ನಂತರವೂ ಹಿಂಸಾಚಾರ ನಡೆಸಿದ ಗುಂಪನ್ನು ಖಂಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸ್ಥಿತಿ ಸ್ವಲ್ಪ ಹೆಚ್ಚಿದ್ದರೂ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತಿದ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದಂತಾಗಿದೆ. ಇದು ಹುಬ್ಬಳ್ಳಿಯ ಕಲ್ಲು ತೂರಾಟದ ಘಟನೆಯಂತೆಯೇ ಇದೆ. ಐದಾರು ಚೀಲಗಳಲ್ಲಿ ಕಲ್ಲು ತುಂಬಿಕೊಂಡು ತಂದು ಠಾಣೆ ಮೇಲೆ ದಾಳಿ ಮಾಡಿದ್ದಾರೆ. ಈ ದಾಂಧಲೆಯಲ್ಲಿ ಪೊಲೀಸ್ ಅಧಿಕಾರಿ ಸೇರಿ ಹಲವಾರು ಪೊಲೀಸರಿಗೆ ಗಾಯಗಳಾಗಿವೆ. ಅಷ್ಟೇ ಅಲ್ಲ, ಪೊಲೀಸರ ವಾಹನಗಳನ್ನು ಜಖಂಗೊಳಿಸಿದ್ದಾರೆ. ಅಕ್ಕಪಕ್ಕದ ಹಿಂದುಗಳಿಗೆ ಬೆದರಿಕೆ ಹಾಕಿದ್ದಾರೆ. ಇದೊಂದು ವ್ಯವಸ್ಥಿತ ಅಪರಾಧ ಕೃತ್ಯದಂತಿದ್ದು, ರಾಜ್ಯ ಸರ್ಕಾರದ ಅಸಹಾಯತೆಯನ್ನು ಮತಾಂಧರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ ಫೋರಮ್ ಫಾರ್ ಡಿಗ್ನಿಟಿ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹ ಕೆಲವು ಸಂಘಟನೆಗಳು ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬ ಮಾಹಿತಿ ನಮಗೆ ಬಂದಿದೆ. ಕೇರಳದ ಈ ಸಂಘಟನೆಯ ಸದಸ್ಯರು ಕರ್ನಾಟಕದಲ್ಲಿ ಕೊಲೆ, ಅಪಹರಣ ಮತ್ತು ಇತರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ನಮಗಿದೆ,
ಕಾಂಗ್ರೆಸ್ ಸರ್ಕಾರದ ಓಲೈಕೆ, ಮುಸ್ಲಿಮರ ತುಷ್ಟೀಕರಣವು ಮತಾಂಧ ದುರ್ಷರ್ಮಿಗಳಿಗೆ ಸುರಕ್ಷತೆಯ ಅಭಯ ನೀಡಿದಂತಿದ್ದು, ಸಾಮಾನ್ಯ ಮುಸ್ಲಿಮರು ಕೂಡ ಬೇಸತ್ತುಕೊಳ್ಳುವಂತಾಗಿದೆ. ಸಾಂಸ್ಕೃತಿಕ, ಶಾಂತಿಪ್ರಿಯರ ನಗರದಲ್ಲಿ ಮತಾಂಧರ ಅಟ್ಟಹಾಸ ಮೆರೆದಿದ್ದು, ಘಾತುಕರು ಎಲ್ಲೇ ಇದ್ದರೂ ಹುಡುಕಿ ಬಂಧಿಸಿ ಕಾನೂನು ಪ್ರಕಾರ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಸರ್ಕಾರ ಸತ್ತು ಹೋಗಿದೆ ಎಂದು ಜನರು ಭಾವಿಸುವಂತಾಗುತ್ತದೆ ಎಂದು ಕಿಡಿಕಾರಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರು ಮಾತನಾಡಿ, ಮೈಸೂರು ಘಟನೆಯು ಮಂಗಳೂರು, ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಹುಬ್ಬಳ್ಳಿಯಲ್ಲಿ ನಡೆದ ಘಟನೆಗಳಂತೆಯೇ ಇದೆ ಎಂದು ಹೇಳಿದರು.
ನಾವು ಅಧಿಕಾರದಲ್ಲಿದ್ದಾಗ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಂಡಿದ್ದೆವು. ಆದರೆ ಕಾಂಗ್ರೆಸ್ ಸರ್ಕಾರ ಅವರ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಂಡಿತು. ಪೊಲೀಸರ ಮೇಲೆ ದಾಳಿ ಮಾಡಲು ಇವರಿಗೆ ಧೈರ್ಯ ಹೇಗೆ ಬಂತು? ಅವರ ಹಿಂದೆ ರಾಜಕಾರಣಿಗಳಿದ್ದಾರೆಯೇ? ಎಂದು ಪ್ರಶ್ನಿಸಿದರು.
ಸರ್ಕಾರ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ. ಇಂತಹ ಘಟನೆಗಳಿಗೆ ತುಷ್ಟೀಕರಣ ರಾಜಕೀಯ ಕಾರಣ ಎಂದು ದೂಷಿಸಿದರು.
ಮೈಸೂರಿನ ಉದಯಗಿರಿಯಲ್ಲಿ ನಡೆದಿರುವ ಪುಂಡರ ಗುಂಪಿನ ಅಟ್ಟಹಾಸ ಕಾನೂನು ಸುವ್ಯವಸ್ಥೆಯನ್ನೇ ಮೂಲೋತ್ಪಾಟನೆ ಮಾಡುವ ವಿದ್ವಾಂಸಕ ಶಕ್ತಿಗಳ ಪ್ರದರ್ಶನವಾಗಿದೆ. ಅಲ್ಪಸಂಖ್ಯಾತರ ಓಲೈಕೆ ಕಾಂಗ್ರೆಸ್ ಸರ್ಕಾರದ ಆದ್ಯತೆ ಎಂಬಂತೆ ನಡೆದುಕೊಳ್ಳುತ್ತಿರುವ ಸರ್ಕಾರದ ಧೋರಣೆ ಮತೀಯವಾದಿ ಪುಂಡ ಪೋಕರಿಗಳಿಗೆ ರಹದಾರಿ ಕೊಟ್ಟಂತಾಗಿದೆ. ಕೋಮುವಾದಿ ರಕ್ಕಸ ವರ್ತನೆಯನ್ನು ಸಮರ್ಥಿಸುವ ರೀತಿಯಲ್ಲಿ ಮಾತನಾಡಿರುವ ಸಚಿವ ರಾಜಣ್ಣ ಅವರು ಪೊಲೀಸರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಪರಿಯಲ್ಲಿ ಘಟನೆಯನ್ನು ವ್ಯಾಖ್ಯಾನಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಎನ್ ಆರ್ ಕ್ಷೇತ್ರದ ಉದಯಗಿರಿ ಠಾಣಾ ವ್ಯಾಪ್ತಿ ಹಿಂದಿನಿಂದಲೂ ಮುಸ್ಲಿಂ ಸಮುದಾಯದ ಬಾಹುಳ್ಯದಲ್ಲಿದ್ದು ನಿರಂತರವಾಗಿ ಮತೀಯ ದುಷ್ಕರ್ಮಿಗಳು ಕ್ರೌರ್ಯ ಮೆರೆಯುತ್ತಿದ್ದಾರೆ,ಪೊಲೀಸರ ಮೇಲೆ ಹಲ್ಲೆ ನಡೆಸುವಷ್ಟು ಬಲಿಷ್ಠರಾಗಿದ್ದಾರೆ. ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳು ಈ ವ್ಯಾಪ್ತಿಯಲ್ಲಿ ಈ ಹಿಂದೆಯೂ ನಡೆದಿದೆ. ಇಷ್ಟಾಗಿಯೂ ಈ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸುವ ಯಾವ ಕ್ರಮವನ್ನೂ ಕಾಂಗ್ರೆಸ್ ಸರ್ಕಾರ ಕೈಗೊಂಡಿಲ್ಲ, ಬದಲಾಗಿ ಈ ಪ್ರದೇಶವನ್ನು ವಿಧ್ವಂಸಕ ಚಟುವಟಿಕೆಯ ತಾಣವಾಗಿ ಪೋಷಿಸುತ್ತಿದೆ ಅದರ ಪರಿಣಾಮವಾಗಿಯೇ ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ಕಿಡೆಗೇಡಿಗಳೆಲ್ಲ ಒಟ್ಟುಗೂಡಿ ದಂಗೆ ಎದ್ದು ಪೊಲೀಸರಿಗೆ ಸವಾಲೆಸೆದಿದ್ದರೆ,
ಈ ಕೂಡಲೇ ಕಾಂಗ್ರೆಸ್ ಸರ್ಕಾರ ಕೋಮು ಪಕ್ಷಪಾತದ ಧೋರಣೆಯನ್ನು ಬದಿಗಿಟ್ಟು ಸಮಾಜಘಾತುಕ ದುಷ್ಟರ ವಿರುದ್ಧ ಕಠಿಣ ಕ್ರಮ ಜರುಗಿಸದಿದ್ದರೆ ಶಾಂತಿ-ಸುವ್ಯವಸ್ಥೆಗೆ ಹೆಸರಾದ ಮೈಸೂರು ಕೋಮು ದಳ್ಳುರಿಗೆ ಸಿಲುಕುವ ಅಪಾಯಕ್ಕೆ ತಲುಪಿದರೆ ಕಾಂಗ್ರೆಸ್ ಸರ್ಕಾರವೇ ಅದರ ಹೊಣೆ ಹೊರಬೇಕಾದೀತು? ಎಂದು ಎಚ್ಚರಿಸಿದ್ದಾರೆ.
Advertisement