
ಮೈಸೂರು: ಉದಯಗಿರಿ ಪೊಲೀಸ್ ಠಾಣೆ ಮೇಲಿನ ದಾಳಿಯನ್ನು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತೀವ್ರವಾಗಿ ಖಂಡಿಸಿದ್ದು, ರಾಜ್ಯಾದ್ಯಂತ ಹೆಚ್ಚುತ್ತಿರುವ ಹಿಂಸಾಚಾರ, ಕೊಲೆ ಮತ್ತು ಕುಲ್ಲು ತೂರಾಟ ಘಟನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನಿನ್ನೆ ನಮ್ಮ ಮೈಸೂರಿನ ಉದಯಗಿರಿ ಪೋಲಿಸ್ ಸ್ಟೇಷನ್ ಮೇಲೆ ಮತ್ತು ಪೊಲೀಸರ ಮೇಲೆ ನಡೆದ ಹಲ್ಲೆ,ಡಿ.ಸಿ.ಪಿ ಯವರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿರುವುದು ಖಂಡನೀಯ. ರಾಜ್ಯದಲ್ಲಿ ಪ್ರತಿನಿತ್ಯ ಹಿಂಸಾಚಾರˌ ಕೊಲೆˌ ಕಲ್ಲು ತೂರಾಟಗಳಂತಹ ಕೃತ್ಯಗಳು ಸಾಲುಸಾಲಾಗಿ ನಡೆಯುತ್ತಿವೆ. ಶಾಂತಿˌ ಸಮೃದ್ದಿˌ ಸಂಸ್ಕೃತಿಗೆ ಇಡಿ ವಿಶ್ವಕ್ಕೆ ಮಾದರಿಯಾಗಿರುವ ಮೈಸೂರಿನಲ್ಲಿ ಈ ರೀತಿಯ ಗಲಾಟೆಗಳು ನಡೆಯುವುದು ಮತ್ತು ಅದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗುವುದು ಈ ನಾಡಿಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿ ನಿಂತಿದ್ದರೂˌ ರಾಜ್ಯ ಸರ್ಕಾರ ಮಾತ್ರ ಈ ಕುರಿತಾಗಿ ಯಾವುದೇ ಕಠೀಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬುದು ವಿಷಾದನೀಯ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಇಂತಹ ಗಲಭೆ ನಡೆದಿರುವುದು ದುರದೃಷ್ಟಕರ ಸಂಗತಿ. ಕೂಡಲೇ ತಪ್ಪಿತಸ್ಥರನ್ನು ಹುಡುಕಿ ಅವರ ವಿರುದ್ಧ ಕಠಿಣ ಕಾನೂನೂ ಕ್ರಮ ಜರುಗಿಸಬೇಕೆಂದು. ಈ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ನಾನು ಒತ್ತಾಯಿಸುತ್ತೇನೆಂದು ತಿಳಿಸಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ ಸಚಿವ ರಾಜಣ್ಣ ವಿರುದ್ಧವೂ ಯದುವೀರ್ ಅವರು ಕಿಡಿಕಾರಿದ್ದಾರೆ. ಕೆ.ಎನ್. ರಾಜಣ್ಣ ಅವರಂತಹ ಹಿರಿಯ ಸಚಿವರಾದವರು ಪರಿಸ್ಥಿತಿಯ ಗಂಭೀರತೆಯನ್ನು ಪರಿಹರಿಸುವ ಬದಲು ಸ್ಥಳೀಯ ಪೊಲೀಸರ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ, ಅವರು ಪೊಲೀಸ್ ಪಡೆಯ ಆತ್ಮಸ್ಥೈರ್ಯವನ್ನು ಕುಗ್ಗಿಸುವುದಲ್ಲದೆ, ಗಲಭೆಕೋರರ ತಪ್ಪನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ಒಂದು ನಿರ್ದಿಷ್ಟ ಸಮುದಾಯವನ್ನು ಸಮಾಧಾನಪಡಿಸುವ ಪ್ರಯತ್ನದಂತೆ ಕಾಣುತ್ತದೆ.
ಕಾನೂನಿನ ಮುಂದೆ ಎಲ್ಲರೂ ಒಂದೇ ಸಮಾಜದಲ್ಲಿ ಸಮಾನತೆಯನ್ನು ಕಾಯಬೇಕೆ ಹೊರತು ಕಾನೂನು ಜಾರಿ ಸಂಸ್ಥೆಯ ನೈತಿಕತೆಯನ್ನು ದುರ್ಬಲಗೊಳಿಸುವ ಮತ್ತು ಹಿಂಸಾಚಾರವನ್ನು ಸಮರ್ಥಿಸಿಕೊಳ್ಳುವಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿˌ ರಾಜ್ಯದ ಸುಸ್ಥಿರತೆಯನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರ ಗಂಭೀರತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
Advertisement