
ಬೆಂಗಳೂರು: ನನಗೂ ಫ್ರೀ, ನಿನಗೂ ಫ್ರೀ, ಎಲ್ಲರಿಗೂ ಫ್ರೀ. ಫ್ರೀ..ಫ್ರೀ...ಎಂಬ ಕಪಟ ನಾಟಕವಾಡಿ, ಹತ್ತು ಕೆಜಿ.. ಹತ್ತು ಕೆಜಿ... ಅಕ್ಕಿ ಫ್ರೀ.. ಕಟಾಕಟ್.. ಕಟಾಕಟ್.. ಎಂಬಂತೆ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ನಂತರ ತಮ್ಮ ವರಸೆ ಬದಲಿಸಿ, ಇಲ್ಲಸಲ್ಲದ ಷರತ್ತುಗಳನ್ನು ಹಾಕಿ ಗ್ಯಾರಂಟಿ ಯೋಜನೆಯಿಂದ ಹಲವರನ್ನು ಹೊರಗಿಟ್ಟು ಮೋಸ ಮಾಡಿತ್ತು. ಪ್ರಸ್ತುತ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ, ದಿನನಿತ್ಯ ಬೆಲೆ ಏರಿಕೆ ಮತ್ತು ಶಾಕ್ ನೀಡುವುದರಲ್ಲಿ ಮಾತ್ರ ಕಾರ್ಯ ಕಾರ್ಯನಿರತವಾಗಿದೆ ಎಂದು ಸರ್ಕಾರದ ವಿರುದ್ಧ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರು ಚುನಾವಣೆ ಪೂರ್ವ ಉಚಿತ, ಖಚಿತ, ನಿಶ್ಚಿತ, ಎಂದು ಹೇಳಿದ್ದರು. ನನಗೂ ಫ್ರೀ, ನಿನಗೂ ಫ್ರೀ, ಎಲ್ಲರಿಗೂ ಫ್ರೀ. ಫ್ರೀ.. ಫ್ರೀ...ಎಂಬ ಕಪಟ ನಾಟಕವಾಡಿ, ಹತ್ತು ಕೆಜಿ.. ಹತ್ತು ಕೆಜಿ... ಅಕ್ಕಿ ಫ್ರೀ.. ಕಟಾಕಟ್.. ಕಟಾಕಟ್..! ಎಂಬಂತೆ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿದ್ದರು. ಬಳಿಕ ತಮ್ಮ ವರಸೆ ಬದಲಿಸಿ, ಇಲ್ಲಸಲ್ಲದ ಷರತ್ತುಗಳನ್ನು ಹಾಕಿ ಗ್ಯಾರಂಟಿ ಯೋಜನೆಯಿಂದ ಹಲವರನ್ನು ಹೊರಗಿಟ್ಟು ಮೋಸ ಮಾಡಿದ್ದರು.
ಪ್ರಸ್ತುತ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ, ದಿನನಿತ್ಯ ಬೆಲೆ ಏರಿಕೆ ಮತ್ತು ಶಾಕ್ ನೀಡುವುದರಲ್ಲಿ ಮಾತ್ರ ಕಾರ್ಯನಿರತವಾಗಿರುವ ಈ ಸರ್ಕಾರ, ಗೃಹಲಕ್ಷಿ ಹಣಕ್ಕೂ ಕೊಕ್ಕೆ ಹಾಕಿದೆ ಹಾಗೂ ಕೇಂದ್ರ ಸರ್ಕಾರ ಪ್ರತಿ ಕೆಜಿ ಅಕ್ಕಿಯನ್ನು 22.50 ರೂ.ಗೆ ಕೊಡುತ್ತಿದ್ದರೂ, ಅದನ್ನು ಖರೀದಿ ಮಾಡಿ ಜನರಿಗೆ ವಿತರಿಸದೆ ಮೋಸ ಮಾಡುತ್ತಿದೆ. ಕಳೆದ 5-6 ತಿಂಗಳಿನಿಂದ ಅನ್ನಭಾಗ್ಯದ ಫಲಾನುಭವಿಗಳಿಗೆ ಹೆಚ್ಚುವರಿ ಅಕ್ಕಿಯೂ ಇಲ್ಲ, ಹಣವೂ ಇಲ್ಲ ಎಂಬ ಸನ್ನಿವೇಶ ನಿರ್ಮಾಣ ಮಾಡಿ, ಜನರಿಂದ ವಚನಭ್ರಷ್ಟ ಸರ್ಕಾರ ಎಂಬ ಕುಖ್ಯಾತಿ ಪಡೆದಿದೆ. ಇದು "ಮೋಸದ ಗ್ಯಾರಂಟಿ" ನೀಡುವ ಕಾಂಗ್ರೆಸ್ ಸರ್ಕಾರ. ಜನರು ಇದಕ್ಕೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ ಎಂದು ಹೇಳಿದ್ದಾರೆ.
ಸರ್ಕಾರ ಖಾತರಿ ಯೋಜನೆಗಳಿಗಾಗಿ ಬಜೆಟ್‌ನಲ್ಲಿ 52,000 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ, ಆದರೆ ಜನರಿಗೆ ಮಾತ್ರ ಯೋಜನೆಯ ಲಾಭ ಸಿಗುತ್ತಿಲ್ಲ. ಈ ಹಣ ಎಲ್ಲಿಗೆ ಹೋಗುತ್ತಿದೆ? ಜನರು ಪ್ರತಿ ತಿಂಗಳು ಅದನ್ನು ಏಕೆ ಪಡೆಯುತ್ತಿಲ್ಲ? ಎಂದು ಪ್ರಶ್ನಿಸಿದರು.
ಕೇಂದ್ರ ಸರಕಾರ ಅಕ್ಕಿ ಕೊಡಲು ತಯಾರಿದ್ದರೂ ರಾಜ್ಯ ಸರಕಾರ ಖರೀದಿಸುತ್ತಿಲ್ಲ. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ಹಣವೂ ತಲುಪುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಯ ಹಣವೂ ಸಿಕ್ಕಿಲ್ಲ. ಯುವನಿಧಿ ಮರೀಚಿಕೆ ಆಗಿದೆ. ಯಾವುದೂ ಸಕಾಲಕ್ಕೆ ಸಿಗದಂತಾಗಿದೆ.
ಇತಿಮಿತಿ ನೋಡಿಕೊಂಡು ಗ್ಯಾರಂಟಿ ಕೊಡುವ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳುತ್ತಾರೆ. ಉಚಿತ ಯೋಜನೆಗಳನ್ನು ಕೊಟ್ಟುಕೊಂಡೇ ಇರಬೇಕೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸುತ್ತಾರೆ. ಉಚಿತ ಯೋಜನೆಗಳಿಂದ ಜನರು ಸೋಮಾರಿಗಳಾಗುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರು ಹೇಳುತ್ತಾರೆ. ಗ್ಯಾರಂಟಿ ಬಿಡಿ, ಅಭಿವೃದ್ಧಿ ಕಡೆ ಗಮನ ಕೊಡಿ ಎಂದು ಕಾಂಗ್ರೆಸ್‌ನ ಅನೇಕ ಮುಖಂಡರು ಹೇಳುತ್ತಿದ್ದಾರೆ. ಒಟ್ಟಾರೆ ಗ್ಯಾರಂಟಿ ಯೋಜನೆಗಳನ್ನು ಕೊಡಬೇಕೇ ಬೇಡವೇ ಎಂಬ ಚರ್ಚೆ ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿದೆ ಎಂದರು.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಗಳಡಿ ದಲಿತರಿಗಾಗಿ ಮೀಸಲಿಟ್ಟಿದ್ದ ಅನುದಾನವನ್ನೂ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವ ಮೂಲಕ 25 ಸಾವಿರ ಕೊಟಿ ರೂ.ಗಳನ್ನು ನುಂಗಲಾಗಿದೆ. ನೀವು ಕೊಡುವ ಗ್ಯಾರಂಟಿಗಳಿಗೆ ನಿಮ್ಮ ನಾಯಕರ ಸಹಮತವೇ ಇಲ್ಲ ಎಂದಾದರೆ ನಿಮ್ಮದು ಎಂಥಾ ಗ್ಯಾರಂಟಿ? ಪಡಿತರ ಸಾಮಗ್ರಿ ಸೋರಿಕೆ ಆಗುತ್ತಿದೆ. ನಿಮ್ಮ ಗ್ಯಾರಂಟಿಗಳಿಗೇ ಗ್ಯಾರಂಟಿ ಇಲ್ಲದಂತಾಗಿದೆ ಎಂದು ಹರಿಹಾಯ್ದರು. ಇದೇ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಲೋಪಗಳನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಕ ಅವರಿಗೆ ಒತ್ತಾಯಿಸಿದರು.
Advertisement