
ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷದ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದ್ದರೂ, ಬಿಜೆಪಿಯಲ್ಲಿ ಬಣ ರಾಜಕೀಯ ಇನ್ನೂ ನಿಂತಿಲ್ಲ. ಯತ್ನಾಳ್ ನೇತೃತ್ವದ ಬಂಡಾಯ ನಾಯಕರು ಗುರುವಾರ ಸಭೆ ನಡೆಸಿದ್ದು, ಸಡ್ಡು ಹೊಡೆದಿದ್ದಾರೆ.
ಈ ಮೂಲಕ ನೋಟಿಸ್ ನೀಡಿದರೂ ವಿಜಯೇಂದ್ರ ಬದಲಾವಣೆ ಮಾಡಬೇಕೆಂಬ ತಮ್ಮ ಪಟ್ಟನ್ನು ಬಿಡುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಸದಾಶಿವನಗರದಲ್ಲಿನ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಬಂಡಾಯ ನಾಯಕರೆಲ್ಲ ಸಭೆ ನಡೆಸಿದರು. ಈ ವೇಳೆ ಪಕ್ಷದ ವರಿಷ್ಠರು ಜಾರಿಗೊಳಿಸಿರುವ ನೋಟಿಸ್ ಕುರಿತಂತೆಯೂ ಚರ್ಚೆಗಳಾಗಿವೆ ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್ ಅವರು, ವಿಜಯೇಂದ್ರ ಅವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಹೈಕಮಾಂಡ್ ನನಗೆ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ, ಉತ್ತರ ಕೊಟ್ಟಿದ್ದೇನೆ ಎಂಬುದು ವಿಜಯೇಂದ್ರಗೆ ಹೇಗೆ ಗೊತ್ತು?, ಅವರು ಏನೆಲ್ಲಾ ಮ್ಯಾನೇಜ್ ಮಾಡುತ್ತಿದ್ದಾರೆಂದು ನನಗೆ ಗೊತ್ತು. ಇದೆಲ್ಲ ನಕಲಿ ನಾಟಕಗಳು, ನಾವು ಬಡ ರಾಜಕಾರಣಿಗಳು, ವಿಜಯೇಂದ್ರ ತರ ಅಲ್ಲ ಎಂದು ಹೇಳಿದರು.
ಶೋಕಾಸ್ ನೋಟಿಸ್ ಪತ್ರವನ್ನು ಮಾಧ್ಯಮಗಳಿಗೆ ಕೊಟ್ಟಿರುವುದು ವಿಜಯೇಂದ್ರ. ನಾನು ಉತ್ತರ ಕೊಟ್ಟಿದ್ದೇನಾ, ಬಿಟ್ಟಿದ್ದಿನಾ ಎಂಬುದನ್ನು ವಿಜಯೇಂದ್ರ ಬಳಿಯೇ ಕೇಳಿ ಎಂದು ತಿಳಿಸಿದರು.
ನನಗೆ ಇಮೇಲ್‍ಗೆ ನೋಟಿಸ್ ಬರುವುದು, ಅದು ಬಿಡುಗಡೆ ಆಗುತ್ತದೆ ಎಂದರೆ ಅದನ್ನು ವಿಜಯೇಂದ್ರ ಅವರೇ ಮಾಡಿದ್ದಾರೆ. ಈ ನೋಟಿಸ್‍ಗೆ ಉತ್ತರನೂ ವಿಜಯೇಂದ್ರ ಅವರೇ ಕೊಟ್ಟಿರಬೇಕಲ್ಲವೇ?, ನನಗೆ ಬರುವ ಮೊದಲೇ ನೋಟಿಸ್ ಲೀಕ್ ಆಯಿತು, ಅದನ್ನು ಯಾರು ಮಾಡಿದರು? ಎಂದು ಪ್ರಶ್ನಿಸಿದರು.
ಯತ್ನಾಳ್‍ಗೆ ನೋಟಿಸ್ ಬಂದಿದೆ ಎಂಬ ಸುದ್ದಿಗಳು ಮಾಧ್ಯಮದಲ್ಲಿ ಬರುತ್ತಿವೆ. ಯಾವ ಮಾಧ್ಯಮದವರಲ್ಲಿ ನೋಟಿಸ್ ಪತ್ರವಿದೆ ಎಂಬುದನ್ನು ತೋರಿಸಿ. ನನಗೆ ಹೈಕಮಾಂಡ್ ಕ್ಯಾಕರಿಸಿ ಉಗಿದಿದೆ ಎಂದು ಒಂದು ಮಾಧ್ಯಮದಲ್ಲಿ ಸುದ್ದಿ ಆಯಿತು. ಯಾವುದಾದರೂ ಶಿಸ್ತು ಸಮಿತಿ ಉಗಿಯುವ ರೀತಿಯಲ್ಲಿ ನೋಟಿಸ್ ಬಂದಿದೆಯಾ? ನನ್ನ ನೋಟಿಸ್ ಬಗ್ಗೆ ನಾನೇನು ಹೇಳಲ್ಲ. ಸಭೆ ಸೇರುತ್ತೇವೆ. ಮುಂದಿನ ನಡೆಯ ಬಗ್ಗೆ ತೀರ್ಮಾನ ಮಾಡುತ್ತೇವೆಂದು ಹೇಳಿದರು.
Advertisement