
ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಕೆಪಿಸಿಸಿ ಅಧ್ಯಕ್ಷ ಪಟ್ಟ ಹಾಗೂ ನಾಯಕತ್ವ ಬದಲಾವಣೆ ವಿಚಾರವಾಗಿ ಬಂಡಾಯ ತಾರಕಕ್ಕೇರಿದ್ದು, ಈ ನಡುವಲ್ಲೇ ಬಹಿರಂಗ ಹೇಳಿಕೆಗಳ ನೀಡದಂತೆ ನಾಯಕರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ ಪ್ರಸ್ತಾಪ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವ ರಾಜಣ್ಣ ಅವರಿಗೆ ಖರ್ಗೆ ಅವರು ಎಚ್ಚರಿಕೆ ನೀಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಪದೆ ಪದೇ ಸಚಿವ ಕೆ.ಎನ್. ರಾಜಣ್ಣ ಪಕ್ಷದ ಶಿಸ್ತಿನ ವಿರುದ್ಧ ಹೇಳಿಕೆ ನೀಡುತ್ತಿದ್ದು, ಡಿಸಿಎಂ ಡಿಕೆ.ಶಿವಕುಮಾರ್ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸುತ್ತಿದ್ದಾರೆ.
ಹೀಗಾಗಿ ರಾಜಣ್ಣ ನಡೆಯ ಬಗ್ಗೆ ಡಿಕೆಶಿ ಟೀಂ ತೀವ್ರ ಆಕ್ರೋಶ ಹೊರ ಹಾಕಿದೆ. ಅಷ್ಟೇ ಅಲ್ಲದೇ ಮೊನ್ನೆ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಮಾಜಿ ಸಂಸದ ಡಿ.ಕೆ ಸುರೇಶ್ ದೂರು ಕೊಟ್ಟಿದ್ದಾರೆನ್ನಲಾಗಿದ್ದು, ಇದರ ಬೆನ್ನಲ್ಲೇ ರಾಜಣ್ಣಗೆ ಎಐಸಿಸಿ ಅಧ್ಯಕ್ಷರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆಂದು ತಿಳಿದುಬಂದಿದೆ.
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಬಲವಾದ ಕಣ್ಣಿಟ್ಟಿರುವ ಸಚಿವ ಜಾರಕಿಹೊಳಿ, ಸಚಿವ ಕೆ.ಎನ್ ರಾಜಣ್ಣ, ಪೂರ್ಣಪ್ರಮಾಣದ ಅಧ್ಯಕ್ಷರ ನೇಮಕಕ್ಕೆ 6 ತಿಂಗಳಿಂದ ಪಟ್ಟು ಹಿಡಿದಿದ್ದಾರೆ. ಇದೆಲ್ಲದರ ಮಧ್ಯೆ ಕೆ.ಎನ್. ರಾಜಣ್ಣ ಯಾರ ಮಾತಿಗೂ ಬಗ್ಗುವಂತೆ ಕಾಣುತ್ತಿರಲಿಲ್ಲ. ಇದೀಗ ಹೈಕಮಾಂಡ್ ನಾಯಕರೇ ನೇರವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
Advertisement