ಗ್ಯಾರಂಟಿಗೆ SCP-TSP ಹಣ ಬಳಕೆ; ರಾಜ್ಯ ಸರ್ಕಾರದ ವಿರುದ್ಧ BJP ವಾಗ್ದಾಳಿ

ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟಿದ್ದ ಶೇ.24 ಹಣವನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದೆ. ಈ ಮೂಲಕ ತಳ ಸಮುದಾಯಗಳಿಗೆ ಅನ್ಯಾಯ ಮಾಡಿದೆ.
ಬಿಜೆಪಿ ಸಭೆ
ಬಿಜೆಪಿ ಸಭೆ
Updated on

ಮೈಸೂರು: ಎಸ್‌ಸಿಪಿ/ಟಿಎಸ್‌ಪಿ ಉಪಯೋಜನೆಯಡಿ ಎಸ್‌ಸಿ/ಎಸ್‌ಟಿಗಳಿಗೆ ಮೀಸಲಿಟ್ಟ 25,000 ಕೋಟಿ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದು, ಈ ಮೂಲಕ ತಳ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

ಮೈಸೂರಿನ ಬಿಡೆಪಿ ಕಚೇರಿಯಲ್ಲಿ ಗುರುವಾರ ಎಸ್‌ಸಿ/ಎಸ್‌ಟಿ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು ಅವರು, ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟಿದ್ದ ಶೇ.24 ಹಣವನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದೆ. ಈ ಮೂಲಕ ತಳ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.

ನಮ್ಮ ಪಕ್ಷ ಗ್ಯಾರಂಟಿ ಯೋಜನೆಗಳ ವಿರುದ್ಧವಿಲ್ಲ. ಆದರೆ, ರಾಜ್ಯ ಸರ್ಕಾರ ಗ್ಯಾರಂಟಿಗಳಿಗೆ ಅಗತ್ಯವಿರುವ 56,000 ಕೋಟಿಗಳಷ್ಟು ಹಣವನ್ನು ಪ್ರತ್ಯೇಕ ಮೀಸಲಿಡಬೇಕು ಮತ್ತು ಎಸ್‌ಸಿ/ಎಸ್‌ಟಿ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಶೇ 24.8 ರಷ್ಟು ಹಣವನ್ನು ಬಳಸಬಾರದು ಎಂದು ಹೇಳಿದರು.

ರಾಜ್ಯ ಸರ್ಕಾರ ವಿವಿಧ ಅಭಿವೃದ್ಧಿ ನಿಗಮಗಳ ಹಣ ಕಡಿತಗೊಳಿಸುವ ಮೂಲಕ ದಲಿತರ ಕಲ್ಯಾಣಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಗ್ಯಾರಂಟಿ ಹೆಸರಿನಲ್ಲಿ ಜನರನ್ನು ಯಾಮಾರಿಸುತ್ತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ರಾಜ್ಯದ ಖಜಾನೆ ಖಾಲಿಯಾಗಿದೆ. ಈ ಮೂಲಕ ಜರನ್ನು ಭಿಕ್ಷುಕರನ್ನಾಗಿಸಿದೆ. ಕೆಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಸರ್ಕಾರ ವರ್ತಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರದ ಜನ ವಿರೋಧಿ ನಿಲುವಿನ ವಿರುದ್ಧ ಬೃಹತ್ ಜನಾಂದೋಲನ ನಡೆಸಲಾಗುತ್ತಿದೆ. ಬಜೆಟ್ ಮಂಡನೆ ವೇಳೆ ಗ್ಯಾರಂಟಿ ಯೋಜನೆಗೆ ಪ್ರತ್ಯೇಕವಾಗಿ ಹಣ ಮೀಸಲಿಡಿ. ಒಂದು ಕೈಲಿ ಕೊಟ್ಟು ಮತ್ತೊಂದು ಕೈಯಿಂದ ಕಿತ್ತುಕೊಳ್ಳುವ ಕೆಲಸ ಮಾಡಬೇಡಿ. ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯವಾಗಿರುವ ಕರ್ನಾಟಕವು ಎಸ್‌ಸಿ/ಎಸ್‌ಟಿಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಕಸಿದುಕೊಳ್ಳುವ ಬದಲು ಸಂಪನ್ಮೂಲಗಳನ್ನು ಕ್ರೋಢೀಕರಿಸಬೇಕು. ಗೃಹಲಕ್ಷ್ನೀ ಯೋಜನೆ ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಚುನಾವಣೆಯ ಸಮಯದಲ್ಲಿ ಮಾತ್ರ ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡುತ್ತದೆ ಎಂದು ಕಿಡಿಕಾರಿದರು.

ಬಿಜೆಪಿ ಸಭೆ
ಖಜಾನೆಯಲ್ಲಿ ಹಣವಿಲ್ಲವೇ? ಸಿಎಂಗೆ ಅನುಭವದ ಕೊರತೆ ಇದೆಯೇ?: ಗ್ಯಾರಂಟಿ ಯೋಜನೆ ಕುರಿತು ನಿಖಿಲ್ ಕುಮಾರಸ್ವಾಮಿ ವ್ಯಂಗ್ಯ

ಇದೇ ವೇಳೆ ಕೇಂದ್ರದ ಹಣ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ಈ ಬಗ್ಗೆ ಚರ್ಚೆಗೆ ಬಿಜೆಪಿ ಸಿದ್ಧವಿದೆ ಎಂದರು. ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರಕ್ಕಿಂತ ಹೆಚ್ಚಿನ ಹಣವನ್ನು ಬಿಜೆಪಿ ಬಿಡುಗಡೆ ಮಾಡಿದೆ ಎಂದು ಹೇಳಿದರು.

ದೆಹಲಿ ಮುಖ್ಯಮಂತ್ರಿ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರ ತೆಗೆಸಿರುವುದನ್ನು ವಿರೋಧಿಸಿ ದಲಿತರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಈ ರೀತಿ ನಡೆದಿಲ್ಲ, ಹೊಸ ಸರ್ಕಾರದ ಬಗ್ಗೆ ಕೆಟ್ಟ ಭಾವನೆ ಮೂಡಿಸಲು ಕೆಲ ಕಿಡಿಗೇಡಿಗಳು ನಡೆಸಿರುವ ಕೈವಾಡವಿದು ಎಂದು ಸಮರ್ಥಿಸಿಕೊಂಡರು.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಅವರ ವಿರುದ್ಧವೂ ಇದೇ ರೀತಿಯ ಆರೋಪಗಳನ್ನು ಮಾಡಲಾಗಿತ್ತು, ಅಂಬೇಡ್ಕರ್ ಭಾವಚಿತ್ರವನ್ನು ತೆಗೆಯುವ ಅಥವಾ ಆ ರೀತಿ ಮಾಡುವ ಯೋಚನೆಯನ್ನು ಯಾರೂ ಮಾಡುವುದಿಲ್ಲ ಎಂದರು.

ಪಕ್ಷದ ರಾಜ್ಯ ಘಟಕದಲ್ಲಿನ ಭಿನ್ನಾಭಿಪ್ರಾಯಗಳ ಕುರಿತ ಪ್ರಶ್ನೆಗೆ ಉತ್ತರಿಸಿ, ಭಿನ್ನಾಭಿಪ್ರಾಯಗಳಾವುದೂ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಎಲ್ಲಾ ನಾಯಕರು ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು. ನಾವೆಲ್ಲರೂ ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದೆವೇಯೇ ಹೊರತು ಪಕ್ಷದಲ್ಲಿ ಯಾವುದೇ ಬಣ ಅಥವಾ ಗುಂಪುಗಳನ್ನಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com