

ಬೆಂಗಳೂರು: ಪೊಲೀಸ್ ಠಾಣೆಯಲ್ಲಿ ನನ್ನ ಮೇಲೆ ನಡೆದ ದೌರ್ಜನ್ಯ ಮತ್ತು ಹತ್ಯೆ ಯತ್ನದ ಬಗ್ಗೆ 2024ರ ಡಿಸೆಂಬರ್ 19ರಂದು ನಾನು ಸಲ್ಲಿಸಿದ್ದ ದೂರಿನ ಮೇಲೆ ಬೆಳಗಾವಿ ಪೊಲೀಸರು ಇನ್ನೂ ಎಫ್‌ಐಆರ್ ದಾಖಲಿಸಿಲ್ಲ ಎಂದು ಬಿಜೆಪಿ ಎಂಎಲ್‌ಸಿ ಸಿಟಿ ರವಿ ಅವರು ಬುಧವಾರ ಹೇಳಿದ್ದಾರೆ.
ಇಂದು ಬೆಂಗಳೂರಿನ ಬಿಜೆಪಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ, ಡಿಸೆಂಬರ್ 19 ರಂದು ರಾತ್ರಿ ನಾನು ದೂರು ನೀಡಿದ್ದೇನೆ ಮತ್ತು ಈ ಕ್ಷಣದವರೆಗೆ ಎಫ್ಐಆರ್ ದಾಖಲಿಸಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಬದಲಾಗಿದೆ, ಅಧಿಕಾರದಲ್ಲಿರುವ ಕಾಂಗ್ರೆಸ್ ಮುಖಂಡರಿಗೆ ಒಂದು ಕಾನೂನು ಮತ್ತು ಕಾಂಗ್ರೆಸ್ಸೇತರ ಪಕ್ಷಗಳ ಮುಖಂಡರಿಗೆ ಮತ್ತೊಂದು ಕಾನೂನು ಇದೆ ಎಂದು ವಾಗ್ದಾಳಿ ನಡೆಸಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನ್ನನ್ನ ವಿರುದ್ಧ ನೀಡುವ ದೂರು ಕೂಡಲೇ ಸ್ವೀಕೃತವಾಗುತ್ತದೆ ಮತ್ತು ಎಫ್ಐಆರ್ ಸಹ ದಾಖಲಾಗುತ್ತದೆ. ಆದರೆ ನಾನು ಪೊಲೀಸ್ ದೌರ್ಜನ್ಯದ ಬಗ್ಗೆ ಡಿಸೆಂಬರ್ 19ರಂದು ದೂರು ನೀಡಿದ್ದರೂ, ಸಿಒಡಿ ಅಧಿಕಾರಿ ಮತ್ತು ಡಿಜಿಪಿ-ಐಜಿ ಇಬ್ಬರೂ ತಮ್ಮ ಗಮನಕ್ಕೆ ಬಂದಿಲ್ಲವೆನ್ನುತ್ತಾರೆ ಎಂದರು.
ಅವಹೇಳನಕಾರಿ ಹೇಳಿಕೆ ಬಗ್ಗೆ ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ಇಲಾಖೆ(ಸಿಐಡಿ) ಅಧಿಕಾರಿಗಳು ನನ್ನ ವಿರುದ್ಧ ಎರಡು ಪ್ರಕರಣಗಳಿವೆ ಎಂದು ಪ್ರತಿಪಾದಿಸುತ್ತಿದ್ದಾರೆ ಮತ್ತು ಅವರು ನೋಟಿಸ್ ಕಳುಹಿಸಲು ಸಿದ್ಧರಾಗಿದ್ದಾರೆ ಎಂದರು.
“ಗೃಹ ಸಚಿವ ಜಿ.ಪರಮೇಶ್ವರ ಅವರು ಸಾರ್ವಜನಿಕವಾಗಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅವರಿಗೆ ಹೆಚ್ಚು ತೊಂದರೆ ನೀಡಬೇಡಿ. ನಾನು ಅವರಿಗೆ ದೂರು ನೀಡಿಲ್ಲ. ನನ್ನ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ನಿಯಮ ಪುಸ್ತಕ ಮತ್ತು ಸಂವಿಧಾನದ ಪ್ರಕಾರ ನಡೆದುಕೊಂಡಿಲ್ಲ.ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ರವಿ ಆಗ್ರಹಿಸಿದರು.
ಬೆಳಗಾವಿ ಸುವರ್ಣ ವಿಧಾನಸೌಧದ ಅಧಿವೇಶನದ ಹೊರಗೆ ಈ ಘಟನೆಗಳು ನಡೆದಿವೆ...ಸಮಾಜ ವಿರೋಧಿಗಳು ನನ್ನ ಮೇಲೆ ಹಲ್ಲೆಗೆ ಯತ್ನಿಸುತ್ತಿದ್ದಾರೆ ಮತ್ತು ಪೊಲೀಸರು ಸುಪಾರಿ ಕಿಲ್ಲರ್‌ಗಳಂತೆ ಕೆಲಸ ಮಾಡುತ್ತಿದ್ದಾರೆ. ನಾನು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ನನಗೆ ಇರುವ ಬೆದರಿಕೆಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದೇನೆ ಮತ್ತು ವ್ಯಕ್ತಿಗಳ ಹೆಸರನ್ನೂ ಹೇಳಿದ್ದೇನೆ. ಈ ನಿಟ್ಟಿನಲ್ಲಿ ಅವರು ಹೇಗೆ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ಸರ್ಕಾರಕ್ಕೆ ಬಿಟ್ಟ ವಿಚಾರ' ಎಂದರು.
Advertisement