
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಅವರ ನಿರ್ದೇಶನದಂತೆ ಪೊಲೀಸರು ಸುಪಾರಿ ಕಿಲ್ಲರ್‌ಗಳ ರೀತಿ ವರ್ತಿಸುತ್ತಿದ್ದಾರೆ, ನಕಲಿ ಎನ್‌ಕೌಂಟರ್ ಮೂಲಕ ನನ್ನನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಎಂಎಲ್‌ಸಿ ಸಿಟಿ ರವಿ ಸೋಮವಾರ ಆರೋಪಿಸಿದ್ದಾರೆ.
ಬೆಳಗಾವಿ ವಿಧಾನಮಂಡಲ ಅಧಿವೇಶನದ ವೇಳೆ ವಿಧಾನ ಪರಿಷತ್ತಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರಾಗಲಿ ಸಿಐಡಿಯವರಾಗಲಿ ಎಫ್‌ಐಆರ್ ದಾಖಲಿಸುವ, ಪ್ರಶ್ನಿಸುವ ಮತ್ತು ತನಿಖೆ ನಡೆಸುವ ಅಧಿಕಾರ ವ್ಯಾಪ್ತಿ ಹೊಂದಿಲ್ಲ. ಆದರೆ, ರಾಜಕೀಯ ಒತ್ತಡದ ಕಾರಣಕ್ಕೆ ಕಾನೂನುಬಾಹಿರವಾಗಿ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಪಕ್ಷದ ಇತರ ನಾಯಕರ ಜತೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಸೋಮವಾರ ಭೇಟಿ ಮಾಡಿ ಈ ಕುರಿತು ಮನವಿ ಪತ್ರ ನೀಡಿದ್ದಲ್ಲದೇ, ಅದರ ಒಂದು ಪ್ರತಿಯನ್ನು ರಾಷ್ಟ್ರಪತಿಯವರಿಗೂ ಕಳುಹಿಸಿದ್ದಾರೆ.
ಖಾನಾಪುರ ಪೊಲೀಸ್ ಠಾಣೆಯಲ್ಲಿ ನನ್ನ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದ ದೂರಿನ ಪ್ರತಿಯನ್ನು ಬೆಳಗಾವಿ ಜಿಲ್ಲಾ ಎಸ್‌ಪಿ ಮೂಲೆಗೆ ಹಾಕಿದ್ದು, ಅದು ದೂಳು ತಿನ್ನುತ್ತಿದೆ. ಸಂವಿಧಾನದ ರಕ್ಷಕರಾಗಿರುವ ನೀವು ಪೊಲೀಸ್ ಮಹಾನಿರ್ದೇಶಕರನ್ನು ಕರೆಸಿ ಈ ಎಲ್ಲ ಘಟನೆಗಳಿಗೆ ಸಂಬಂಧಿಸಿದಂತೆ ವಿವರಣೆ ಪಡೆಯಬೇಕು. ಪೊಲೀಸ್ ದೌರ್ಜನ್ಯಕ್ಕೆ ಮೂಕಪ್ರೇಕ್ಷಕರಂತೆ ವರ್ತಿಸಿರುವ ಕಾರಣ ಆಯುಕ್ತರು ಮತ್ತು ಎಸ್‌ಪಿ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅವರಿಗೆ ಕೂಡಲೇ ಹೆಚ್ಚುವರಿ ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರ ಸಮಸ್ಯೆಗೆ ರಾಜಿ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳಬೇಕಿತ್ತು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಹೊರಟ್ಟಿ, ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಮಾಡಿರುವ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದ ಪ್ರಕರಣವನ್ನು ಬಗೆಹರಿಸಿಕೊಂಡು ಮುಂದುವರಿಯಲು ಬಯಸುತ್ತೇನೆ ಎಂದಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಚರ್ಚಿಸಿದ್ದೇನೆ. ಆದಾಗ್ಯೂ, ಪ್ರತಿಯೊಬ್ಬರೂ ತಮ್ಮ ತಮ್ಮ ನಿಲುವುಗಳಲ್ಲಿ ದೃಢವಾಗಿ ಉಳಿದಿರುವುದರಿಂದ, ನಾನು ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಪ್ರಕರಣವು ಈಗ ರಾಜಕೀಯಕ್ಕೆ ತಿರುಗಿದೆ ಮತ್ತು ನನ್ನ ಆತ್ಮಸಾಕ್ಷಿಯ ವಿರುದ್ಧ ನಾನು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾನು ಕುರ್ಚಿಯಲ್ಲಿ ಕುಳಿತಾಗ, ನಾನು ಎಲ್ಲ ಸದಸ್ಯರನ್ನು ಸಮಾನವಾಗಿ ನೋಡುತ್ತೇನೆ ಎಂದು ಹೊರಟ್ಟಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
Advertisement