ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ: ಪ್ರಿಯಾಂಕ್ ಖರ್ಗೆ ಗುರಿಯಾಗಿಸಿಕೊಂಡ BJP; ಬೆನ್ನಿಗೆ ನಿಂತ ಕಾಂಗ್ರೆಸ್, ತಿರುಗೇಟಿಗೆ ಮುಂದು!

ದಲಿತ ಸಂಘರ್ಷ ಸಮಿತಿ ನಾಯಕ ಮಾವಳ್ಳಿ ಶಂಕರ್ ಮತ್ತು ಜನಪ್ರಕಾಶ ಸ್ವಾಮೀಜಿ ಮಾತನಾಡಿ, ಪ್ರಿಯಾಂಕ್ ಖರ್ಗೆಯವರನ್ನು ಗುರಿಯಾಗಿಸಿಕೊಂಡು, ದಲಿತ ನಾಯಕತ್ವಕ್ಕೆ ಬಿಜೆಪಿ ಹಾನಿ ಮಾಡಿದರೆ, ಅದನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
Minister Priyank Kharge and Sachin Panchal
ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸಚಿನ್ ಪಾಂಚಾಳ್
Updated on

ಬೆಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಾಳ್ ಅವರ ಆತ್ಮಹತ್ಯೆ ಪ್ರಕರಣ ಹಿಡಿದು ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಜುಗರ ತರಲು ಯತ್ನಿಸುತ್ತಿರುವ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಸಂಪುಟ ಸಭೆಯಲ್ಲಿ ಹೈಕಮಾಂಡ್ ಆದೇಶದ ಮೇರೆಗೆ ಸಂಪುಟ ಸಹೋದ್ಯೋಗಿಗಳಿಗೆ ಪ್ರಿಯಾಂಕ್ ಖರ್ಗೆಯವರಿಗೆ ಸಂಪೂರ್ಣ ಬೆಂಬಲ ನೀಡುವಂತೆ ಸೂಚಿಸಿದ್ದು, ಇದೇ ವೇಳೆ ಕಮಲ ಪಾಳಯದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವವರ ಪಟ್ಟಿಯನ್ನು ನಾಯಕರು ಮುಖ್ಯಮಂತ್ರಿಗಳಿಗೆ ನೀಡಿದ್ದಾರೆಂದು ತಿಳಿದುಬಂದಿದೆ.

ವಿವಾದ ಸಂಬಂಧ ಈಗಾಗಲೇ ಕಾಂಗ್ರೆಸ್ ಹಾಗೂ ದಲಿತ ಸಮುದಾಯದ ನಾಯಕರು ಪ್ರಿಯಾಂಕ್ ಖರ್ಗೆ ಪರ ನಿಂತಿದ್ದು, ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ದಲಿತ ಸಂಘರ್ಷ ಸಮಿತಿ ನಾಯಕ ಮಾವಳ್ಳಿ ಶಂಕರ್ ಮತ್ತು ಜನಪ್ರಕಾಶ ಸ್ವಾಮೀಜಿ ಮಾತನಾಡಿ, ಪ್ರಿಯಾಂಕ್ ಖರ್ಗೆಯವರನ್ನು ಗುರಿಯಾಗಿಸಿಕೊಂಡು, ದಲಿತ ನಾಯಕತ್ವಕ್ಕೆ ಬಿಜೆಪಿ ಹಾನಿ ಮಾಡಿದರೆ, ಅದನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಏತನ್ಮಧ್ಯೆ ಪ್ರಿಯಾಂಕ್ ಖರ್ಗೆ ವಿರುದ್ಧ ಕಲಬುರಗಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸದ ನಡುವಲ್ಲೇ, ದಲಿತ ಸಂಘರ್ಷ ಸಮಿತಿಯು ಮಂಡ್ಯದಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದವು. ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ಪ್ರತಿಭಟನೆಗಳು ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ವಿವಾದ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾರತೀಯತೆಯೂ ಇಲ್ಲದ, ರಾಷ್ಟ್ರೀಯತೆಯೂ ಇಲ್ಲದ ನಿಮ್ಮ ನಕಲಿ ಗಾಂಧಿ ಕಾಂಗ್ರೆಸ್ ಪಕ್ಷ ಕಳೆದ 10 ವರ್ಷಗಳಿಂದ ಈ ದೇಶದ ಅತೀ ದೊಡ್ಡ ಕಾಮಿಡಿ ಸಿನಿಮಾ ಆಗಿದೆ. ಈ ಸೂಪರ್ ಹಿಟ್ ಕಾಮಿಡಿ ಸಿನಿಮಾದ ಸ್ಟಾರ್ ಕಾಮಿಡಿಯನ್ ಯಾರು ಎಂದು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪಾಪ ನಿಮ್ಮ ತಂದೆಯವರು ಈ ಇಳಿ ವಯಸ್ಸಿನಲ್ಲೂ ಆ ಕಾಮಿಡಿ ಪೀಸ್ ನ ಮಾನ ಉಳಿಸಲು ರಾಜ್ಯದಲ್ಲಿ ಸಿಗಬಹುದಾದ ಅಧಿಕಾರವನ್ನು ತ್ಯಾಗ ಮಾಡಿ ಅಲ್ಲಿ ಆ ಕಾಮಿಡಿ ಪೀಸ್ ಗೆ ರಕ್ಷಣೆ ಕೊಡುತ್ತಿದ್ದಾರಲ್ಲ, ಈ ಶತಮಾನದ ನಿಜವಾದ ಕಟ್ಟಪ್ಪ ಅಂದರೆ ಅದು ನಿಮ್ಮ ತಂದೆಯವರೇ.

Minister Priyank Kharge and Sachin Panchal
BJP ತಾಳಕ್ಕೆ ತಕ್ಕಂತೆ ನಮ್ಮ ಸರ್ಕಾರ ಕುಣಿಯಲು ಸಾಧ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಂದಹಾಗೆ ಮೊನ್ನೆ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ 35 ಶಾಸಕರು ಸಭೆ ಸೇರಿದ್ದರಂತಲ್ಲ, ಅಲ್ಲಿ ತಾವು ಇದ್ದರೋ? ಅಥವಾ ಆತ್ಮಹತ್ಯೆಗೆ ಕಾರಣವಾದರೂ ಸರಿ, ಕೊಲೆ ಮಾಡಿದರೂ ಸರಿ, ಎಐಸಿಸಿ ಅಧ್ಯಕ್ಷರ ಕೋಟಾದಲ್ಲಿ ತಮ್ಮ ಕುರ್ಚಿ ಮಾತ್ರ ಸುಭದ್ರ ಎಂದು ಯಾವ ಬಣಕ್ಕೂ ಸೇರದೆ ತಟಸ್ಥರಾಗಿರುವ ನಿರ್ಧಾರ ಮಾಡಿದ್ದೀರೋ? ಎಂದು ಪ್ರಶ್ನಿಸಿದ್ದಾರೆ.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರತಿಕ್ರಿಯಿಸಿ, ಬಿಜೆಪಿಯ ಉದ್ದೇಶ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರಿಯಾಗಿಸಿಕೊಳ್ಳುವುದಲ್ಲ, ಬದಲಾಗಿ ಪ್ರಿಯಾಂಕ್ ಅವರು ಕಲಬುರಗಿಯನ್ನು ತಮ್ಮ ಆಸ್ಥಾನವನ್ನಾಗಿ ಮಾಡಿಕೊಂಡಿರುವುದರಿಂದ ಅವರ ದುರಹಂಕಾರವನ್ನು ಖಂಡಿಸುವುದಾಗಿದೆ ಎಂದು ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷರ ಮಗನಾಗಿರುವುದು ಬಿಟ್ಟರೆ, ಪ್ರಿಯಾಂಕ್ ಖರ್ಗೆಯವರಿಗೆ ಸಚಿವನಾಗಿರುವುದಕ್ಕೆ ಬೇರೆ ಯಾವ ಅರ್ಹತೆ ಇದೆ? ಹಿರಿಯ ದಲಿತ ನಾಯಕ ದಿವಂಗತ ವಿ. ಶ್ರೀನಿವಾಸ ಪ್ರಸಾದ್ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಲಾಯಿತು. ಪ್ರಿಯಾಂಕ್ ಅವರನ್ನು ಸೇರ್ಪಡೆಗೊಳಿಸಲಾಯಿತು. ಪ್ರಿಯಾಂಕ್ ಅವರು ಶ್ರೀನಿವಾಸ್ ಪ್ರಸಾದ್‌ ಅವರಿಗೆ ಸರಿಸಾಟಿಯೇ? ಸಮುದಾಯಕ್ಕೆ ಅವರ ಕೊಡುಗೆ ಏನು? ಎಂದು ಪ್ರಶ್ನಿಸಿದರು.

ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳು ಪ್ರಿಯಾಂಕ್ ಖರ್ಗೆ ಬೆಂಬಲಿಗರೇ. ಆದರೆ, ಇವರ ಬಂಧನವಾಗಲಿಲ್ಲ. ಆದರೆ, ನಮ್ಮ ಎಂಎಲ್‌ಸಿ ಸಿ. ಟಿ. ರವಿ ಅವರನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣದಲ್ಲಿ ಕೂಡಲೇ ಬಂಧಿಸಲಾಗಿತ್ತು ಎಂದು ಕಿಡಿಕಾರಿದರು.

ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಮತ್ತು ಮಾಜಿ ಎಂಎಲ್‌ಸಿ ರಮೇಶ್ ಬಾಬು ಅವರು ಮಾತನಾಡಿ, ಬಿಜೆಪಿಗೆ ಪ್ರಿಯಾಂಕ್ ಅವರನ್ನು ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಿಲ್ಲ, ಆದ್ದರಿಂದ ಅವರ ಪಾತ್ರವಿಲ್ಲದ ಪ್ರಕರಣದಲ್ಲಿ ಅವರ ಮೇಲೆ ದಾಳಿ ಮಾಡುವಂತಹ ತಂತ್ರಗಳನ್ನು ರೂಪಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ನಾಯಕರ ಅಪರಾಧ ಕೃತ್ಯಗಳನ್ನು ಬಹಿರಂಗಪಡಿಸುವ ಮೂಲಕ ಶೀಘ್ರದಲ್ಲೇ ಸೂಕ್ತ ಉತ್ತರ ನೀಡಲಿದ್ದೇವೆ. ಬಿಜೆಪಿ ನಾಯಕರು ಪ್ರಿಯಾಂಕ್ ಖರ್ಗೆಯವರನ್ನು ಗುರಿ ಮಾಡಿದ್ದಷ್ಟೂ ಅವರು ಬಲವಂತರಾಗಲಿದ್ದಾರೆ. ಅಲ್ಲದೆ, ಭವಿಷ್ಯದಲ್ಲಿ ಹೆಚ್ಚು ಜಾಗರೂಕವಾಗಿರುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com