
ಬೆಂಗಳೂರು: ಕಳೆದ ವರ್ಷ ಡಿಸೆಂಬರ್ 19 ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿರುವ ಸರ್ಕಾರದ ವಿರುದ್ಧ ಸಭಾಪತಿ ಬಸವರಾಜ ಎಸ್ ಹೊರಟ್ಟಿ ಕಿಡಿಕಾರಿದ್ದಾರೆ.
ಜನವರಿ 10 ರಂದು ರಾಜ್ಯ ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಬರೆದ ಪತ್ರದಲ್ಲಿ ಹೊರಟ್ಟಿ ಅವರು, ಈ ಪ್ರಕರಣದ ಬಗ್ಗೆ ಈಗಾಗಲೇ ತೀರ್ಪು ನೀಡಲಾಗಿದ್ದು, ಅದುವೇ ಅಂತಿಮವಾಗಿದೆ. ಸದನದಲ್ಲಿ ತೀರ್ಮಾನವಾದ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು ಸರಿಯಲ್ಲ. ಇದು ಸಾಂವಿಧಾನಿಕ ಸಂಘರ್ಷಕ್ಕೆ ಕಾರಣವಾಗುತ್ತದೆ' ಎಂದು ಹೇಳಿದ್ದಾರೆ.
ಅವಾಚ್ಯ ಶಬ್ದವನ್ನು ಬಳಸಿರುವುದಕ್ಕೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ತಾವು ತೀರ್ಮಾನ ಮಾಡಿದ ಬಳಿಕವೂ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಹೊರಟ್ಟಿ, ಸಂವಿಧಾನ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳು, ಲೋಕಸಭೆ ಮತ್ತು ರಾಜ್ಯಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳು, ಕೌಲ್ ಮತ್ತು ಶಕ್ದರ್ ಅವರ 'ಪ್ರಾಕ್ಟೀಸ್ ಅಂಡ ಪ್ರೊಸಿಜರ್ ಆಫ್ ಪಾರ್ಲಿಮೆಂಟ್' ಅನ್ನು ಪರಾಮರ್ಶಿಸಿದ ನಂತರವೇ ಸಭಾಪತಿಯ ಪೀಠದಿಂದ ತೀರ್ಪು ನೀಡಲಾಗಿದೆ ಎಂದರು.
ಸಭಾಪತಿಯ ಅಧಿಕಾರಕ್ಕೆ ಚ್ಯುತಿ ಬರುವಂತೆ ಕಾರ್ಯಾಂಗ ವರ್ತಿಸಬಾರದು. ಸಂದೀಯ ಪದ್ಧತಿ, ಪ್ರಕ್ರಿಯೆ ಹಾಗೂ ಸಂವಿಧಾನದ ಮೂಲಕ ಶಾಸಕಾಂಗಕ್ಕೆ ಮತ್ತು ಸಭಾಪತಿಗೆ ದತ್ತವಾಗಿರುವ ಅಧಿಕಾರಕ್ಕೆ ಚ್ಯುತಿ ಬರುವ ರೀತಿಯಲ್ಲಿ ಕಾರ್ಯಾಂಗವು ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ. ಸದನದಲ್ಲಿ ಅಸಭ್ಯ ವರ್ತನೆ ಅಥವಾ ಇತರ ನಿಂದನೆಗಳಿಗಾಗಿ ಸದನವು ತನ್ನ ಸದಸ್ಯರನ್ನು ಶಿಕ್ಷಿಸುವ ಅಧಿಕಾರವನ್ನು ಹೊಂದಿದೆ ಎಂದು ಅವರು ಹೇಳಿದರು.
ಅದರಂತೆ ಇಲ್ಲಿಯವರೆಗೂ ನಡೆದುಕೊಂಡು ಬಂದಿರುವ ಸಂಪ್ರದಾಯಗಳನ್ನು ಉಳಿಸಿಕೊಳ್ಳುವ ಹಾಗೂ ಸದನದ ಆವರಣದಲ್ಲೇ ಕಲಾಪವನ್ನು ನಿಯಂತ್ರಿಸುವ ಅಧಿಕಾರ ಸಭಾಪತಿಗೆ ಇದ್ದು, ಅವರ ತೀರ್ಮಾನವೇ ಅಂತಿಮ. ಭಾರತದ ಸಂವಿಧಾನದಲ್ಲಿ ಶಾಸಕಾಂಗ ಮತ್ತು ಸ್ಪೀಕರ್‌ಗೆ ನೀಡಲಾದ ವಿಶೇಷ ಅಧಿಕಾರವನ್ನು ಉಲ್ಲಂಘಿಸಿ, ಕಾರ್ಯಾಂಗವು ಸಿಐಡಿಗೆ ಈ ಪ್ರಕರಣವನ್ನು ವಹಿಸುವ ಮೂಲಕ ಸಾಂವಿಧಾನಿಕ ಸಂಘರ್ಷಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ದೂರಿದರು.
ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಅನಗತ್ಯ ಸಂಘರ್ಷದ ಪ್ರಮೇಯ ಬೇಡ. ವಿಧಾನ ಪರಿಷತ್ತಿನಲ್ಲಿ ನಡೆದ ಘಟನೆ ಸಭಾಪತಿಗಳ ವ್ಯಾಪ್ತಿಗೆ ಬರುವುದು ಸಹಜ. ಕಾರ್ಯಾಂಗ ಮತ್ತು ಶಾಸಕಾಂಗದ ವ್ಯಾಪ್ತಿಯಲ್ಲಿ ಬರುವ ನಾವುಗಳು ಪರಸ್ಪರ ಗೌರವದಿಂದ ಸಂವಿಧಾನದ ಅಡಿಯಲ್ಲಿಯೇ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.
ಪರಮೇಶ್ವರ ಅವರಿಗೆ ಹಲವು ಸಾಂವಿಧಾನಿಕ ಹುದ್ದೆಗಳನ್ನು ನಿಭಾಯಿಸಿರುವ ಅನುಭವ ಇದೆ. ಹೀಗಾಗಿ, ಇಂತಹ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬೇಡಿ. ಸಂವಿಧಾನದ ಚೌಕಟ್ಟಿನಲ್ಲಿ, ಸಂಸದೀಯ ಕಾರ್ಯವಿಧಾನಗಳು ಮತ್ತು ಪ್ರಕ್ರಿಯೆಗಳಲ್ಲಿ ಸ್ಪೀಕರ್‌ಗೆ ಒದಗಿಸಲಾಗಿರುವ ಹಕ್ಕುಗಳು ಮತ್ತು ಸದನದ ಸಾರ್ವಭೌಮತ್ವವನ್ನು ಗಮನದಲ್ಲಿಟ್ಟುಕೊಂಡು ನೀವು ಈ ಪ್ರಕರಣವನ್ನು ನಿರ್ವಹಿಸುತ್ತೀರಿ ಎಂದು ನಾನು ನಂಬುತ್ತೇನೆ ಎಂದು ಹೊರಟ್ಟಿ ಹೇಳಿದರು.
ಗೃಹ ಸಚಿವ ಪರಮೇಶ್ವರ ಪ್ರತಿಕ್ರಿಯೆ
ಈ ಕುರಿತು ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ ಅವರು, ಹೊರಟ್ಟಿ ಅವರ ಪತ್ರ ಬರೆದಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದ್ದರೂ, ಪತ್ರ ನಮಗೆ ತಲುಪಿಲ್ಲ. ಪತ್ರದಲ್ಲಿ ಏನಿದೆ ಎಂಬುದನ್ನು ಮೊದಲು ನೋಡುತ್ತೇನೆ. ಬಳಿಕ ಕಾನೂನು ತಜ್ಞರ ಸಲಹೆ ಪಡೆಯುತ್ತೇನೆ. ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಸಭಾಪತಿ ಅವರು ಕಾನೂನಿನ ಚೌಕಟ್ಟಿನಲ್ಲೇ ತೀರ್ಪು ನೀಡಿದ್ದಾರೆ. ನಾವೂ ಕೂಡ ಕಾನೂನಿನ ಚೌಕಟ್ಟಿನಲ್ಲೇ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಗೊಂದಲಗಳಿಗೆ ತೆರೆ ಎಳೆಯಲು ಘಟನೆಯ ಹಿಂದಿನ ಸತ್ಯಾಸತ್ಯತೆ ಪತ್ತೆ ಹಚ್ಚಲು ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ. ಇದರಿಂದ ಸಾಂವಿಧಾನಿದ ಸಂಘರ್ಷವೇನೂ ಆಗುವುದಿಲ್ಲ. ಶಾಸಕಾಂಗದ ಸಾರ್ವಭೌಮತೆಗೆ ಧಕ್ಕೆಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸದನದಲ್ಲಿ ಅವಹೇಳನಕಾರಿ ಪದಗಳನ್ನು ಬಳಸಿದ ಆರೋಪದ ಮೇಲೆ ಡಿಸೆಂಬರ್ 19 ರಂದು ಸಿಟಿ ರವಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿ, ಅದೇ ಸಂಜೆ ಅವರನ್ನು ಬಂಧಿಸಿದರು. ಬಳಿಕ ಹೈಕೋರ್ಟ್ ಆದೇಶದ ಮೇರೆಗೆ ಅವರನ್ನು ಬಿಡುಗಡೆ ಮಾಡಲಾಯಿತು.
Advertisement