
ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಚ್ಚಾಟ ಮುಂದುವರಿದಿದ್ದು, ತಾನು ದಲಿತನಾಗಿದ್ದು, ನಾನೇಕೆ ಮುಖ್ಯಮಂತ್ರಿಯಾಗಬಾರದು ಎಂದು ಮಂಗಳವಾರ ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದಲಿತರು ಸಿಎಂ ಸ್ಥಾನಕ್ಕೆ ಯಾಕೆ ಬರಬಾರದು, ನಾನೇಕೆ ಮುಖ್ಯಮಂತ್ರಿ ಆಗಬಾರದು, ಒಂದು ವೇಳೆ ನಾನು ಮುಖ್ಯಮಂತ್ರಿಯಾದರೆ ಯಾರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾರೆ ಎಂದು ಪ್ರಶ್ನಿಸಿದರು.
'ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯು ನನ್ನ ಹೆಸರನ್ನು ಅಂಗೀಕರಿಸುತ್ತದೆಯೇ ಎಂಬುದರ ಬಗ್ಗೆ ನನಗೆ ಖಾತರಿಯಿಲ್ಲ. ಈ ಎಲ್ಲಾ ಅಂಶಗಳು ಪಾತ್ರವಹಿಸುತ್ತವೆ. ಹೈಕಮಾಂಡ್ ನಿರ್ಧರಿಸಿದರೆ ನಾನು ಸಿಎಂ ಆಗುತ್ತೇನೆ' ಎಂದು ಹೇಳಿದರು.
'ಸೋಮವಾರ ನಡೆದ ಸಿಎಲ್‌ಪಿ ಸಭೆಯಲ್ಲಿ ಬೆಳಗಾವಿ ಕಾರ್ಯಕ್ರಮದ ಕುರಿತು ಚರ್ಚೆ ನಡೆದಿದೆ. ಯಾವುದೇ ಶಾಸಕರು ಅತೃಪ್ತಿ ವ್ಯಕ್ತಪಡಿಸಿಲ್ಲ. ದಲಿತ ಮುಖಂಡರ ಸಭೆ ರದ್ದುಗೊಳಿಸಿಲ್ಲ. ಮುಂದೂಡಿದ್ದೇವೆ. ದಲಿತರ ಸಂಕಷ್ಟ ಆಲಿಸಬೇಕು. ತ್ಯಾಗದ ಬಗ್ಗೆ ಮಾತನಾಡಿದ್ದೇನೆ... ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದಾಗಿ ಹೇಳಿದ್ದು ಯಾರು? ಅಧಿಕಾರ ಹಂಚಿಕೆ ಬಗ್ಗೆ ನನಗೆ ಗೊತ್ತಿಲ್ಲ. ಸಚಿವ ಸಂಪುಟ ಪುನಾರಚನೆ ಬಗ್ಗೆಯೂ ನನಗೆ ಗೊತ್ತಿಲ್ಲ' ಎಂದರು.
ಮೂರು ಹಸುಗಳ ಕೆಚ್ಚಲು ಕೊಯ್ದ ಘಟನೆಯನ್ನು ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ದಲಿತರ ಹತ್ಯೆ ಪ್ರಕರಣಗಳು ವರದಿಯಾದಾಗ ಬಿಜೆಪಿಯವರು ಪ್ರತಿಭಟನೆ ನಡೆಸಿದ್ದಾರಾ ಎಂದು ಪ್ರಶ್ನಿಸಿದ ಅವರು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ಕ್ಷುಲ್ಲಕ ರಾಜಕಾರಣದಿಂದ ದೂರ ಉಳಿಯದಿದ್ದರೆ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಮಾಜಿ ಸಚಿವ ಹಾಗೂ ಹಿರಿಯ ಮುಖಂಡ ಎಸ್‌ಆರ್ ಪಾಟೀಲ್, ಉತ್ತರ ಕರ್ನಾಟಕ ಭಾಗದ ನಾಯಕರೊಬ್ಬರು ಸಿಎಂ ಸ್ಥಾನಕ್ಕೆ ಬಂದರೆ ಸ್ವಾಗತಿಸುವುದಾಗಿ ಹೇಳಿದ್ದಾರೆ.
'ಪ್ರತಿಯೊಬ್ಬ ಶಾಸಕರಿಗೂ ಸಿಎಂ ಆಗುವ ಹಂಬಲವಿರುತ್ತದೆ. ಯಾರೂ ಋಷಿಗಳಲ್ಲ. ಪ್ರತಿಷ್ಠಿತ ಹುದ್ದೆಗೆ ಬೇಡಿಕೆ ಇಡುವುದು ಸಹಜ. ಸಿಎಂ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು, ಅಧಿಕಾರ ಹಂಚಿಕೆ ಬಗ್ಗೆ ನನಗೆ ಗೊತ್ತಿಲ್ಲ' ಎಂದರು.
ಕಾಲಕಾಲಕ್ಕೆ ಹಲವಾರು ಕಾಂಗ್ರೆಸ್ ನಾಯಕರು ಸಿಎಂ ಹುದ್ದೆಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಉಪ ಮುಖ್ಯಮಂತ್ರಿ ಶಿವಕುಮಾರ್ ಜೊತೆಗೆ ರಾಜ್ಯದ ಗೃಹ ಸಚಿವ ಜಿ ಪರಮೇಶ್ವರ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್, ಆರ್‌ಡಿಪಿಆರ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.
Advertisement